ಉಪರಾಷ್ಟ್ರಪತಿ ಸಿ.ಪಿ.ರಾಧಕೃಷ್ಣನ್ ಪ್ರತಿಪಾದನೆ । ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ। ವಿವಿಧ ಕ್ಷೇತ್ರದ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಮತ್ತು ತಮಿಳುನಾಡು ನಡುವಿನ ದೀರ್ಘಕಾಲದ ನೀರು ಹಂಚಿಕೆ ವಿವಾದಗಳಿಗೆ ನದಿಗಳ ಜೋಡಣೆಯೇ ಏಕೈಕ ಶಾಶ್ವತ ಪರಿಹಾರ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಪ್ರತಿಪಾದಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಶನಿವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜನ್ಮದಿನೋತ್ಸವ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜಕೀಯಕ್ಕಿಂತ ಎರಡೂ ರಾಜ್ಯಗಳ ರೈತರ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕು. ಹನಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿಯಲು ಬಿಡಬಾರದು. ಎರಡೂ ರಾಜ್ಯಗಳ ರೈತರ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಈ ಸಮಸ್ಯೆಗೆ ಅದೇ ನಿಜವಾದ ಪರಿಹಾರ. ಕೇವಲ ರಾಜಕೀಯ ಭಾಷಣಗಳಿಂದ ದಶಕಗಳಷ್ಟು ಹಳೆಯದಾದ ಕಾವೇರಿ ವಿವಾದವನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
*ಸಮುದ್ರಕ್ಕೆ ಹೋಗುವ ನೀರು ತಡೆಯಬೇಕು:
ಕೇಂದ್ರ ಸರ್ಕಾರವು ನದಿಗಳ ಜೋಡಣೆ ಕುರಿತು ಈಗಾಗಲೇ ಚರ್ಚೆಗಳನ್ನು ಪ್ರಾರಂಭಿಸಿದೆ. ದೇಶಾದ್ಯಂತ ರೈತರಲ್ಲಿ ನೀರಿನ ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಈ ಉಪಕ್ರಮವನ್ನು ಹಂತ ಹಂತವಾಗಿ ಜಾರಿಗೆ ತರಲು ಉದ್ದೇಶಿಸಿದೆ. ದೇಶಾದ್ಯಂತ ನದಿಗಳ ಜೋಡಣೆಯಿಂದ ಹೆಚ್ಚುವರಿ ನೀರನ್ನು ಎಲ್ಲಾ ರಾಜ್ಯಗಳ ನಡುವೆ ಹಂಚಿಕೊಳ್ಳಬಹುದು. ಸಮುದ್ರಕ್ಕೆ ಹೋಗುತ್ತಿರುವ ನೀರನ್ನು ಮೊದಲು ನಿಲ್ಲಿಸಬೇಕು. ಆ ನೀರನ್ನು ಎಲ್ಲಾ ರೈತರು ಸಮಾನವಾಗಿ, ನ್ಯಾಯಯುತವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ನಾನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದ ಸಮಯದಲ್ಲಿ ಸಾವಿರಾರು ಕಿ.ಮೀ ಪಾದಯಾತ್ರೆ ಮಾಡಿದ್ದೆ. ಈ ಸಂದರ್ಭದಲ್ಲಿ ಗಂಗಾ ಮತ್ತು ಕಾವೇರಿ ನದಿ ಜೋಡಣೆಯನ್ನು ಪ್ರತಿಪಾದಿಸಿದ್ದೆ ಎಂದು ಸ್ಮರಿಸಿದರು.
*ರೈತ ಯಾವಾಗಲೂ ರೈತನೇ:
ರೈತ ಯಾವಾಗಲೂ ರೈತನೇ. ಕನ್ನಡ, ತಮಿಳು, ತೆಲುಗು ಅಥವಾ ಮರಾಠಿ ಮಾತನಾಡಲಿ, ಅದು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಅವರು ನಮ್ಮೆಲ್ಲರಿಗೂ ಅನ್ನದಾತರು. ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ನದಿ ಜೋಡಣೆ ಯೋಜನೆಗಳನ್ನು ಹಂತ ಹಂತವಾಗಿ ಮುಂದುವರಿಸುವತ್ತಾ ಗಮನಹರಿಸಿದೆ. ತುಂಗಭದ್ರಾ ಅಣೆಕಟ್ಟೆ ನೂತನ ಗೇಟ್‌ಗಳ ಉದ್ಘಾಟನೆ ವೇಳೆ ದಕ್ಷಿಣ ಭಾರತದ ಮುಖ್ಯಮಂತ್ರಿಗಳು ಒಟ್ಟಾಗಿ ಭಾಗವಹಿಸಿದ್ದರು. ಇದು ಸಕಾರಾತ್ಮಕ ಹೆಜ್ಜೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
*ಕೆಂಪೇಗೌಡರು ದಾರ್ಶನಿಕ ವ್ಯಕ್ತಿ:
ನಾಡ ಪ್ರಭು ಕೆಂಪೇಗೌಡರು ಒಬ್ಬ ದಾರ್ಶನಿಕ. ಅವರ ಆಲೋಚನೆಗಳು ಅವರ ಕಾಲದ ಸುಮಾರು ಐದು ಶತಮಾನಗಳ ನಂತರವೂ ಆಧುನಿಕ ಬೆಂಗಳೂರನ್ನು ರೂಪಿಸುತ್ತಲೇ ಇವೆ. ಇಲ್ಲಿನ ಪ್ರತಿ ಬೀದಿ, ಪ್ರತಿ ಕೆರೆ, ಪ್ರತಿ ದೇವಾಲಯ ಮತ್ತು ಸಹಬಾಳ್ವೆ ಜೀವನ ನಾಡ ಪ್ರಭು ಕೆಂಪೇಗೌಡರ ಅಸಾಧಾರಣ ದೂರದೃಷ್ಟಿಗೆ ಜೀವಂತ ಉದಾಹರಣೆಯಾಗಿದೆ. ಐನೂರು ವರ್ಷಗಳ ಹಿಂದೆಯೇ ಬೆಂಗಳೂರನ್ನು ಪರಿಸರ ಸ್ನೇಹಿ ನಗರವಾಗಿ ರೂಪಿಸಲು ಅಡಿಪಾಯ ಹಾಕಿದ್ದರು. ಇಂದು ನಾವೆಲ್ಲಾ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡುತ್ತಿದ್ದೇವೆ. ಐನೂರು ವರ್ಷಗಳ ಹಿಂದೆಯೇ ಕೆಂಪೇಗೌಡರಿಗೆ ಪರಿಸರದ ಬಗ್ಗೆ ದೂರದೃಷ್ಟಿ ಇತ್ತು ಎಂದು ಹೇಳಿದರು.
ಕೆಂಪೇಗೌಡರನ್ನು ಆಡಳಿತಗಾರ ಎನ್ನುವುದಕ್ಕಿಂತ ಪರಿಸರ ದಾರ್ಶನಿಕ, ನಗರ ನಿರ್ಮಾತೃ, ಸಮಾಜ ಸುಧಾರಕ, ಸಂಸ್ಕೃತಿ ಪೋಷಕ ಎಂದು ಸ್ಮರಿಸುವ ಅಗತ್ಯವಿದೆ. ಕೆಂಪೇಗೌಡರ ದೀರ್ಘಕಾಲೀನ ಚಿಂತನೆ, ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರ ನಿರ್ಮಾಣದ ಆದರ್ಶಗಳನ್ನು ನಾವು ನೀವೆಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು.
*ಸಾಧಕರಿಗೆ ಪ್ರಶಸ್ತಿ ಪ್ರದಾನ:
ಇದಕ್ಕೂ ಮುನ್ನ ಇನ್ಫೋಸಿಸ್ ಸಂಸ್ಥೆ ಮಾಜಿ ಮುಖ್ಯಸ್ಥ ಟಿ.ವಿ.ಮೋಹನ್ ದಾಸ್ ಪೈ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ್ ಅವರಿಗೆ ‘ನಾಡಪ್ರಭು ಕೆಂಪೇಗೌಡ’ ರಾಷ್ಟ್ರೀಯ ಪ್ರಶಸ್ತಿ ಮತ್ತು ವಿವಿಧ ಕ್ಷೇತ್ರಗಳ ಸಾಧಕರಾದ ಎಸ್.ವಿ.ರಂಗನಾಥ್, ಎಚ್.ಎ.ರಂಗನಾಥ್, ಎಂ.ಆರ್.ಜೈ ಶಂಕರ್, ಬಿ.ಎಂ.ಕೊಕರೆ, ಡಾ.ವಾಮದೇವಪ್ಪ, ಕೇಶವ ಆಮೈ, ವಿಕ್ರಮ್ ಮುತ್ತಣ್ಣ, ಜಯಪ್ರಕಾಶ ಗೌಡ, ರವಿಕುಮಾರ್, ಯಶಸ್ವಿನಿ ಶರ್ಮ, ಪ್ರೇಮಾ ಗಣೇಶ್, ರಶ್ಮಿ ಸಾವಂತ್, ತ್ರಿಸ್ಟಾ ರಾಮಮೂರ್ತಿ, ಧರ್ಮೇಂದ್ರ ಮತ್ತು ಮಹೇಶ್ ಗೌಡ ಅವರಿಗೆ ಕೆಂಪೇಗೌಡ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು ಐದು ಶತಮಾನಗಳ ಹಿಂದೆ ಕೆಂಪೇಗೌಡರು ಕನಸು ಕಂಡ ಬೆಂಗಳೂರು ನಗರ ಇಂದು ವಿಶ್ವದ ನಾವೀನ್ಯತೆ, ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಪ್ರಮುಖ ಕೇಂದ್ರವಾಗಿ ಬೆಳೆದಿರುವುದು ಅವರ ದೂರದೃಷ್ಟಿಯ ಆಡಳಿತಕ್ಕೆ ಜೀವಂತ ಸಾಕ್ಷಿಯಾಗಿದೆ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.