ಕಾರಟಗಿ: ಕವಿ ಮತ್ತು ದಾರ್ಶನಕರಾಗಿದ್ದ ಮಹಾಯೋಗಿ ವೇಮನ ಅವರು ಸಮಾಜದಲ್ಲಿನ ಮೌಢ್ಯ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸಿದ್ದರು. ವೇಮನರ ತತ್ವ-ಸಂದೇಶಗಳ ಜ್ಞಾನ ಮತ್ತು ಜಾಗೃತಿ ಜನರಲ್ಲಿ ಮೂಡಿಸಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ ಹೇಳಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ, ಶಿಕ್ಷಕ ಅಮರೇಶ ಮೈಲಾಪುರ ಮಾತನಾಡಿ, ಜನಸಾಮಾನ್ಯರ ಕವಿ, ಜೀವಕಾರುಣ್ಯದ ಕವಿ, ಲೋಕಕ್ಕೆ ಮಾರ್ಗದರ್ಶಿಯಾಗಿದ್ದ ಮತ್ತು ತಮ್ಮ ಜೀವಿತಾವಧಿಯ ಕಾಲಘಟ್ಟದಲಿ ಜಾತೀಯತೆ, ಅಂಧಶ್ರದ್ಧೆ, ಮೇಲು-ಕೀಳುಗಳನ್ನು ತಮ್ಮ ಪದ್ಯಗಳ ಮೂಲಕ ಧಿಕ್ಕರಿಸಿದವರು ಮಹಾಯೋಗಿ ವೇಮನರವರು. ಅವರ ವಚನಗಳು, ಸಂದೇಶವಿರುವ ಪದ್ಯಗಳು ತೆಲುಗಿನ ಸಾಹಿತ್ಯದಲ್ಲಿ ವೇಮನ ಶತಕಲು ಎಂದು ಖ್ಯಾತಿ ಪಡೆದಿವೆ ಎಂದರು.
ರೆಡ್ಡಿ ಸಮಾಜದ ತಾಲೂಕಾಧ್ಯಕ್ಷ ರುದ್ರಗೌಡ ಪಾಟೀಲ್ ನಂದಿಹಳ್ಳಿ ಮತ್ತು ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಇದಕ್ಕೂ ಮುಂಚೆ ಪುರಸಭೆ ನೌಕರ ಚನ್ನಬಸವಸ್ವಾಮಿ ಹಿರೇಮಠ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ತಹಸೀಲ್ದಾರ್ ಕಚೇರಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗ್ರೇಡ್-೨ ತಹಸೀಲ್ದಾರ್ ಷಣ್ಮುಖಪ್ಪ ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಮಾತನಾಡಿ, ಯೌವ್ವನದ ಆರಂಭದ ದಿನಗಳಲ್ಲಿ ಸ್ವೇಚ್ಛಾಜೀವನ ನಡೆಸುತ್ತಿದ್ದ ವೇಮನರು ಜ್ಞಾನೋದಯ ಪಡೆದು ದಾರ್ಶನಿಕ ಕವಿಯೂ ಅನುಭಾವಿಯೂ ಆಗಿ ರೂಪುಗೊಂಡಿದ್ದು ಐತಿಹಾಸಿಕ ಸತ್ಯ. ಯೋಗಿ ವೇಮನರ ವಚನಗಳ ಸತ್ಯವನ್ನು ಪ್ರತಿಪಾದಿಸಿ ಲೋಕಕ್ಕೆ ಹಂಚಿದ್ದು ಇಂದಿಗೂ ಪ್ರಸ್ತುತ ಎನಿಸಿವೆ ಎಂದರು.
ಆನಂತರ ಶಿಕ್ಷಕ ಬಸವರಾಜ ರ‍್ಯಾವಳದ ಮಾತನಾಡಿ, ವೇಮನರ ಪ್ರತಿಯೊಂದು ನುಡಿ ನಮ್ಮ ಜೀವನಕ್ಕೆ ದಾರಿದೀಪದಂತೆ ಪ್ರಕಾಶಿಸುತ್ತದೆ. ಮಾನವಿಯ ಮೌಲ್ಯಗಳು ಆತ್ಮಗೌರವ, ಸಮಾನತೆ ಮತ್ತು ಸಮಾಜಮುಖಿ ಚಿಂತನೆಗಳು ಅವರ ಪದ್ಯಗಳಲ್ಲಿ ಸಹಜವಾಗಿ ಹರಿದು ಬರುತ್ತವೆ ಎಂದರು.ರುದ್ರಗೌಡ ನಂದಿಹಳ್ಳಿ, ಶರಣಪ್ಪ ಬಾವಿ, ಉದ್ಯಮಿಗಳಾದ ವೆಂಕಾರೆಡ್ಡೆಪ್ಪ ಚನ್ಣಳ್ಳಿ, ಜಿ. ಯಂಕನಗೌಡ, ಬಾಪುಗೌಡ ಹುಳ್ಕಿಹಾಳ, ರವಿಗೌಡ ನಂದಿಹಳ್ಳಿ, ಗಂಗಾಧರಗೌಡ ನವಲಿ, ಬಸವರಾಜ ಪಗಡದಿನ್ನಿ, ಶ್ರೀನಿವಾಸ ಬಿ. ರೆಡ್ಡಿ, ದೇವೇಂದ್ರ ಸಿದ್ದರಾಂಪುರ, ನರಸಾರೆಡ್ಡಿ, ಬಸವನಗೌಡ ಹುಳ್ಕಿಹಾಳ, ಶರಣೇಗೌಡ ಸಿದ್ದಾಪುರ, ದಶರಥರೆಡ್ಡಿ ಚನ್ನಳ್ಳಿ ಇದ್ದರು.
ತಾಪಂ ಕಚೇರಿ: ಮಹಾಯೋಗಿ ಶ್ರೀ ವೇಮನರ ೬೧೪ನೇ ಜಯಂತಿಯನ್ನು ಸೋಮವಾರ ಸಂಭ್ರಮದಿಂದ ಆಚರಿಸಿದರು. ತಾಪಂ ಕಚೇರಿಯ ಅಧಿಕಾರಿಗಳು ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ಕಚೇರಿಯ ಸಿಬ್ಬಂದಿ ಇದ್ದರು.