;Resize=(412,232))
ಬೆಂಗಳೂರು : ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಯಡಿ ರಾಜ್ಯ ಸರ್ಕಾರ ರೈತರಿಂದ ಖರೀದಿಸಿದ್ದ ರಾಗಿ, ಜೋಳದ ಬಾಕಿಯಲ್ಲಿ ₹357.39 ಕೋಟಿಯನ್ನು ಗುರುವಾರ ಬಿಡುಗಡೆಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
2025-26ನೇ ಸಾಲಿನಲ್ಲಿ ಎಂಎಸ್‌ಪಿ ಅಡಿ ರೈತರಿಂದ ಖರೀದಿಸಿದ್ದ ರಾಗಿ, ಜೋಳದ ಬಾಬ್ತು ₹1128.13 ಕೋಟಿ ಬಾಕಿ ಉಳಿಸಿಕೊಳ್ಳಲಾಗಿತ್ತು. ಇದರಲ್ಲಿ ₹357.39 ಕೋಟಿಯನ್ನು ಬಿಡುಗಡೆ ಮಾಡಲು ಆಹಾರ ಇಲಾಖೆಯು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಬುಧವಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಹಿರಿತನದ ಆಧಾರದಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣ ಸಂದಾಯವಾಗಲಿದೆ.
ಎಂಎಸ್‌ಪಿ ಅಡಿ ಪ್ರಸಕ್ತ ಸಾಲಿನಲ್ಲಿ ರಾಗಿ, ಜೋಳ, ಭತ್ತ ಖರೀದಿಸಿದ ರೈತರಿಗೆ ಈಗಾಗಲೇ ₹2487.69 ಕೋಟಿ ಪಾವತಿಸಲಾಗಿತ್ತು. ಭತ್ತ ಮಾರಾಟ ಮಾಡಿದ್ದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಹಣ ಸಂದಾಯವಾಗಿದ್ದು ರಾಗಿ ಮತ್ತು ಜೋಳ ಮಾರಾಟ ಮಾಡಿದ್ದವರಿಗೆ ₹1,128.13 ಕೋಟಿ ಪಾವತಿಸಬೇಕಿತ್ತು. ಅದರಲ್ಲಿ ಈಗ ₹357.39 ಕೋಟಿ ಪಾವತಿಸಲಿದ್ದರೂ ಇನ್ನೂ ಸಹಸ್ರಾರು ರೈತರಿಗೆ ₹770.74 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ರೈತರಿಗೆ ಎಂಎಸ್‌ಪಿ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ‘ಕನ್ನಡಪ್ರಭ’ ವಿಶೇಷ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.
(ಜೂ.17ರಂದು ಕನ್ನಡಪ್ರಭ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ವರದಿ ಮಾಡಿತ್ತು)