ಗದಗ: ಉದ್ಯೋಗ ಖಾತ್ರಿ ಯೋಜನೆ ಹಲವಾರು ರೀತಿಯ ಲಾಭ ಸಾರ್ವಜನಿಕರಿಗೆ ಉಂಟು ಮಾಡಿದ್ದು, ಸದ್ಯ ಶಾಲಾ ಕಾಲೇಜು ಪ್ರಾರಂಭದ ಈ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚಕ್ಕೂ ಸಹಕಾರಿಯಾಗಿದ್ದು, ಉದ್ಯೋಗ ಖಾತ್ರಿ ಕೂಲಿಯಿಂದ ಬಂದ ಹಣದಲ್ಲಿ ಕಾಲೇಜು ಫೀ ಭರಿಸಿ ಬದುಕು ಕಟ್ಟಿಕೊಂಡ ಗದಗ ತಾಲೂಕಿನಲ್ಲಿ ವರದಿಯಾಗಿದೆ.
ಈ ವಿದ್ಯಾರ್ಥಿಗಳು ಗುದ್ದಲಿ, ಸಲಾಕೆ ಹಿಡಿದು ತಮ್ಮ ಮುಂದಿನ ವಿದ್ಯಾಭ್ಯಾಸದ ಜತೆಗೆ ಸಹೋದರರ ಓದಿಗೂ ನೆರವಾಗಿದ್ದಾರೆ. ಅದರಲ್ಲೂ ಕಳೆದ ವರ್ಷ ನರೇಗಾ ಯೋಜನೆಯಡಿ ದುಡಿದು ಬಂದ ಹಣದಿಂದ ಪದವಿ ಮುಗಿಸಿದ ವಿಜಯಲಕ್ಷ್ಮಿ ಶಿವಸಿಂಪಿಗೇರ ನರೇಗಾ ಸಮುದಾಯ ಕಾಮಗಾರಿಗಳಲ್ಲಿ ನಾಲ್ವರು ಕುಟುಂಬ ಸದಸ್ಯರೊಂದಿಗೆ ತೊಡಗಿಕೊಂಡು ಕುಟುಂಬದ ನಿರ್ವಹಣೆಗೂ ನೆರವಾಗಿದ್ದಾಳೆ. ಸಹೋದರ ಬಿ.ಎ ಎರಡನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದು, ಆತನ ಫೀಸ್ ಕಟ್ಟಲು ಯೋಜನೆಯಡಿ ಸಹ ನರೇಗಾ ನೆರವಾಗಿದೆ ಎನ್ನುತ್ತಾರೆ ವಿಜಯಲಕ್ಷಿ ಹಾಗೂ ಅವರ ಕುಟುಂಬಸ್ಥರು.
ನರೇಗಾ ಕೂಲಿ ಮೊತ್ತ ₹370ಗಳಿಗೆ ಹೆಚ್ಚಳವಾಗಿರುವುದು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದೆ. ಆ ಮೂಲಕ ಪದವಿ ಶಿಕ್ಷಣಕ್ಕೆ ಹಣ ಹೊಂದಿಸಲು ಪರಿತಪಿಸುತ್ತಿದ್ದ ಬಡಕುಟುಂಬದ ವಿದ್ಯಾರ್ಥಿಗಳಿಗೆ ನರೇಗಾ ಯೋಜನೆ ಕೈಹಿಡಿದಿದೆ. ಶುಲ್ಕ ಕಟ್ಟಲು ಹಾಗೂ ಕಲಿಕೆಯ ನಂತರ ಕೆಲಸ ಹುಡುಕಲು ಉದ್ಯೋಗಖಾತ್ರಿ ಯೋಜನೆ ನೆರವಾಗಿದ್ದು, ತಮ್ಮ ಶಿಕ್ಷಣದ ಜತೆಗೆ ಸಹೋದರ ಸಹೋದರಿಯರ ವ್ಯಾಸಂಗ ಮುಂದುವರೆಸಲು ಸಹ ಭರವಸೆ ಮೂಡಿಸಿದೆ ಎಂದು ವಿದ್ಯಾರ್ಥಿನಿ ವಿಜಯಲಕ್ಷ್ಮಿ ಶಿವಸಿಂಪಿಗೇರ ಹೇಳಿದ್ದಾರೆ.ಗಂಡು-ಹೆಣ್ಣಿಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುವದು. ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಉದ್ಯೋಗ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ಬೇರೆ ರಾಜ್ಯ, ಜಿಲ್ಲೆ ಹಾಗೂ ನಗರಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಎಲ್ಲರೂ ತಮ್ಮ ಸ್ವಂತ ಊರಿನಲ್ಲಿಯೇ ಇದ್ದು ಉದ್ಯೋಗ ಮಾಡಿ ಕೂಲಿ ಪಡೆಯಬಹುದು ಎಂದು ಗದಗ ಜಿಪಂ ಸಿಇಒ ಭರತ್. ಎಸ್ ತಿಳಿಸಿದ್ದಾರೆ.