ಕನ್ನಡಪ್ರಭ ವಾರ್ತೆ ಕುಶಾಲನಗರ ಸ್ವಚ್ಛ ಕಾವೇರಿಗಾಗಿ 15ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ಪೂಂಪ್ ಹಾರ್ ನಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪವಿತ್ರ ಕಾವೇರಿಯನ್ನು ಸಮುದ್ರ ಸಂಗಮದಲ್ಲಿ ವಿಸರ್ಜನೆ ಗೊಳಿಸುವ ಮೂಲಕ ಸಮಾಪ್ತಿ ಗೊಂಡಿತು.ಅಖಿಲ ಭಾರತ ಸನ್ಯಾಸಿ ಸಂಘ ಕಾವೇರಿ ನದಿ ಸ್ವಚ್ಛತಾ ಆಂದೋಲನ ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್ ನಮಾಮಿ ಕಾವೇರಿ ಸಹಯೋಗದೊಂದಿಗೆ ತಲಕಾವೇರಿ ಕ್ಷೇತ್ರದಿಂದ ಆರಂಭಗೊಂಡ ರಥಯಾತ್ರೆ ಪವಿತ್ರ ಕಾವೇರಿ ತೀರ್ಥಕ್ಕೆ, ಕಾವೇರಿ ನದಿ ಮತ್ತು ಬಂಗಾಳ ಕೊಲ್ಲಿ ಸಮುದ್ರ ಸಂಗಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ದಕ್ಷಿಣ ಭಾರತದ ಸಾಧುಸಂತರ ಸಮ್ಮುಖದಲ್ಲಿ ಯಾತ್ರೆ ವಿದ್ಯುಕ್ತವಾಗಿ ಸಮಾಪ್ತಿಗೊಂಡಿತು. ಅಕ್ಟೋಬರ್ ತಿಂಗಳ 24ರಂದು ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಚಾಲನೆಗೊಂಡ ರಥ ಯಾತ್ರೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನದಿ ತಟಗಳಲ್ಲಿ ಕಾವೇರಿ ಮಾತೆಯನ್ನು ಹೊತ್ತ ರಥ ಮೂಲಕ ಸಾಗಿ ಜನರಿಗೆ ಕಾವೇರಿ ನದಿ ಸಂರಕ್ಷಣೆಯ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕಾರ್ಯ ಮೂರು ವಾರಗಳಿಂದ ನಡೆದಿತ್ತು. ಅಖಿಲ ಭಾರತ ಸನ್ಯಾಸಿ ಸಂಘದ ಸಂಸ್ಥಾಪಕರಾದ ಶ್ರೀ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಾಗಿದ ಕಾವೇರಿ ರಥ ಯಾತ್ರೆಯಲ್ಲಿ ದಕ್ಷಿಣ ಭಾರತದ ಸುಮಾರು 50ಕ್ಕೂ ಅಧಿಕ ಸಾಧು ಸಂತರು ಪಾಲ್ಗೊಂಡಿದ್ದರು.
ದಕ್ಷಿಣ ಭಾರತದಲ್ಲಿ ನದಿ ಸಂರಕ್ಷಣೆಗಾಗಿ ಕಟ್ಟುನಿಟ್ಟಿನ ಕಾನೂನು ರೂಪುಗೊಳ್ಳಬೇಕಾಗಿದೆ. ಆ ಮೂಲಕ ನದಿ ಜಲಮೂಲಗಳ ಸಂರಕ್ಷಣೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ರಾಜ್ಯಗಳ ನಡುವೆ ನೀರಿನ ಪಾಲಿಗಾಗಿ ಮಾತ್ರ ಹೋರಾಟ ಸೀಮಿತವಾಗಬಾರದು. ನದಿಗಳ ಸಂರಕ್ಷಣೆಗೆ ಕೂಡ ಸರಕಾರಗಳ ಮೂಲಕ ಯೋಜನೆಗಳು ರೂಪುಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.ಈ ಸಂದರ್ಭ ಅಖಿಲ ಭಾರತ ಸನ್ಯಾಸಿಗಳ ಸಂಘದ ಶ್ರೀ ಶಿವರಾಮನಂದ ಸ್ವಾಮೀಜಿ , ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್ ನ ಸಂಚಾಲಕರಾದ ವಾಸು ರಾಮಚಂದ್ರನ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಅಧ್ಯಕ್ಷ ಎಂ ಎನ್ ಚಂದ್ರಮೋಹನ್ ನಮಾಮಿ ಕಾವೇರಿ ಅಧ್ಯಕ್ಷರಾದ ವನಿತಾ ಚಂದ್ರಮೋಹನ್, ಗೌರವ ಸಲಹೆಗಾರರಾದ ಸುಮನ ಮಳಲಗದ್ದೆ, ದೀಪಕ್ ಕುಮಾರ್, ಅಖಿಲ ಭಾರತ ಸನ್ಯಾಸಿ ಸಂಘದ ಸದಸ್ಯರು, ಪಾಲ್ಗೊಂಡಿದ್ದರು.