ಅರಸೀಕೆರೆ: ಇಂದಿನ ಯುವಪೀಳಿಗೆ ದೇಶದ ಭವಿಷ್ಯವಾಗಿರುವಾಗ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಪ್ರೇರೇಪಿಸಿ ರೂಪಿಸುವ ಜವಾಬ್ದಾರಿ ಪೋಷಕರು ಮತ್ತು ಸಮಾಜದ ಮೇಲಿದ್ದು, ಮಕ್ಕಳ ಜೀವನ ಮೌಲ್ಯಾಧಾರಿತವಾಗಿರಬೇಕು ಎಂದು ವಕೀಲ ಪಿ.ಎಸ್. ನವೀನ್ ನಾಯ್ಕ ಅಭಿಪ್ರಾಯಪಟ್ಟರು.
ಮಾದಕ ದ್ರವ್ಯಗಳ ಬಳಕೆ ಸಮಾಜದ ಆರೋಗ್ಯಕ್ಕೆ ಹಾಗೂ ಭವಿಷ್ಯಕ್ಕೆ ಅಪಾಯಕಾರಿಯಾಗಿದ್ದು, ಗಾಂಜಾ ಮತ್ತು ಡ್ರಗ್ಸ್‌ಗಳ ವ್ಯಾಪ್ತಿ ಯುವಜನತೆಯಲ್ಲಿ ಹೆಚ್ಚುತ್ತಿರುವುದು ಚಿಂತಾಜನಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಈ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಪೊಲೀಸ್ ಇಲಾಖೆ ಮಾತ್ರವಲ್ಲ, ಸಾರ್ವಜನಿಕರು, ಶಾಲೆಗಳು, ಪೋಷಕರು ಮತ್ತು ಸಂಘ ಸಂಸ್ಥೆಗಳು ಸಹಕರಿಸಬೇಕು. ಮಾದಕ ವಸ್ತುಗಳ ಖರೀದಿ ಅಥವಾ ಬಳಕೆ ಕುರಿತು ಮಾಹಿತಿ ದೊರೆತರೆ ಸ್ಥಳೀಯ ಪೊಲೀಸ್ ಠಾಣೆ ಅಥವಾ ಕಾನೂನು ಸೇವಾ ಸಮಿತಿಗೆ ತಿಳಿಸಿದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣ ಇಲಾಖೆಯ ಇಸಿಒ ವೈ.ಸಿ. ಮಲ್ಲೇಶ್, ಮೌಲ್ಯಗಳ ಕುಸಿತ ಮತ್ತು ಸಂಸ್ಕಾರಗಳ ಕೊರತೆ ದುಶ್ಚಟಗಳಿಗೆ ಕಾರಣವಾಗುತ್ತಿದೆ. ಮಕ್ಕಳಲ್ಲಿ ನೈತಿಕತೆ ಮತ್ತು ಜವಾಬ್ದಾರಿತನ ಬೆಳೆಸುವುದು ಕುಟುಂಬ ಮತ್ತು ಶಾಲೆಯ ಸಂಯುಕ್ತ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲ ಕೆ. ಸು. ಸುರೇಶ್ ಅಧ್ಯಕ್ಷತೆ ವಹಿಸಿದರು.ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ, ಉಪನ್ಯಾಸಕರಾದ ಬಿ.ಡಿ. ಕುಮಾರ್, ನ್ಯಾಯಾಂಗ ಶ್ರೀನಿವಾಸ್, ಪವಿತ್ರಾ, ಹಾಗೂ ಕಾರ್ಯಕ್ರಮ ಸಂಯೋಜಕರಾದ ಪ್ರಿಯಾಂಕಾ ಉಪಸ್ಥಿತರಿದ್ದರು.