ಸಿಇಟಿ ಕೌನ್ಸಿಲಿಂಗ್‌ ಬಗ್ಗೆ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅರಿವು

KannadaprabhaNewsNetwork | Updated : Jul 02 2025, 12:22 AM IST
30ಎಚ್ಎಸ್ಎನ್13 : ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ’ಯುಜಿಸಿಇಟಿ ೨೦೨೫: ಸೀಟು ಹಂಚಿಕೆ ಮಂಥನ’ ಕಾರ್ಯಾಗಾರಕ್ಕೆ ವಿದ್ಯಾರ್ಥಿನಿ ಹಾಗೂ ಪೋಷಕರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. | Kannada Prabha

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಯುವ ವೃತ್ತಿಪರ ಕೋರ್ಸುಗಳ ಸೀಟು ಹಂಚಿಕೆ ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯದ ವಿವಿಧೆಡೆ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಈ ಬಾರಿ ಸೀಟು ಹಂಚಿಕೆ ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಯುವ ವೃತ್ತಿಪರ ಕೋರ್ಸುಗಳ ಸೀಟು ಹಂಚಿಕೆ ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯದ ವಿವಿಧೆಡೆ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಈ ಬಾರಿ ಸೀಟು ಹಂಚಿಕೆ ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ತಿಳಿಸಿದರು. ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ’ಯುಜಿಸಿಇಟಿ ೨೦೨೫: ಸೀಟು ಹಂಚಿಕೆ ಮಂಥನ’ ಕಾರ್ಯಾಗಾರದಲ್ಲಿ ವಿಡಿಯೋ ಸಂದೇಶ ನೀಡಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಕೊರತೆ ಇರುವುದನ್ನು ದುರುಪಯೋಗಪಡಿಸಿಕೊಂಡು ಸೈಬರ್‌ ಕೆಫೆಗಳು, ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಆಯ್ಕೆಗಳನ್ನು ನಮೂದಿಸುವ ದುಷ್ಕೃತ್ಯದಲ್ಲಿ ತೊಡಗಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿತ್ತು. ಇಂತಹ ವಂಚನೆಗಳಿಗೆ ಕಡಿವಾಣ ವಿಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ವಿದ್ಯಾರ್ಥಿಗಳು ಎಂಜಿನಿಯರಿಂಗ್ ಓದಲು ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡರೆ ಕಡಿಮೆ ವೆಚ್ಚದಲ್ಲಿ ಪದವಿ ಪೂರ್ಣಗೊಳಿಸಬಹುದು ಎಂದು ಸಲಹೆ ನೀಡಿದರು.ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಆರ್‌. ಟಿ. ದ್ಯಾವೇಗೌಡ ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಮೂಲಸೌಕರ್ಯವಿದೆ. ೩೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಓದಿ ಜಗತ್ತಿನಾದ್ಯಂತ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಸಿ.ಆರ್. ಜಗದೀಶ್, ಖಜಾಂಚಿ ಪಾರ್ಶ್ವನಾಥ್, ಪ್ರಾಂಶುಪಾಲ ಡಾ.ಎ.ಜೆ.ಕೃಷ್ಣಯ್ಯ, ಮಲೆನಾಡು ಕಾಲೇಜು ನಿರ್ದೇಶಕ ಡಾ. ಎಸ್. ಪ್ರದೀಪ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಲತೇಶ್ ಎಂ.ಸಿ, ಡೀನ್ ಡಾ.ಕೆ.ಆರ್‌. ದುಶ್ಯಂತ್ ಕುಮಾರ್‌ ಸಹ ಡೀನ್ ಡಾ.ಇಂದಿರಾ ಬಹದ್ದೂರ್‌, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.