ಚಿಕ್ಕಬಳ್ಳಾಪುರದಲ್ಲಿ ಸಂಘಟನೆಗೆ ಕೊರತೆಯಿಲ್ಲ. ಆದರೆ ಸಮಾಜವನ್ನು ಒಗ್ಗೂಡಿಸಬೇಕಾಗಿದೆ. ಇದಕ್ಕಾಗಿ ಯುವಕರು ಮುಂದೆ ಬರಬೇಕು ಮತ್ತು ಮಹಿಳೆಯರು ನಾಯಕತ್ವ ವಹಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಸಂಘಟಿತ ಶಕ್ತಿ ಬೆಳೆಸಬೇಕು. ಆಗ ನಮ್ಮ ಸಮಾಜ ಬೆಳೆಯುವುದಲ್ಲದೇ ಇತರ ಸಮಾಜಗಳನ್ನು ನಮ್ಮೊಂದಿಗೆ ಅಭಿವೃದ್ಧಿಯ ಪಥದತ್ತ ತೆಗೆದು ಕೊಂಡು ಹೋಗಬಹುದು
-ಕೆಂಪೇಗೌಡ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿ ಆದಿಚುಂಚನಗಿರಿಶ್ರೀ ಕರೆ । ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಒಕ್ಕಲಿಗ ಸಂಘದ ಉತ್ತಮ ನಿರ್ವಹಣೆಗೆ ಮೆಚ್ಚುಗೆ
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಸಂಪತ್ತನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಸಂಘಗಳ ಅಗ್ರಪಂಕ್ತಿಯಲ್ಲಿ ಮೊದಲು ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರು ಸಂಘಗಳು ನಿಲ್ಲುತ್ತವೆ. ಈ ಎರಡೂ ಒಕ್ಕಲಿಗರ ಸಂಘಗಳು ಶತಮಾನಕ್ಕೂ ಹಿಂದಿನ ಸಂಘಗಳಾಗಿವೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.
ನಗರದ ಬಿಬಿ ರಸ್ತೆಯ ಒಕ್ಕಲಿಗರ ಕಲ್ಯಾಣ ಮಂಟಪದ ಆವರಣದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಬುಧವಾರ ನಡೆದ ಶ್ರೀ ಕೆಂಪೇಗೌಡ ವಾಣಿಜ್ಯ ಸಂಕೀರ್ಣ ಉದ್ಘಾಟನೆ ನೆರವೇರಿಸಿ, ಆಶೀರ್ವಚನ ನೀಡಿ ಇಂದು ಒಕ್ಕಲಿಗರ ಸಂಘ ಸದೃಢವಾಗಿ ಉಳಿದು ಬೆಳೆದುಕೊಂಡು ಬರಲು ಕೆ.ಬಿ. ಪಿಳ್ಳಪ್ಪ ಮತ್ತು ಡಿ ಹೊಸೂರು ಚಡ್ಡಿ(ನಿಕ್ಕರ್) ಪಿಳ್ಳಪ್ಪ ಕಾರಣ ಎಂಬುದನ್ನು ಮರೆಯಬಾರದು ಎಂದರು.
ಸುಮಾರು 80 ವರ್ಷ ಇತಿಹಾಸವಿರುವ ಒಕ್ಕಲಿಗರ ಸಂಘದ ಕಲ್ಯಾಣ ಮಂಟಪ ಇಂದು ಬೃಹದಾಕಾರವಾಗಿ ನಿಂತಿರುವ ಈ ವಾಣಿಜ್ಯ ಕಟ್ಟಡದ ಜಾಗವನ್ನು ದಾನವಾಗಿ ನೀಡಿ ಉಳಿಸಿಕೊಂಡು ಬಂದಿರುವ ಕೀರ್ತಿ ನಾರಾಯಣಪ್ಪ ಮತ್ತು ಪೊಲೀಸ್ ದೊಡ್ಡಪ್ಪ ಎಂಬುವರನ್ನು ಈಗ ನೆನೆಯಲೇಬೇಕು. ಒಕ್ಕಲುತನದಲ್ಲಿ ಮಣ್ಣಿನ ವಾಸನೆಯೊಂದಿಗೆ ಬೆಳೆಯುತ್ತಿರುವ ಸಮುದಾಯಕ್ಕೆ ಕ್ಷಮಿಸುವ ಗುಣ ಇದೆ. ಮತ್ತೊಬ್ಬರಿಗೆ ಅಯ್ಯೋ ಪಾಪ ಎಂದು ಅನ್ನ ನೀಡಿ ಕಾಪಾಡುವ ಗುಣ ಇದೆ. ಇಂತಹ ಸಮುದಾಯದಲ್ಲಿ ಹುಟ್ಟಿ ರಾಜಕಾರಣಿಗಳಾಗಿ ಜಿಲ್ಲೆಯನ್ನಾಳುತ್ತಿರುವ ಇಬ್ಬರು ಸುಧಾಕರ್‌ಗಳು ಇಡೀ ಜಿಲ್ಲೆಗೆ ಬೆಳಕು ನೀಡುತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಾಥ ಸ್ವಾಮೀಜಿ, ಸಂಸದ ಡಾ.ಕೆ. ಸುಧಾಕರ್, ಸಚಿವ ಡಾ.ಎಂ.ಸಿ. ಸುಧಾಕರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ. ರಮೇಶ್. ಯಲುವಹಳ್ಳಿ ಎನ್.ರಮೇಶ್, ಕೋನಪ್ಪರೆಡ್ಡಿ, ಬೀಜನಿಗಮದ ಅಧ್ಯಕ್ಷ ಎಂ. ಆಂಜಿನಪ್ಪ, ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ಕಾರ್ಯದರ್ಶಿ ಚನ್ನಪ್ಪರೆಡ್ಡಿ, ನಿರ್ದೇಶಕರಾದ ಎಂ.ಪ್ರಕಾಶ್, ಚದಲಪುರ ನಾರಾಯಣಸ್ವಾಮಿ, ಬಿ.ಎಂ. ರಾಮಸ್ವಾಮಿ, ಬಿ.ಕೆ. ಮಂಜುನಾಥ್, ಎ.ವಿ. ಬೈರೇಗೌಡ,ಕೆ.ಪಿ. ಶ್ರೀನಿವಾಸಮೂರ್ತಿ, ವಿ.ನಂಜುಂಡಪ್ಪ, ನಾರಾಯಣಸ್ವಾಮಿ, ನಾಗರಾಜ್, ಮುಖಂಡರಾದ ಕೆ.ವಿ. ನಾಗರಾಜ್, ಮರಳಕುಂಟೆ ಕೃಷ್ಣಮೂರ್ತಿ, ಎ. ಗಜೇಂದ್ರ ಮತ್ತಿತರರು ಇದ್ದರು.
ಬಾಕ್ಸ್...
ಶ್ರೀಗಳ ಅಕ್ಕಪಕ್ಕ ಸುಧಾಕರ್‌ದ್ವಯರು: ಬದ್ಧ ವೈರಿಗಳಂತಿರುವ ಇಬ್ಬರನ್ನೂ ಅಕ್ಕ ಪಕ್ಕ ಕೂರಿಸಿಕೊಂಡು ಇಬ್ಬರ ಬೆನ್ನ ಮೇಲೆ ಎರಡೂ ಕೈಯಿಟ್ಟು ಪ್ರಶಂಶೆ ವ್ಯಕ್ತಪಡಿಸುತಿದ್ದಂತೆ ಇಬ್ಬರ ಮೊಗದಲ್ಲೂ ಸಂತಸ ವ್ಯಕ್ತವಾಗಿತ್ತು. ಇಂಥದೊಂದು ಸನ್ನಿವೇಶವನ್ನು ನಿರೀಕ್ಷಿಸುತಿದ್ದ ಇಬ್ಬರು ನಾಯಕರ ಬೆಂಬಲಿಗರು ಚಪ್ಪಾಳೆ ತಟ್ಟಿ ಸ್ವಾಮೀಜಿ ಮಾತನ್ನು ಸ್ವಾಗತಿಸಿದರು. ಸಮಾಜ ಎದುರಿಸುತ್ತಿರುವ ದೊಡ್ಡ ಸವಾಲು ಸಂಘಟನೆಯ ಕೊರತೆ. ಇಂದು ಚಿಕ್ಕಬಳ್ಳಾಪುರದಲ್ಲಿ ಸಂಘಟನೆಗೆ ಕೊರತೆಯಿಲ್ಲ. ಆದರೆ ಸಮಾಜವನ್ನು ಒಗ್ಗೂಡಿಸಬೇಕಾಗಿದೆ. ಇದಕ್ಕಾಗಿ ಯುವಕರು ಮುಂದೆ ಬರಬೇಕು ಮತ್ತು ಮಹಿಳೆಯರು ನಾಯಕತ್ವ ವಹಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಸಂಘಟಿತ ಶಕ್ತಿ ಬೆಳೆಸಬೇಕು. ಆಗ ನಮ್ಮ ಸಮಾಜ ಬೆಳೆಯುವುದಲ್ಲದೇ ಇತರ ಸಮಾಜಗಳನ್ನು ನಮ್ಮೊಂದಿಗೆ ಅಭಿವೃದ್ಧಿಯ ಪಥದತ್ತ ತೆಗೆದು ಕೊಂಡು ಹೋಗಬಹುದು ಎಂದು ಶ್ರೀಗಳು ಹೇಳಿದರು. ಸಿಕೆಬಿ-3
ನಗರದ ಬಿಬಿ ರಸ್ತೆಯ ವಕ್ಕಲಿಗರ ಕಲ್ಯಾಣ ಮಂಟಪದ ಆವರಣದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ನಡೆದ ಶ್ರೀ ಕೆಂಪೇಗೌಡ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆರ್ಶೀವಚನ ನೀಡಿದರು. ಶ್ರೀಗಳ ಅಕ್ಕಪಕ್ಕ ಸಚಿವ ಡಾ. ಸುಧಾಕರ್, ಸಂಸದ ಡಾ. ಸುಧಾಕರ್ ಮತ್ತಿತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.