ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹಾ ನಗರಗಳಲ್ಲಿ ಸರಕು, ಪತ್ರಗಳು ಸೇರಿದಂತೆ ಯಾವುದೇ ಪಾರ್ಸೆಲ್‌ ಸೇವೆಯನ್ನು ಖಚಿತವಾಗಿ ಒಂದು ಅಥವಾ ಎರಡು ದಿನದೊಳಗೇ ವಿತರಣೆ ಮಾಡುವ ಹೊಸ ಸ್ಪೀಡ್‌ ಪೋಸ್ಟ್‌ ಸೇವೆಯನ್ನು ಮಂಗಳವಾರದಿಂದಲೇ ಅಂಚೆ ಇಲಾಖೆ ಪ್ರಾರಂಭಿಸಿದೆ.

ಸರಕುಗಳನ್ನು ಮರು ದಿನವೇ(ಡಿ-1) ವಿತರಣೆ ಮತ್ತು ಎರಡು ದಿನದೊಳಗೆ (ಡಿ-2) ಖಚಿತ ವಿತರಣೆ ಮಾಡುವ ಎರಡು ಸೇವೆಗಳನ್ನು ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಹಾಗೂ ಹೈದರಾಬಾದ್ ಮಹಾ ನಗರಗಳಲ್ಲಿ ಮಾ.17 ರಿಂದಲೇ ಪ್ರಾರಂಭಿಸಲಾಗಿದೆ. ನಗರದಲ್ಲಿ ಈ ಸೇವೆಯ ತ್ವರಿತ ಅನುಷ್ಠಾನಕ್ಕಾಗಿ 42 ಅಂಚೆ ಕಚೇರಿ ಗುರುತಿಸಲಾಗಿದೆ. ನಗರದ ಯಾವುದೇ ಮೂಲೆಯಿಂದ ಇನ್ನೊಂದು ಮೂಲೆಗೆ ತ್ವರಿತವಾಗಿ ಸೇವೆ ಒದಗಿಸುವುದು ಇದರ ವಿಶೇಷವಾಗಿದೆ.

ದೆಹಲಿಯ ಆಕಾಶವಾಣಿ ಭವನದ ರಂಗಭವನ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ.ಸಿಂಧಿಯಾ, ರಾಜ್ಯ ಸಚಿವ ಡಾ.ಚಂದ್ರ ಶೇಖರ್ ಪೆಮ್ಮಸಾನಿ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಸೇವೆಯನ್ನು ಆನ್‌ಲೈನ್‌ ಮೂಲಕ ಉದ್ಘಾಟಿಸಿದರು.

ನಗರದ ಜಿಪಿಒದಲ್ಲಿರುವ ಮೇಘದೂತ ಸಭಾಂಗಣದಲ್ಲಿ ಇದನ್ನು ನೇರ ಪ್ರಸಾರ ಮಾಡಿದ್ದು, ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್ ಅವರು ಅಂಚೆ ಮಹಾ ಕಾರ್ಯಾಲಯದ ಆವರಣದಿಂದ ಮೊಬೈಲ್ ಥಿಯೇಟರ್ ವ್ಯಾನ್‌ಗಳಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.


ಬಾಕ್ಸ್...

ಸುರಕ್ಷಿತ, ವೇಗದ ವಿತರಣೆ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್‌, ಈ ಸೇವೆಯು ಓಟಿಪಿ ಆಧಾರಿತ ಸುರಕ್ಷಿತ ವಿತರಣೆ, ಎಸ್ಎಂಎಸ್ ಮೂಲಕ ಆರಂಭದಿಂದ ಅಂತ್ಯದವರೆಗೆ ಟ್ರ್ಯಾಕಿಂಗ್ ವ್ಯವಸ್ಥೆ, ಬೃಹತ್ ಬುಕ್ಕಿಂಗ್‌ಗೆ ಉಚಿತ ಪಿಕಪ್, ಕೇಂದ್ರೀಕೃತ ಬಿಲ್ಲಿಂಗ್ ಹಾಗೂ ವಿಳಂಬವಾದಲ್ಲಿ ಹಣ ಹಿಂತಿರುಗಿಸುವ ಖಾತರಿ ಒಳಗೊಂಡಿದೆ. ವ್ಯಾಪಾರ ವಲಯ, ಸಾಮಾನ್ಯ ಗ್ರಾಹಕರಿಗೆ ವೇಗವಾದ ಮತ್ತು ಭದ್ರತೆಯುಳ್ಳ ವಿತರಣಾ ವ್ಯವಸ್ಥೆ ದೊರೆಯಲಿದೆ. ಇದರಿಂದ ಅಂಚೆ ಇಲಾಖೆಯ ಸೇವಾ ಗುಣಮಟ್ಟದಲ್ಲಿ ಮಹತ್ತರ ಸುಧಾರಣೆ ಕಂಡುಬರುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟರು.ಕ್ಯಾಪ್ಷನ್‌.....

ನಗರದ ಜಿಪಿಒದ ಮೇಘದೂತ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್ ಅವರು ಗ್ರಾಹಕರೊಬ್ಬರಿಗೆ ರಸೀದಿ ನೀಡುವ ಮೂಲಕ ‘ಸ್ಪೀಡ್‌ ಪೋಸ್ಟ್‌ ಸೇವೆ’ಗೆ ಚಾಲನೆ ನೀಡಿದರು.