ಬಸವರಾಜ ಹಿರೇಮಠ
ಧಾರವಾಡ:ರಾಜ್ಯ ಬಜೆಟ್ ಎಂದಾಕ್ಷಣ ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳಿಗೆ ಅದರಲ್ಲೂ ಮಹಾನಗರ ಪಾಲಿಕೆಗಳ ಅಭಿವೃದ್ಧಿಗೆ ಸಾಕಷ್ಟು ಹಣಕಾಸಿನ ನೆರವು ನೀಡಬಹುದೆಂಬ ನಿರೀಕ್ಷೆಗಳಿರುತ್ತವೆ. ಅದೇ ರೀತಿ ರಾಜ್ಯದಲ್ಲಿಯೇ 2ನೇ ಅತೀ ದೊಡ್ಡ ಮಹಾನಗರ ಪಾಲಿಕೆ ಎನಿಸಿರುವ ಹು-ಧಾ ಮಹಾನಗರ ಪಾಲಿಕೆ ಸಹ ಈ ಬಾರಿ ಬಜೆಟ್‌ನಲ್ಲಿ ಮಹತ್ವದ ಕೊಡುಗೆಯ ನಿರೀಕ್ಷೆ ಹೊಂದಿದೆ.
ರಾಜ್ಯದ 2ನೇ ಹಂತದ ನಗರಗಳಿಗೆ ಹೋಲಿಸಿದರೆ ಹು-ಧಾ ಅವಳಿ ನಗರ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಸಾಕಷ್ಟು ಸುಧಾರಿಸಬೇಕಿದೆ. ಅವಳಿ ನಗರದಲ್ಲಿ 82 ವಾರ್ಡ್‌ಗಳಿದ್ದರೂ ಎಲ್ಲೂ ಉತ್ತಮ ಮಾದರಿ ಪ್ರದೇಶವಿಲ್ಲ. ಒಂದೊಳ್ಳೆಯ ಉದ್ಯಾನವನ, ಕೆರೆಗಳಿಲ್ಲ. ಗುಣಮಟ್ಟದ ರಸ್ತೆಗಳಿಲ್ಲ, ನಿತ್ಯ ಗಿಜಿಗುಡುವ ಮಾರುಕಟ್ಟೆ, ವ್ಯವಸ್ಥಿತ ಆಟದ ಮೈದಾನಗಳಿಲ್ಲ. ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಸುಗಮ ಸಂಚಾರದ ರಸ್ತೆಗಳೂ ಇಲ್ಲ. ಹೀಗಾಗಿ ಅವಳಿ ನಗರ ಜನರು ಬೇಸತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗೆ ₹ 3,800 ಕೋಟಿ ನಗರ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಕೋರಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಹಾನಗರ ಪಾಲಿಕೆಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. ಪ್ರಸ್ತಾವನೆಯಲ್ಲಿ ಸಂಪೂರ್ಣ ನಗರದ ಅಭಿವೃದ್ಧಿಯ ಯೋಜನೆಗಳಿದ್ದು, ರಾಜ್ಯ ಸರ್ಕಾರ ಅನುದಾನ ಘೋಷಿಸಬೇಕಿದೆ. ಇನ್ನು, ಮಹಾನಗರ ಪಾಲಿಕೆಯು ನಿರ್ವಹಿಸಿದ ಕೆಲವು ಕಾಮಗಾರಿಗಳ ಪೈಕಿ ಗುತ್ತಿಗೆದಾರರಿಗೆ ₹ 300 ಕೋಟಿ ಬಾಕಿ ಇದ್ದು, ರಾಜ್ಯ ಸರ್ಕಾರ ಈ ಹಣ ಕೊಡಬೇಕಿದೆ. ಈ ಕಾರಣದಿಂದ ಪಾಲಿಕೆಯ ಯಾವ ಕಾಮಗಾರಿಗಳನ್ನು ಗುತ್ತಿಗೆದಾರರು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ವಿಷಯಗಳನ್ನು ಆಧರಿಸಿ ಬಜೆಟ್‌ನಲ್ಲಿ ಪಾಲಿಕೆಗೆ ಅನುದಾನ ಒದಗಿಸಬೇಕೆಂದು ಪಾಲಿಕೆ ಸದಸ್ಯರು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ 16ನೇ ಹಣಕಾಸು ಹಣ ನೀಡುತ್ತಿದ್ದು, ಪಾಲಿಕೆಗೆ ಹೆಚ್ಚಿನ ಅನುದಾನ ನೀಡಬೇಕೆಂದು ಆಗ್ರಹಿಸಿರುವ ಪಾಲಿಕೆ ಸಭಾನಾಯಕ ಈರೇಶ ಅಂಚಟಗೇರಿ, ಕೇಂದ್ರ ಸರ್ಕಾರ 2ನೇ ಹಂತದ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ಮಾಡುತ್ತಿದ್ದು, ಪೂರಕವಾಗಿ ರಾಜ್ಯ ಸರ್ಕಾರ ಸಹ ಬರೀ ಮೈಸೂರು-ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕಕ್ಕೆ ಒತ್ತು ನೀಡುವ ಜತೆಗೆ ಉತ್ತರ ಕರ್ನಾಟಕ ಹಾಗೂ ಹು-ಧಾ ಅವಳಿ ನಗರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಹಂಚಿಕೆ ಮಾಡಲು ಮನಸ್ಸು ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಒಳಚರಂಡಿ, ಕುಡಿಯುವ ನೀರು ಮಾತ್ರವಲ್ಲದೇ, ಜನಸಂಖ್ಯೆ, ವಾಹನಗಳ ಸಂಚಾರಕ್ಕೆ ತಕ್ಕಂತೆ ಪ್ರಮುಖ ರಸ್ತೆಗಳ ಅಗಲೀಕರಣ, ಮೇಲ್ಸೆತುವೆಗಳು, ದೊಡ್ಡ ಕೈಗಾರಿಕೆಗಳು ಬರಬೇಕಿದೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಗೆ ಮಾತ್ರ ಅನುದಾನ ಬಂದಿದ್ದು, ರಾಜ್ಯ ಸರ್ಕಾರ ₹ 186 ಕೋಟಿ ಭೂಸ್ವಾಧೀನಕ್ಕೆ ಹಣ ನೀಡಬೇಕಿದೆ. ಅವಳಿ ನಗರದಲ್ಲಿ ನನೆಗುದಿಗೆ ಬಿದ್ದಿರುವ ಅನೇಕ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ಅನುದಾನ ಒದಗಿಸಬೇಕೆಂದು ಅಂಚಟಗೇರಿ ಆಗ್ರಹಿಸಿದರು. ಸ್ಥಳೀಯ ಸಂಸ್ಥೆಗಳಿಗೆ ಅದರಲ್ಲೂ ಹು-ಧಾ ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನವನ್ನು ರಾಜ್ಯ ಬಜೆಟ್‌ನಲ್ಲಿ ನೀಡಲಾಗುತ್ತದೆ ಎಂಬ ನಿರೀಕ್ಷೆ ಹೊಂದಲಾಗಿದೆ. ನಗರ ಯೋಜನೆ ಸೇರಿದಂತೆ ಅವಳಿ ನಗರ ಅಭಿವೃದ್ಧಿಗೆ ಬೇಕಾದ ಯೋಜನೆಗಳ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಕಳೆದ ಬಾರಿ ಏನೂ ನೀಡದ ಬಜೆಟ್ ಈ ಬಾರಿಯಾದರೂ ಮುಖ್ಯಮಂತ್ರಿಗಳು ಒದಗಿಸುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದೇವೆ.
ಜ್ಯೋತಿ ಪಾಟೀಲ, ಮೇಯರ್, ಹು-ಧಾ ಮಹಾನಗರ ಪಾಲಿಕೆ