ರಾಮನಗರ: ಬಿಡದಿ ಪುರಸಭೆ ಉಪಾಧ್ಯಕ್ಷೆ ಆಯಿಷಾ ಖಲೀಲ್ ಪ್ರಭಾರ ಅಧ್ಯಕ್ಷರಾಗಿ ಗುರುವಾರ ಅಧಿಕಾರ ವಹಿಸಿಕೊಂಡರು.
ಪುರಸಭೆಯಲ್ಲಿ ಜೆಡಿಎಸ್ ಆಡಳಿತ ನಡೆಸುತ್ತಿದ್ದು, ಅಧ್ಯಕ್ಷ ಸ್ಥಾನದ ಅಧಿಕಾರ ಅವಧಿಯನ್ನು ಪಕ್ಷದ ವರಿಷ್ಠರು ಹಂಚಿಕೆ ಮಾಡಿದ್ದಾರೆ. ಅದರಂತೆ ಬೇರೊಬ್ಬ ಸದಸ್ಯರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಭಾನುಪ್ರಿಯಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಆಯಿಷಾ ಖಲೀಲ್, ಬಿಡದಿ ಪುರಸಭೆಯ ಸದಸ್ಯರ ಸಹಕಾರದಲ್ಲಿ ಮೂಲಭೂತ ಸೌಕರ್ಯಗಳು ಸಾಕಾರವಾಗುತ್ತಿವೆ. ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನದಲ್ಲಿ ನಾನು ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ನನ್ನ ಮೇಲಿಟ್ಟಿರುವ ನಂಬಿಕೆ ಮತ್ತು ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ ಎಂದು ಹೇಳಿದರು.ಪಕ್ಷಾತೀತವಾಗಿ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರದಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪುರಸಭೆ ವತಿಯಿಂದ ಕೈಗೊಳ್ಳಬೇಕಾದ ಎಲ್ಲಾ ಬಾಕಿ ಕೆಲಸಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.
ಬಿಡದಿ ಪುರಸಭೆ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಆಯಿಷಾ ಖಲೀಲ್ ಅವರನ್ನು ಸದಸ್ಯರು ಹಾಗೂ ಮುಖಂಡರು ಅಭಿನಂದಿಸಿದರು.