ಕನ್ನಡಪ್ರಭ ವಾರ್ತೆ, ತುಮಕೂರುನಗರದ 17ನೇ ವಾರ್ಡ್ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಶಾಂತಿನಗರದ ಅಬಿಬಿಯಾ ಮಸೀದಿ ಬಳಿ ಜಿಲ್ಲಾ ಕಾಂಗ್ರೆಸ್ ಹಾಗೂ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ಜಾಗೃತಿ ಆಂದೋಲನ ನಡೆಸುವ ಮೂಲಕ ಸಹಾಯ ಕೇಂದ್ರ ತೆರೆದು ಸಾರ್ವಜನಿಕರಿಗೆ ಅರಿವು ಮೂಡಿಸಿ ಸೇವೆ ಒದಗಿಸಲಾಯಿತು.17ನೇ ವಾರ್ಡ್ ನಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತ ಆಂದೋಲನದ ವೇಳೆ ಮಾತನಾಡಿದ ಮಾಜಿ ಮಹಾಪೌರರಾದ ಗೀತಾ ರುದ್ರೇಶ್ ಅವರು, ರಾಜ್ಯದಲ್ಲಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಎಸ್‌ಐಆರ್ ಪ್ರಕ್ರಿಕೆಯ ಚುರುಕಿನಿಂದ ನಡೆಯುತ್ತಿದೆ. ಹಾಗೆಯೇ ನಗರದಲ್ಲೂ ಸಹ ಜಿಲ್ಲಾ ಕಾಂಗ್ರೆಸ್ ಮತ್ತು ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಪ್ರತಿದಿನ ವಿವಿಧ ವಾರ್ಡಗಳನ್ನು ಒಗ್ಗೂಡಿಸಿ ಮತದಾರರಿಗೆ ಗಣತಿ ನಮೂನೆ ತುಂಬುವ ಸೇವೆ ಒದಗಿಸಲಾಗುತ್ತಿದೆ ಎಂದರು. ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಹಾಲಪ್ಪ ಪ್ರತಿಷ್ಠಾನದ ಮುರುಳೀಧರ ಹಾಲಪ್ಪ, ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಇಕ್ಬಾಲ್ ಅಹಮದ್ ರವರ ನೇತೃತ್ವದಲ್ಲಿ ಎಸ್‌ಐಆರ್ ಕುರಿತ ಜಾಗೃತಿ ಆಂದೋಲನ ನಡೆಯುತ್ತಿದೆ. ನಗರದ ಅರ್ಹ ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಎಸ್‌ಐಆರ್ ಪ್ರಕ್ರಿಯೆ 17ನೇ ವಾರ್ಡ್ ನಲ್ಲಿ ನಡೆಯುತ್ತಿದೆ. ಈಗಾಗಲೇ ನಮ್ಮ ವಾರ್ಡ್ ವ್ಯಾಪ್ತಿಯ ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಮತದಾರರು ಗಣತಿ ನಮೂನೆಯನ್ನು ಮನೆಯಲ್ಲಿ ಇಟ್ಟುಕೊಳ್ಳದೆ ಅರ್ಜಿಯನ್ನು ಭರ್ತಿ ಮಾಡಿ ವಾಪಸ್ ಕೊಡುವ ಕೆಲಸ ಮಾಡಬೇಕು ಎಂದು ಕೋರಿದರು. ಎಸ್.ಐ.ಆರ್. ಎಂಬುದು ಒಂದು ಪ್ರಮುಖ ಕಾರ್ಯಕ್ರಮ. ನಮ್ಮ ಸಂವಿಧಾನ ಬದ್ಧ ಹಕ್ಕನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಹಳ ಮಹತ್ವ ಪಡೆದಿದೆ. ನಮ್ಮ ವಾರ್ಡ್ ಮತದಾರರಿಂದ ಒಳ್ಳೆಯ ಸ್ಪಂದನೆ ವ್ಯಕ್ತವಾಗಿದೆ. ಚುನಾವಣಾ ಆಯೋಗದಿಂದ ನೇಮಕವಾಗಿರುವ ಬಿಎಲ್‌ಒಗಳು ಹಾಗೂ ರಾಜಕೀಯ ಪಕ್ಷಗಳ ವತಿಯಿಂದ ನೇಮಕವಾಗಿರುವ ಬಿಎಲ್‌ಎ-2 ಗಳು ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ಎಸ್.ಐ.ಆರ್. ಪ್ರಕ್ರಿಯೆಗೆ ಆಗಸ್ಟ್ 8 ಕೊನೆಯ ದಿನವಾಗಿದ್ದು, ಮತದಾರರು ಅಲ್ಲಿಯವರೆಗೆ ಕಾಯದೆ, ಆದಷ್ಟು ಶೀಘ್ರವಾಗಿ ತಮ್ಮ ಫಾರಂ ತುಂಬಿ ಬಿಎಲ್‌ಒ ಗಳಿಗೆ ನೀಡಿ, ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ಈ ಎಸ್‌ಐಆರ್ ಉದ್ದೇಶವಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ವತಿಯಿಂದ ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇಂತಹ ಸಹಾಯ ಕೇಂದ್ರಗಳನ್ನು ತೆರದು ಜನರಿಗೆ ಸೇವೆ ಒದಗಿಸಲಾಗುತ್ತಿದೆ. ಒಂದು ವೇಳೆ ಎಸ್.ಐ.ಆರ್ ನಂತರ ಯಾವುದೇ ಕುಟುಂಬ ಹಾಗೂ ವ್ಯಕ್ತಿ ಮತದಾರರ ಪಟ್ಟಿಯಿಂದ ಹೊರಗೆ ಉಳಿದರೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ವತಿಯಿಂದ ಸಿಗುವ ಆರ್ಥಿಕ, ಶೈಕ್ಷಣಿಕ ಸವಲತ್ತುಗಳಿಂದಲೂ ವಂಚಿತರಾಗಲಿದ್ದೀರಿ, ಹಾಗಾಗಿ ಎಲ್ಲರೂ ಎಚ್ಚೆತ್ತು ಎಸ್.ಐ.ಆರ್‌ನಲ್ಲಿ ಪಾಲ್ಗೊಳ್ಳುವಂತೆ ಕೋರಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್ ಅಹಮದ್, ಶಿವಾಜಿ, ರುದ್ರೇಶ್, ಗೀತಮ್ಮ ಮತ್ತಿತರರು ಪಾಲ್ಗೊಂಡಿದ್ದರು.