ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ತಾಯಿ ಹಾಲು ಬ್ಯಾಂಕ್, ಸಹಜ ಹೆರಿಗೆ ಆರೈಕೆ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿ, ಹೆರಿಗೆಯಾದ ನಂತರದಲ್ಲಿ ಎಷ್ಟೋ ತಾಯಂದಿರಲ್ಲಿ ಹಾಲಿನ ಕೊರತೆ ಕಾಡುತ್ತದೆ. ಶಿಶುಗಳಿಗೆ ಅಗತ್ಯವಿರುವಷ್ಟು ಹಾಲು ದೊರಕುವುದಿಲ್ಲ. ಇನ್ನೂ ಹಲವು ತಾಯಂದಿರಲ್ಲಿ ಮಗುವಿಗೆ ಸಾಕಾಗಿ ಉಳಿಯುವಷ್ಟು ಹಾಲಿರುತ್ತದೆ. ಈ ಹೆಚ್ಚುವರಿ ಹಾಲನ್ನು ನೀಡುವ ಕುರಿತಂತೆ ತಾಯಂದಿರ ಮನವೊಲಿಸಿ ಮಾರ್ಗದರ್ಶನ ನೀಡಬೇಕು. ಹಾಲು ವ್ಯರ್ಥವಾಗಲು ಬಿಡಬಾರದು. ಹಾಲನ್ನು ದಾನವಾಗಿ ನೀಡುವುದರಿಂದ ಆರೋಗ್ಯಕ್ಕೆ ಯಾವ ಅಪಾಯವೂ ಇಲ್ಲ. ಹೆಚ್ಚುವರಿ ಹಾಲು ಎದೆಯಲ್ಲಿ ಉಳಿಯುವುದರಿಂದ ಆರೋಗ್ಯ ಕೆಡುತ್ತದೆ. ಅದನ್ನು ದಾನವಾಗಿ ನೀಡಿದರೆ ಹಾಲಿನ ಕೊರತೆ ಎದುರಿಸುತ್ತಿರುವ ಮಕ್ಕಳಿಗೆ ಅಮೃತಪಾನ ನೀಡಿದಂತಾಗುತ್ತದೆ ಎಂದು ಮನವರಿಕೆ ಮಾಡಬೇಕು ಎಂದರು.
ತಾಯಿ ಒಂದು ಮಗುವನ್ನು ಒಂಬತ್ತು ತಿಂಗಳು ಹೊತ್ತು ಆರೋಗ್ಯವಂತ ಮಗುವನ್ನು ಸಮಾಜಕ್ಕೆ ನೀಡುವ ಪ್ರಕ್ರಿಯೆ ಅತಿ ಮಹತ್ವವಾದುದು. ಇದರಲ್ಲಿ ತಾಯಿಯ ಜವಾಬ್ದಾರಿ, ಅನುಭವಿಸುವ ನೋವುಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುವುದು ಎಲ್ಲರ ಕರ್ತವ್ಯ. ಅದಕ್ಕೆ ಪೂರಕವಾದ ಎಲ್ಲ ಸೌಲಭ್ಯ, ವ್ಯವಸ್ಥೆಗಳನ್ನು ಮಾಡುವ ಅಗತ್ಯವಿದೆ ತಿಳಿಸಿದರು.ತಾಯಿ ಹಾಲಿನ ಬ್ಯಾಂಕ್‌ಗೆ ಇನ್ನಷ್ಟು ಉಪಕರಣಗಳನ್ನು ಅಳವಡಿಸಬೇಕಿದೆ. ಅದು ಸರ್ಕಾರದ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ಅದು ಬರುವುದು ವಿಳಂಬವಾದರೆ ನಾನೂ ಸೇರಿದಂತೆ ಶಾಸಕರೆಲ್ಲರೂ ಸಿಎಸ್‌ಆರ್ ಅನುದಾನದಿಂದ ಉಪಕರಣಗಳನ್ನು ತರಿಸಲಾಗುವುದು ಎಂದು ನುಡಿದರು.
ಸಾಮಾನ್ಯರಿಗೂ ಉತ್ತಮ ಸೌಲಭ್ಯ ಸಿಗಲೆಂಬ ಆಶಯ: ಕೆ.ಆರ್.ನಂದಿನಿ
ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯರಿಗೆ ಅತ್ಯುತ್ತಮವಾದ ವೈದ್ಯಕೀಯ ಸೌಲಭ್ಯಗಳು ಸಿಗಬೇಕೆಂಬ ಆಶಯದೊಂದಿಗೆ ಸಹಜ ಹೆರಿಗೆ ಘಟಕವನ್ನು ತೆರೆಯಲಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿದರು.
ತಾಯಿ ಮತ್ತು ಮಗುವಿನನ ಸಾವಿಗೆ ಕಾರಣವಾಗುವ ಅಂಶಗಳ ಕುರಿತಂತೆ ತಜ್ಞ ವೈದ್ಯರಿಂದ ಮಾಹಿತಿ ಪಡೆದು ವಿಸ್ತೃತ ಚರ್ಚೆ ನಡೆಸಿ ಸ್ವಂತ ಅನುಭವದ ಆಧಾರದ ಮೇಲೆ ತಾಯಿ ಹಾಲು ಬ್ಯಾಂಕ್ ಮತ್ತು ಸಹಜ ಹೆರಿಗೆ ಘಟಕವನ್ನು ತೆರೆಯಲಾಗಿದೆ. ಎಂಟರಿಂದ ಹತ್ತು ತಿಂಗಳ ಹಿಂದೆ ಯೋಜನೆ ರೂಪದಲ್ಲಿದ್ದದ್ದು ಇದೀಗ ಕಾರ್ಯಗತಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.