ಅಯೋಧ್ಯೆ ಹುಂಡಿ ಕಳವು ಪ್ರಕರಣ: ಸುಪ್ರೀಂ ತನಿಖೆಗೆ ಉಗ್ರಪ್ಪ ಆಗ್ರಹ

KannadaprabhaNewsNetwork |  
Published : Jun 28, 2026, 03:15 AM IST
ವಿ.ಎಸ್‌. ಉಗ್ರಪ್ಪ | Kannada Prabha

ಸಾರಾಂಶ

ಅಯೋಧ್ಯೆ ರಾಮಮಂದಿರದ ಹುಂಡಿ ಹಣ ಕಳವು ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.

ಬಳ್ಳಾರಿ: ಅಯೋಧ್ಯೆ ರಾಮಮಂದಿರದ ಹುಂಡಿ ಹಣ ಕಳವು ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಂಡಿ ಕಳವು ಪ್ರಕರಣ ಈ ಶತಮಾನದ ದೊಡ್ಡ ಹಗರಣವಾಗಿದೆ. ಪ್ರಕರಣದ ಕೆಲವು ಆರೋಪಿಗಳನ್ನು ಬಂಧಿಸಿದರಷ್ಟೇ ಸಾಲದು, ಇಡೀ ಪ್ರಕರಣ ಹಿಂದೆ ಯಾರಿದ್ದಾರೆ ಎಂಬುದು ಬಯಲಾಗಬೇಕು. ಹೀಗಾಗಿ ಕೇಂದ್ರ ಸರ್ಕಾರ ನ್ಯಾಯಾಧೀಶರ ಮೂಲಕ ತನಿಖೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಅಯೋಧ್ಯೆ ರಾಮಮಂದಿರ ಹುಂಡಿ ಕಳವು ಪ್ರಕರಣ ಬರೀ ಹಗರಣವಲ್ಲ, ಕೋಟ್ಯಂತರ ಭಕ್ತರ ನಂಬಿಕೆಗೆ ಮಾಡಿದ ದ್ರೋಹವಾಗಿದೆ. ಭಕ್ತರು ದೇವರ ಮೇಲಿನ ಭಕ್ತಿಯಿಂದ ನೀಡಿದ ಹಣವೇ ಸುರಕ್ಷಿತವಲ್ಲ ಎಂಬುದು ಆತಂಕದ ಸಂಗತಿಯಾಗಿದೆ. ಪ್ರಕರಣವನ್ನು ಸಾಮಾನ್ಯ ತನಿಖೆಗೆ ಒಳಪಡಿಸುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿಯೇ ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರಲ್ಲದೆ, ಪ್ರಕರಣ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ದೇಶಭಕ್ತಿ ಹಾಗೂ ಹಿಂದೂ ಧರ್ಮ ಕುರಿತು ಮಾತನಾಡುವವರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಪಕ್ಷದ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ: ರಾಜ್ಯ ಸರ್ಕಾರ ಶುಭಾರಂಭ ಮಾಡಿದೆ. ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಸಂಬಂಧಿಸಿದ ಜಮೀನು ಪರಭಾರೆ ವಿಷಯ ನ್ಯಾಯಾಂಗದಲ್ಲಿ ಇರುವುದರಿಂದ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ರಾಜ್ಯದಲ್ಲಿ ಬರ ಆವರಿಸಿದ್ದು, ಈ ಇಬ್ಬರು ನಾಯಕರು ರಾಜ್ಯ ತಿರುಗಾಟ ಮಾಡಿ ಬರ ಎದುರಿಸುತ್ತಿರುವ ಜನರ ಸಮಸ್ಯೆ ಆಲಿಸಬೇಕು. ಬರ ನಿರ್ವಹಣೆಗೆ ಪೂರಕ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಕೆಲವು ಶಾಸಕರು ಪ್ರತಿಭಟನೆ ನಡೆಸುವುದನ್ನು ಪಕ್ಷದ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪ್ರತಿಭಟನೆ ಮಾಡಿ ಒತ್ತಡ ತರಲು ಸಾಧ್ಯವಿಲ್ಲ. ಜಿಲ್ಲೆಯ ಶಾಸಕರ ಪೈಕಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವವರಿಗೆ ಸಚಿವ ಸ್ಥಾನದ ಜವಾಬ್ದಾರಿ ನೀಡಬೇಕು ಎಂಬುದು ನನ್ನ ಒತ್ತಾಸೆಯಾಗಿದೆ. ಅಧಿಕಾರದ ಮಜಾ ಹೊಡೆಯುವವರನ್ನು ದೂರ ಇಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಕೊಡುಗೆ ಏನು ಎಂಬುದು ಬಹಿರಂಗಪಡಿಸಲಿ. ಅವರಿಗೆ ನಿಜವಾಗಿಯೂ ಸಮುದಾಯದ ಮೇಲೆ ಬದ್ಧತೆ ಇದ್ದರೆ ಎಸ್ಟಿ ಮೀಸಲಾತಿ ಹೆಚ್ಚಿಸಲು ಸಂವಿಧಾನ ಶೆಡ್ಯೂಲ್ 9ಕ್ಕೆ ತಿದ್ದುಪಡಿ ತರಲು ಶ್ರೀರಾಮುಲು ಕೇಂದ್ರದ ಮೇಲೆ ಒತ್ತಡ ತರಲಿ ಎಂದು ಸವಾಲು ಹಾಕಿದರು.

ಮೇಯರ್ ಪಿ. ಗಾದೆಪ್ಪ, ಕಾಂಗ್ರೆಸ್ ಮುಖಂಡ ವೆಂಕಟೇಶ್ ಹೆಗಡೆ, ಕೆಪಿಸಿಸಿ ಸದಸ್ಯ ಎಲ್. ಮಾರೆಣ್ಣ, ವಿಷ್ಣು ಬೋಯಪಾಟಿ, ಲೋಕೇಶ್, ಗಂಗಾಧರ, ಜೋಳದರಾಶಿ ತಿಮ್ಮಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚರಂಡಿ ಸಮಸ್ಯೆಗೆ ರಸ್ತೆ ತಡೆ ಪ್ರತಿಭಟನೆ
ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಕಲಾಪ ಸ್ಥಗಿತ, ತಪಾಸಣೆ ನಡೆಸಿದ ಪೊಲೀಸರು