ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಧಾರ್ಮಿಕ ವಿಧಿ ವಿಧಾನ, ಕಾರ್ಯಗಳ ಶಾಸ್ತ್ರೋಕ್ತವಾಗಿ ಪ್ರಧಾನಿ ಮೋದಿ ನೆರವೇರಿಸುತ್ತಿದ್ದಂತೆಯೇ ನಗರ, ಜಿಲ್ಲಾದ್ಯಂತ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು. ಪ್ರಾಣ ಪ್ರತಿಷ್ಠಾಪನೆ, ಮಂದಿರ ಉದ್ಘಾಟನೆ ನೆರವೇರುತ್ತಿದ್ದಂತೆಯೇ ಅದೇ ಮುಹೂರ್ತದಲ್ಲಿ ನಗರ, ಜಿಲ್ಲೆಯ ರಾಮ ಮಂದಿರ, ಹನುಮ ಮಂದಿರಗಳು, ಶಿವಾಲಯ ಸೇರಿ ಸಮಸ್ತ ದೇವಸ್ಥಾನಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯ ನೆರವೇರಿದವು.
ಇಡೀ ನಗರ, ಜಿಲ್ಲೆ ಕೇಸರಿ ಮಯವಾಗಿತ್ತು. ವಿಶೇಷವಾಗಿ ಜಿಲ್ಲಾ ಕೇಂದ್ರದಲ್ಲಂತೂ ಪ್ರಮುಖ ವೃತ್ತಗಳು, ರಸ್ತೆಗಳು, ಜನದಟ್ಟಣೆ ಪ್ರದೇಶಗಳು, ಜನವಸತಿ ಪ್ರದೇಶಗಳು, ಹಳೆ ಊರು, ಹೊಸ ಊರು, ಹೊಸ ಬಡಾವಣೆ, ದೇವಸ್ಥಾನಗಳು, ಬೀದಿಗಳು, ಕೇರಿಗಳಲ್ಲಿ ರಾಮನ ಫ್ಲೆಕ್ಸ್‌ಗೆ ಪೂಜೆ, ಪ್ರಸಾದ, ಪಾನಕ, ಮಜ್ಜಿಗೆ ವಿತರಣೆ ಕಾರ್ಯ ನಡೆಯಿತು. ರಾಮಭಕ್ತಿಗೆ ವಯೋಮಿತಿ ಇಲ್ಲವೆಂಬಂತೆ ಪುಟ್ಟ ಮಕ್ಕಳಿಂದ ಶತಮಾನದ ಹೊಸ್ತಿನಲ್ಲಿರುವ ವೃದ್ಧರು, ಲಿಂಗ ಬೇಧವಿಲ್ಲದೇ ಪುರುಷ-ಮಹಿಳೆಯರು ತಮ್ಮ ಭಕ್ತಿ ಸಮರ್ಪಿಸಿದರು.ಇಡೀ ದಿನ ಪ್ರಸಾದ ವ್ಯವಸ್ಥೆ ಮಾಡಿದ ವಿದ್ಯಾರ್ಥಿ, ಯುವ ಜನರು, ಮಕ್ಕಳು, ಮಹಿಳೆಯರು ಸಂಜೆ ಹೊತ್ತಿಗೆ ತಾವು ಪ್ರಸಾದ ವಿತರಿಸಿದ್ದ ಸ್ಥಳವನ್ನೆಲ್ಲಾ ಸ್ವಚ್ಛಗೊಳಿಸುವ ಮೂಲಕ ಗಮನ ಸೆಳೆದರು. ಕೆಲವೆಡೆಯಂತೂ 3-4 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.
ಕೇಸರಿಮಯ ದಾವಣಗೆರೆಯಲ್ಲಿ ಮೊಳಗಿದ ಜೈ ಶ್ರೀರಾಮ ಘೋಷಣೆ
ನಗರದ ಬೀದಿ ಬೀದಿಗಳಲ್ಲಿ, ಕೇರಿ ಕೇರಿಗಳಲ್ಲಿ ಕೋದಂಡಧಾರಿ ಪ್ರಭು ಶ್ರೀರಾಮನ ಚಿತ್ರ, ಶ್ರೀರಾಮ-ಹನುಮ, ಪ್ರಭು ಶ್ರೀರಾಮಚಂದ್ರ, ಸೀತಾಮಾತೆ, ಲಕ್ಷ್ಮಣೆ, ಆಂಜನೇಯರನ್ನು ಒಳಗೊಂಡ ಫ್ಲೆಕ್ಸ್, ಅಯೋಧ್ಯೆ ಶ್ರೀರಾಮ ಮಂದಿರದ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ರಾಮ ಭಕ್ತರು ಕೇಸರಿ ಶಾಲುಗಳ ಧರಿಸಿ, ಬೆಳಿಗ್ಗೆಯೇ ದೇವಸ್ಥಾನಗಳಿಗೆ ತೆರಳಿ, ದರ್ಶನ ಮಾಡಿ ಅಯೋಧ್ಯೆಯಲ್ಲಿ ಅಮೃತ ಘಳಿಗೆಯಲ್ಲಿ ದೇವಸ್ಥಾನ, ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿದ್ದಂತೆ ಜೈ ಶ್ರೀರಾಮ ಜೈ ಶ್ರೀರಾಮ ಘೋಷಣೆಗಳು ಮೊಳಗಿದವು.
ಪಿಜೆ ಬಡಾವಣೆಯ ಶ್ರೀರಾಮ ಮಂದಿರ, ಕೋದಂಡರಾಮ ದೇವಸ್ಥಾನ, ವಿದ್ಯಾನಗರ ಶ್ರೀ ಆಂಜನೇಯ ದೇವಸ್ಥಾನ, ದತ್ತಾತ್ರೆಯ, ನಗರ ದೇವತೆ ಶ್ರೀ ದುಗ್ಗಮ್ಮದೇವಿ, ಶಂಕರಮಠ, ಶಾರದಾಂಬ ದೇವಸ್ಥಾನ, ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ಕೆಟಿಜೆ ನಗರ ಆಂಜನೇಯ ದೇವಸ್ಥಾನ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಶ್ರೀ ಗಣೇಶ ದೇವಸ್ಥಾನ ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ಸೋಮವಾರ ವಿಶೇಷ ಪೂಜೆ, ಅಭಿಷೇಕ, ಹೋಮ ಮಾಡಲಾಯಿತು. ಸಿಹಿ ಹಂಚಿ, ಪಾನಕ, ಕೋಸಂಬರಿ, ಅನ್ನ ಸಂತರ್ಪಣೆ ಸಂಜೆವರೆಗೂ ಮಾಡಲಾಯಿತು.
ನಗರ, ಜಿಲ್ಲಾದ್ಯಂತ ಊರು, ಕೇರಿ, ಜನ ವಸತಿ ಪ್ರದೇಶ, ಮಾರುಕಟ್ಟೆ, ಶಾಲಾ-ಕಾಲೇಜು, ಹಾಸ್ಟೆಲ್‌ಗಳ ಸಮೀಪ ರಾಮೋಧ್ಘಾರದ ಜೊತೆಗೆ ಅನ್ನ ದಾಸೋಹ, ಗೋಧಿ ಹುಗ್ಗಿ, ಕೇಸರಿ ಬಾತ್, ಅನ್ನ ಸಾಂಬಾರ್, ಪುಳಿಯೊಗರೆ ಸೇರಿದಂತೆ ಭಕ್ಷ್ಯ ಭೋಜನಗಳ ಲಕ್ಷಾಂತರ ಭಕ್ತರಿಗೆ ಸಮರ್ಪಿಸಿ ಸಂಘಟಕರೂ ಕೃತಾರ್ಥರಾದರು.