ಕುಷ್ಟಗಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದರು.
ಕುಡಿಯುವ ನೀರು, ನೈರ್ಮಲ್ಯ,ಸ್ವಚ್ಛತೆ ಕಾಪಾಡುವುದು ಪುರಸಭೆ ಹಾಗೂ ಗ್ರಾಪಂ ಅಧಿಕಾರಿಗಳ ಮುಖ್ಯ ಕರ್ತವ್ಯವಾಗಿದ್ದು, ಅಧಿಕಾರಿ ಹಾಗೂ ಸಿಬ್ಬಂದಿ ಟೀಮ್ ವರ್ಕ್ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಎಚ್ಚರ ವಹಿಸಿ ಕೆಲಸ ನಿರ್ವಹಿಸಬೇಕು ಎಂದು ಕುಡಿಯುವ ನೀರು ಸರಬರಾಜು,ಪುರಸಭೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಮಟ್ಟದಲ್ಲಿ ಸಮಸ್ಯಾತ್ಮಕ ಪ್ರದೇಶ ಹಾಗೂ ಗ್ರಾಮಗಳನ್ನು ಗುರ್ತಿಸಿ ಆದ್ಯತಾನುಸಾರವಾಗಿ ಎ.ಬಿ.ಸಿ.ಕೆಟಗರಿ ಪಟ್ಟಿ ಮಾಡಿ ನೀರಿನ ತೊಂದರೆಯಾಗದಂತೆ ನಿಗಾ ವಹಿಸಬೇಕು. ಸಾರ್ವಜನಿಕರಿಗಾಗಿ ಹೆಲ್ಪ್ ಲೈನ್ ಮಾಡಬೇಕು. ನೀರಿನ ಸಮಸ್ಯೆ ಇದ್ದ ಕಡೆ ಮೊದಲ ಆದ್ಯತೆ ನೀಡಿ ಖಾಸಗಿ ಬೋರವೆಲ್, ಟ್ಯಾಂಕರ್ ಮೂಲಕ ಪೂರೈಸುವಲ್ಲಿ ಮುಂಜಾಗ್ರತೆ ವಹಿಸಬೇಕು ಎಂದರು.ಗ್ರಾಮೀಣ ಮಟ್ಟದಲ್ಲಿ ಓಎಚ್.ಟಿ ಗಳಿಂದ ಬರುವ ಪೈಪಲೈನ್ ಪರಿಶೀಲಿಸಿ ದುರಸ್ತಿ ಇದ್ದರೆ ತ್ವರಿತವಾಗಿ ಮಾಡಬೇಕು. ಕಡಿಮೆ ಕ್ವಾಲಿಟಿ ಪೈಪ್ ಅಥವಾ ಸಾಮಗ್ರಿ ಬಳಸಬೇಡಿ, ನೀರು ಸರಬರಾಜು ಯಾವುದೇ ಕಾರಣಕ್ಕೂ ತಡೆಯಾಗಬಾರದು.ಅನುದಾನದ ಕೊರತೆ ಇದ್ದಲ್ಲಿ ಮಾಹಿತಿ ನೀಡಿ ಕ್ರಿಯಾಯೋಜನೆ ಮಾಡಿ ತುರ್ತು ಕಾಮಗಾರಿ ಕೈಗೊಳ್ಳಲು ಬೇಡಿಕೆ ಪಟ್ಟಿ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹುನಗುಂದ ಕೆ.ಯು.ಡಬ್ಲ್ಯೂ.ಎಸ್. ಎಇಇ ವೀಣಾ ಮಾತನಾಡಿ, ಪಂಪ್ ಪದೇಪದೇ ಹಾಳಾಗುತ್ತಿದೆ.ನಮ್ಮಲ್ಲಿ ಪಂಪ್ ರಿಪೇರಿ ಬಂದರೆ ಹೆಚ್ಚುವರಿಯಾಗಿ ಇನ್ನೋಂದು ಮೋಟರ್ ಇಲ್ಲ,ಹೆಚ್ಚುವರಿ ಮೋಟರ್ ಖರೀದಿಗೆ ಸುಮಾರು ₹30 ಲಕ್ಷ ಖರ್ಚಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ನೀರಿನ ಸಮಸ್ಯೆ ಬಹಳಷ್ಟಿದ್ದು, ಶಾಶ್ವತ ಪರಿಹಾರ ಸಿಕ್ಕಿಲ್ಲ ಹಾಗೂ ತಾಲೂಕಿನ ಅನೇಕ ಗ್ರಾಮಗಳಲ್ಲಿ ಜೆಜೆಎಂ ಅನಾವಶ್ಯಕ ಪೋಲಾಗುತ್ತಿದ್ದು, ಜನರಿಗೆ ಬಳಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸಿ, ಪೋಲಾಗಂತೆ ಸರಿಯಾದ ಬಳಕೆ ಮಾಡಲು ತಿಳಿಸಿ. ಮನೆಮನೆಗೆ ತೆರಳಿ ಜನರಿಗೆ ನೀರಿನ ಕುರಿತು ಅರಿವು ಮೂಡಿಸಬೇಕು ಎಂದರು.
ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿ, ಈಗಾಗಲೆ ನೀರಿನ ಸಮಸ್ಯೆ ಕುರಿತು ಸಭೆ ಮಾಡಲಾಗಿದ್ದು, ಹನ್ನೊಂದು ಗ್ರಾಪಂ ಪೈಕಿ 15 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದ್ದು, ಸಮಸ್ಯೆ ಉಂಟಾದಲ್ಲಿ ಖಾಸಗಿ ಬೋರ್‌ವೆಲ್ ಹಾಗೂ ಗ್ರಾಪಂ ಡಿಬಿಒಟಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು ಇಲ್ಲಿಯವರೇಗೂ ಗಂಭೀರ ಸಮಸ್ಯೆ ಸೃಷ್ಟಿಯಾಗಿರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಅಶೋಕ ಶಿಗ್ಗಾಂವಿ, ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ತಾಪಂ ಇಓ ಪಂಪಾಪತಿ ಹಿರೇಮಠ, ನರೇಗಾ ಎಡಿ ನಿಂಗನಗೌಡ ಹಿರೇಹಾಳ, ಸೇರಿದಂತೆ ಗ್ರಾಪಂ ಆಡಳಿತಾಧಿಕಾರಿಗಳು ಹಾಗೂ ಪಿಡಿಓ ಇದ್ದರು.