ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ ಹಾಗೂ ಜಾತಿ ಆಧಾರಿತ ರಾಜಕಾರಣ ಹೆಚ್ಚಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.
ಕಂಪ್ಲಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಅತ್ಯಂತ ಮಹತ್ವದ್ದಾಗಿದೆ. ಆ ಹಕ್ಕನ್ನು ಯಾವುದೇ ಕಾರಣಕ್ಕೂ ಕುಂಠಿತಗೊಳಿಸುವ ಪ್ರಯತ್ನಗಳು ನಡೆಯಬಾರದು ಎಂದು ಎದ್ದೇಳು ರಾಜ್ಯ ಸಂಯೋಜಕ ಕುಮಾರ ಸಮತಳ ಹೇಳಿದರು.
ಪಟ್ಟಣದ ಅತಿಥಿಗೃಹ ಆವರಣದಲ್ಲಿ ಮಾನವ ಬಂಧುತ್ವ ವೇದಿಕೆ–ಕರ್ನಾಟಕ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ ಹಾಗೂ ಜಾತಿ ಆಧಾರಿತ ರಾಜಕಾರಣ ಹೆಚ್ಚಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಜನರು ಜಾಗೃತರಾಗುವುದು ಅಗತ್ಯವಾಗಿದೆ. ಭ್ರಷ್ಟಾಚಾರ ಹಾಗೂ ಜಾತಿ ರಾಜಕಾರಣದಲ್ಲಿ ಕಾಂಗ್ರೆಸ್ಸಿಗಿಂತ ಬಿಜೆಪಿ ಅಪಾಯಕಾರಿಯಾಗಿದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಎದ್ದೇಳು ಕರ್ನಾಟಕ ಸಂಘಟನೆ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದು, ಜನಪರ ವಿಚಾರಗಳಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಮತದಾನದ ಹಕ್ಕು ಸಂಬಂಧಿತ ನಿರ್ಧಾರಗಳನ್ನು ಕೈಗೊಳ್ಳುವುದು ಶಾಸಕಾಂಗದ ಕರ್ತವ್ಯವಾಗಿದ್ದು, ಆದರೆ ಚುನಾವಣಾ ಆಯೋಗ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿರುವುದು ಸಂವಿಧಾನದ ಆತ್ಮಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ಅಲೆಮಾರಿ ಸಮುದಾಯಗಳ ಹಕ್ಕುಗಳನ್ನು ಮೊಟಕುಗೊಳಿಸುವ ಸಾಧ್ಯತೆಗಳಿವೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಕಸಿದುಕೊಳ್ಳುವಂತಹ ಹುನ್ನಾರಗಳು ಇದರೊಳಗೆ ಅಡಗಿವೆ ಎಂಬ ಆತಂಕ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಮಾಜದ ಎಲ್ಲಾ ವರ್ಗದ ಜನರು ಮತದಾನದ ಹಕ್ಕಿನ ಮಹತ್ವವನ್ನು ಅರಿತು ಜಾಗೃತರಾಗಬೇಕು. ಮತದಾರರ ಪಟ್ಟಿಯಲ್ಲಿ ಯಾರೂ ಅನ್ಯಾಯವಾಗಿ ಹೊರಗುಳಿಯದಂತೆ ಸಂಘಟನೆಗಳು ಕೂಡ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಸಂಚಾಲಕ ಬಿ. ನಬೀಸಾಬ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ವಿಜಯಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಸಂಚಾಲಕಿ ಕಲಾವತಿ, ರಾಜ್ಯಾಧ್ಯಕ್ಷ ಎ.ಬಿ. ರಾಮಚಂದ್ರಪ್ಪ, ವಿಭಾಗೀಯ ಸಂಚಾಲಕ ಮುದ್ಗಲ್ ಇರ್ಫಾನ್ ಮಾತನಾಡಿದರು.
ತಾಲೂಕು ಸಂಚಾಲಕರಾದ ಆರ್.ಪಿ. ಶಶಿಕುಮಾರ್, ರಾಜಭಕ್ಷಿ, ಕುಮಾರ್, ರಮೇಶ್, ಪ್ರಮುಖರಾದ ಎಂ. ಸುಧೀರ್, ವಸಂತರಾಜ ಕಹಳೆ, ಎಚ್.ಗುಂಡಪ್ಪ, ಎಚ್. ಮರಿಯಪ್ಪ, ಮರಿಸ್ವಾಮಿ ಸಣಾಪುರ, ನಾಯಕರ ವೆಂಕೋಬಣ್ಣ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.