ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ವಿಬಿ- ಜಿ ರಾಮ್ ಜಿ ಯೋಜನೆ ಜಾಗೃತಿ ಕಾರ್ಯಾಗಾರ ಉದ್ಘಾಟನೆ
ಜನಸ್ನೇಹಿಯಾದ ವಿಬಿ-ಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಅಪಪ್ರಚಾರಗಳನ್ನು ತಡೆಯಲು ಯೋಜನೆಯ ವಾಸ್ತವ ಸಂಗತಿಗಳನ್ನು ಜನರಿಗೆ ಮನವರಿಕೆ ಮಾಡಬೇಕಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪುಜಾರಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಬಿ- ಜಿ ರಾಮ್ ಜಿ ಯೋಜನೆ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸುಳ್ಳು ಹೇಳಿ ಹೇಳಿ ಸತ್ಯವನ್ನು ಮರೆಮಾಚಲು ಕಾಂಗ್ರೆಸ್ ನಡೆಸುತ್ತಿ ರುವ ಪ್ರಯತ್ನದ ವಿರುದ್ಧ ಯೋಜನೆಯ ವಾಸ್ತವ ಸಂಗತಿಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ದೇಶದಲ್ಲಿ ಈ ರೀತಿಯ ಕಾರ್ಯಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.ಹಿಂದಿನ ಕಾಯ್ದೆಯಲ್ಲಿ ಒಂದು ನೂರು ದಿನ ಉದ್ಯೋಗ ನೀಡಲಾಗುತಿತ್ತು. ಈಗ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆ ಯಲ್ಲಿ 125 ದಿನ ಉದ್ಯೋಗ ನೀಡಲಾಗುತ್ತಿದೆ. ಯಾರು ದುಡಿಯುತ್ತಾರೋ ಅವರಿಗೆ ಒಂದೇ ವಾರದಲ್ಲಿ ವೇತನ ನೀಡಲು ಅವಕಾಶ ನೀಡಲಾಗಿದೆ. ಆದರೆ, ಕಾಂಗ್ರೆಸ್ ಜಾರಿಗೆ ತಂದಿದ್ದ ಯೋಜನೆಯಲ್ಲಿ ವಿಳಂಬವಾಗುತ್ತಿತ್ತು ಎಂದರು.
ರಾಜ್ಯ ಸರ್ಕಾರ ಇಚ್ಚಿಸಿದಲ್ಲಿ ಕೃಷಿ ಚಟುವಟಿಕೆಗಳು ನಡೆಯುವ ಸಂದರ್ಭದಲ್ಲಿ 60 ದಿನಗಳ ರಜೆಯನ್ನು ಕಾರ್ಮಿಕರಿಗೆ ನೀಡಲು ಹೊಸ ಕಾಯ್ದೆಯಲ್ಲಿ ಅವಕಾಶ ನೀಡಲಾಗುತ್ತಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಾಕಾರಣ ಹೇಳಿಕೆ ನೀಡುತ್ತಿರುವುದರ ವಿರುದ್ಧ ಜನರನ್ನು ಜಾಗೃತಗೊಳಿಸಬೇಕು ಎಂದು ಕರೆ ನೀಡಿದರು.ಯಾವುದೇ ಹೊಸ ಸರ್ಕಾರ ಬಂದ ಸಂದರ್ಭದಲ್ಲಿ ಹೊಸ ಯೋಜನೆ ರೂಪಿಸುವುದು ಸಹಜ. ಅದರಂತೆ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೊಳಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಗಾಂಧೀ ಜಿ ಹೆಸರು ಬದಲಾಯಿಸಿದ್ದರ ಬಗ್ಗೆ ಈಗ ಕೇಂದ್ರ ಸರ್ಕಾರ ತಂದಿರುವ ಯೋಜನೆಗೆ ದುರುದ್ದೇಶದಿಂದ ಆರೋಪ ಮಾಡುತ್ತಿದೆ ಎಂದು ಹರಿಹಾಯ್ದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ಆರ್. ದೇವರಾಜಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ- ಜಿ ರಾಮ್ ಜಿ ಯೋಜನೆ ಬಗ್ಗೆ ಜಿಲ್ಲೆಯ ಪ್ರತಿ ಮಂಡಳಗಳಲ್ಲಿ ಸಭೆ ನಡೆಸಿ ಸತ್ಯ ಸಂಗತಿ ತಿಳಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್. ಸಿ. ಕಲ್ಮರುಡಪ್ಪ ಮಾತನಾಡಿ, ಗಾಂಧೀಜಿಯವರ ರಾಮ ರಾಜ್ಯದ ಕನಸು ನನಸು ಮಾಡಲು ವಿಬಿ-ಜಿ ರಾಮ್ ಜಿ ಸ್ವರೂಪ ಮಾರ್ಪಡಿಸಿ ಭ್ರಷ್ಟಚಾರ ಮತ್ತು ಪಟ್ಟಭದ್ರ ಹಿತಾಸಕ್ತಿ ನಿಯಂತ್ರಿಸಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ ಎಂದು ಹೇಳಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಕಾರ್ಯದರ್ಶಿ ಚಂಪಾ ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ. ನರೇಂದ್ರ, ಪುಣ್ಯಪಾಲ್ ಉಪಸ್ಥಿತರಿದ್ದರು.