ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ನಗರದಲ್ಲಿ ಗೋಡೆ ಬರಹ ಹಾಗೂ ಚಿತ್ರಗಳ ಮೂಲಕ ನಗರದ ಸೌಂದರ್ಯೀಕರಣ ಮತ್ತು ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಸ್ಥಳೀಯ ನಗರಸಭೆ ಮುಂದಾಗಿದೆ.ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಮಾಹಿತಿ, ಶಿಕ್ಷಣ ಹಾಗೂ ಸಂವಹನಕ್ಕಾಗಿ (ಐಇಸಿ) ವಿಶೇಷ ಅನುದಾನ ತೆಗೆದಿರಿಸಲಾಗಿರುತ್ತದೆ. ಅದರಂತೆ ಸ್ಥಳೀಯ ನಗರಸಭೆ ಬಜೆಟ್‌ನಲ್ಲಿ ಇದಕ್ಕಾಗಿ ವಾರ್ಷಿಕ ₹15 ಲಕ್ಷ ಅನುದಾನ ಮೀಸಲಿಡಲಾಗಿದೆ. ಇತ್ತೀಚಿಗೆ ನಗರಸಭೆ ಅಧಿಕಾರಿಗಳು ಈ ಅನುದಾನವನ್ನು ಬಳಸಿಕೊಂಡು ಪ್ರಾರಂಭಿಕ ಹಂತದಲ್ಲಿ ನಗರದ ಕೆಇಬಿ ವಿನಾಯಕ ದೇವಸ್ಥಾನ, ಬಸ್ ನಿಲ್ದಾಣ ಪಕ್ಕದಲ್ಲಿ, ತಾಲೂಕು ಪಂಚಾಯತ್ ಕಚೇರಿ ಮುಂತಾದ ಕಡೆಗಳಲ್ಲಿ ವಿವಿಧ ವರ್ಣಗಳಲ್ಲಿ ಚಿತ್ತಾಕರ್ಷಕ ಚಿತ್ರಗಳನ್ನು ಬಿಡಿಸಿದ್ದಾರೆ.
ಗೋಡೆಗಳಲ್ಲಿ ಬಿಡಿಸಲಾಗಿರುವ ಚಿತ್ರಗಳಲ್ಲಿ ಸ್ವಚ್ಛತೆ ಕಾಪಾಡಲು ಅನುಸರಿಸಬೇಕಾದ ಕ್ರಮಗಳು, ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಅನಾಹುತಗಳ ಕುರಿತು ಮಾಹಿತಿ, ಪರಿಸರ ಸಂರಕ್ಷಣೆಗಾಗಿ ಗಿಡ-ಮರಗಳನ್ನು ಬೆಳೆಸುವುದು ಮುಂತಾದ ಅಂಶಗಳಿಗೆ ಒತ್ತು ನೀಡಲಾಗಿದೆ.
ಪ್ರತಿಯೊಂದು ವಾರ್ಡ್‌ನಲ್ಲಿಯೂ ನಗರಸಭೆಯ ಕಸ ವಿಲೇವಾರಿ ವಾಹನಗಳ ಮೂಲಕ ಮನೆ, ಅಂಗಡಿಗಳಿಂದ ಕಸ ಸಂಗ್ರಹ ಮಾಡಲಾಗುತ್ತಿದೆ. ಈಗಾಗಲೇ ನಗರಸಭೆ ವತಿಯಿಂದ ಬೇಕಾಬಿಟ್ಟಿ ಕಸ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ. ಇತ್ತೀಚಿಗೆ ಸ್ವಚ್ಛತಾ ಕ್ರಮ ಅನುಸರಿಸದ ಹೋಟೆಲ್‌ಗೆ ಬೀಗ ಜಡಿದು ಬಂದ್ ಮಾಡಲಾಗಿತ್ತು.
ಗೋಡೆ ಬರಹಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಗರದ ಸರ್ಕಾರಿ ಕಚೇರಿಗಳ ಕೌಂಪಾಂಡ್‌ಗಳ ಮೇಲೆ ಇದೇ ರೀತಿ ಗೋಡೆ ಬರಹಗಳನ್ನು ಬರೆಯಿಸಲಾಗುವುದು ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಹೇಳಿದರು.