- ಎಐಟಿ ಕಾಲೇಜಿನಲ್ಲಿ ನಡೆದ ’ಫ್ರೆಶರ್ಸ್ ಡೇ- 2025’ ಕಾರ್ಯಕ್ರಮ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಓದಿನ ಪ್ರಾಯದಲ್ಲಿ ದ್ವೇಷ, ಅಸೂಯೆಗೆ ಆಸ್ಪದ ಕೊಡದೇ, ಮನದಾಳದಲ್ಲಿ ಜ್ಞಾನ ದೇಗುಲ ಸ್ಥಾಪಿಸಿ, ಕಲಿಕೆಗೆ ಒತ್ತು ನೀಡಬೇಕು. ರಾಷ್ಟ್ರ ಮೊದಲೆಂಬ ಚಿಂತನೆ ಮೈಗೂಡಿಸಿಕೊಂಡು ಜಗತ್ತಿನ ಎದುರು ಭಾರತವನ್ನು ಸದೃಢಗೊಳಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶ ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ ನುಡಿದರು.ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಪ್ರಥಮ ವರ್ಷದ ಎಂಜಿನಿಯರ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ’ಫ್ರೆಶರ್ಸ್ ಡೇ- 2025’ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.ಮಕ್ಕಳು ಸುಶಿಕ್ಷಿತರಾಗಲು ಪಾಲಕರ ಶ್ರಮ ಬಹಳಷ್ಟಿದೆ. ಯುವ ಪೀಳಿಗೆ ಕೌಶಲ್ಯತೆ, ಕ್ರಿಯಾತ್ಮಕ ಚಟುವಟಿಕೆ, ಶ್ರದ್ಧೆ ಹಾಗೂ ಕಠಿಣ ಪರಿಶ್ರಮದಿಂದ ವ್ಯಾಸಂಗ ನಡೆಸಿದರೆ ಕುಟುಂಬ ಸೇರಿದಂತೆ ಭಾರತ ಬಲಿಷ್ಟವಾಗಲಿದೆ. ಜೊತೆಗೆ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರದ ಗುಣ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಪ್ರಸ್ತುತ ಕಾಲಘಟ್ಟದಲ್ಲಿ ವಿಜ್ಞಾನ ಕ್ಷೇತ್ರ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ. ಜ್ಞಾನ, ತಂತ್ರಜ್ಞಾನ ವ್ಯಾಸಂಗಕ್ಕೆ ಸಮರ್ಪಕವಾಗಿ ವಿದ್ಯಾರ್ಥಿಗಳು ಬಳಸಿಕೊಂಡು ಸಾಧನೆ ಮಾಡಬೇಕು. ಕಲಿಕೆಯೆಂಬ ಹೋರಾಟದಲ್ಲಿ ಕೇವಲ ಅಂಕಗಳಿಗಷ್ಟೇ ಸೀಮಿತ ರಾಗದೇ, ಗುರು ಹಿರಿಯರ ಧ್ಯೇಯಗಳನ್ನು ಎತ್ತಿ ಹಿಡಿಯವಂತ ಕೆಲಸವಾದರೆ ಸಾರ್ಥಕ ಬದುಕು ನಿಮ್ಮದಾಗಲಿದೆ ಎಂದು ತಿಳಿಸಿದರು.ಪೂಜ್ಯ ಬಾಲಗಂಗಾಧರನಾಥ ಶ್ರೀಗಳು 1980 ರ ವೇಳೆಯಲ್ಲಿ ನಾಡಿನ ಮಕ್ಕಳು ಅನಕ್ಷರತೆಯಿಂದ ಕೊರಗಬಾರದೆಂಬ ದೃಷ್ಟಿಯಿಂದ ಅಂದಿನ ಗ್ರಾಮೀಣ ಪ್ರದೇಶದ ಚಿಕ್ಕಮಗಳೂರಿನಲ್ಲಿ ಕಾಲೇಜು ಸ್ಥಾಪಿಸಿದ ಪರಿಣಾಮ ಲಕ್ಷಾಂತರ ಮಕ್ಕಳು ವಿದ್ಯಾವಂತರಾಗಿದ್ದಾರೆ. ಅಲ್ಲದೇ ಪೂಜ್ಯರು ದೇಶಗಟ್ಟಿಗೊಳಿಸುವ ಸಲುವಾಗಿ ವಿದ್ಯಾದಾನಕ್ಕೆ ಒತ್ತುಕೊಟ್ಟು ರಾಷ್ಟ್ರದ ಬೆಳವಣಿಗೆಗೆ ಶ್ರಮಿಸಿದವರು ಎಂದರು.ಬಡವರು, ಕೂಲಿ ಕಾರ್ಮಿಕರು ವಿದ್ಯೆಯಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಶ್ರೀಗಳು ಮುಂದಾಲೋಚಿಸಿ ಜಿಲ್ಲೆಯಲ್ಲಿ ಪರಿಣಿತ ಪ್ರಾಧ್ಯಾಪಕರನ್ನು ನೇಮಿಸಿ ಕಾಲೇಜು ಸ್ಥಾಪಿಸಿ ವಿದ್ಯೆ ಕರುಣಿಸಿದ ಮಹಾಚೇತನ. ಅವರ ಸನ್ಮಾರ್ಗದಲ್ಲಿ ವಿದ್ಯಾರ್ಥಿ ವೃಂದ ಸಾಗಬೇಕು. ದೊಡ್ಡಮಟ್ಟಿನಲ್ಲಿ ಸಾಧನೆ ಮಾಡಿ ಜಗತ್ತಿನ ಮುಂದೆ ಭಾರತ ಶಕ್ತಿಯುತಗೊಳಿಸಬೇಕು ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ವಿವೇಕವಾಣಿಯಂತೆ ನಿಮ್ಮ ಬಾಳಿಗೆ, ನೀವೇ ಶಿಲ್ಪಿ ಗಳಾಗಲು ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು. ಕಲಿಕೆಯಲ್ಲಿ ಸತತ ಪರಿಶ್ರಮದಿಂದ ನಿಗಧಿತ ಗುರಿ ಹೊಂದಿರಬೇಕು. ದೇಶಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಆತ್ಮನಿರ್ಭರತೆಯೊಂದಿಗೆ ಕೈಜೋಡಿಸಿದಾಗ ವಿಶ್ವದ ಮುಂದೆ ಭಾರತ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.ಸಮಾಜಕ್ಕೆ ಬೇಕಾದ ಆದರ್ಶ, ವ್ಯಕ್ತಿತ್ವಗಳನ್ನು ಸೃಷ್ಟಿಸುವುದರಲ್ಲಿ ಎಐಟಿ ವಿದ್ಯಾಸಂಸ್ಥೆ ಮಹತ್ತರ ಪಾತ್ರ ವಹಿಸುತ್ತಿದೆ. ದೃಢಸಂಕಲ್ಪ ಜೊತೆಗೆ ಸತತ ಪರಿಶ್ರಮ ಸೇರಿದಾಗ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ. ಭಾರತವಿಂದು ವಿಶ್ವ ಗುರುವಾಗುವತ್ತ ಹೆಜ್ಜೆ ಹಾಕುತ್ತಿದೆ. ಈ ವೇಳೆ ಜಗತ್ತಿಗೆ ಉದ್ಯೋಗದಾತರಾಗುವ ಹೊಣೆ ಭಾರತದ ಯುವಜನತೆ ಮೇಲಿದೆ ಎಂದು ತಿಳಿಸಿದರು.ಸಿಎಸ್.ಐಆರ್ ಮುಖ್ಯ ವಿಜ್ಞಾನಿ ಡಾ. ದಿನೇಶ್ ಎನ್.ನಾಗೇಗೌಡ ಮಾತನಾಡಿ, ಜೀವನದ ಪ್ರತಿ ಕ್ಷೇತ್ರಗಳಲ್ಲೂ ಸವಾಲು ಗಳಿವೆ. ಹಾಗೆಯೇ ವಿದ್ಯಾ ಕ್ಷೇತ್ರದಲ್ಲೂ ಏರು ಪೇರುಗಳಿವೆ. ಬುದ್ದಿವಂತಿಕೆ, ಚಾಣಕ್ಯತನ ಹಾಗೂ ನಿರಂತರ ವ್ಯಾಸಂಗವೇ ಇಂಜಿನಿಯರ್‌ಗಳಿಗೆ ಭದ್ರ ಬುನಾದಿ ಹಾಗೂ ಭವಿಷ್ಯದಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿದರು.ನಾಡಿನ ಕನ್ನಬಾಂಡಿ ಕಟ್ಟೆ ನಿರ್ಮಾತೃ ವಿಶ್ವೇಶ್ವರಯ್ಯ, ಬೇಲೂರು ಚೆನ್ನಕೇಶವ ದೇವಾಲಯ ಶಿಲ್ಪಿ ಜಕಣಾಚಾರಿ ಅಂದಿನ ಕಾಲದಲ್ಲೇ ಯಾವುದೇ ತಂತ್ರಜ್ಞಾನವಿಲ್ಲದೇ ಬುದ್ದಿಶಕ್ತಿಯಿಂದ ದೊಡ್ಡ ಎಂಜಿನಿಯರ್‌ಗಳಾಗಿ ಇಡೀ ವಿಶ್ವವೇ ಮೆಚ್ಚುವಂತ ಕೆಲಸ ಮಾಡಿದ್ದಾರೆ. ಅದರಂತೆ ಡಾ. ಎಪಿಜೆ ಅಬ್ದುಲ್ ಕಲಾಂ ಕೂಡಾ ಎಂಜಿನಿಯರ್‌ರಾಗಿ ಕಾರ್ಯನಿರ್ವಹಿಸಿದ್ದರು ಎಂದು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟ್ರರ್ ಡಾ. ಸಿ.ಕೆ.ಸುಬ್ಬರಾಯ, ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ವಕೀಲ ಪ್ರದೀಪ್ ನಾಗರಾಜ್, ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎಂ.ಸತ್ಯನಾರಾಯಣ್, ಡಾ. ವೀರೇಂದ್ರ, ಡಾ. ಸಂಪತ್, ಡಾ. ಸುನೀತ, ಡಾ. ದಿನೇಶ್, ಡಾ. ಗೌತಮ್ ಉಪಸ್ಥಿತರಿದ್ದರು. 6 ಕೆಸಿಕೆಎಂ 1ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಪ್ರಥಮ ವರ್ಷದ ಇಂಜಿನಿಯರ್ ವಿದ್ಯಾರ್ಥಿ ಗಳಿಗೆ ಆಯೋಜಿಸಿದ್ಧ ’ಫ್ರೆಶರ್ಸ್ ಡೇ- 2025’ ಕಾರ್ಯಕ್ರಮವನ್ನು ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ ಉದ್ಘಾಟಿಸಿದರು.