ಆಯುಧ ಪೂಜೆ, ದಸರಾ ಆಚರಣೆಗೆ ಭರ್ಜರಿ ಸಿದ್ಧತೆ

KannadaprabhaNewsNetwork |  
Published : Oct 11, 2024, 11:55 PM IST
೧೦ಎಚ್‌ವಿಆರ್೧- | Kannada Prabha

ಸಾರಾಂಶ

ನಾಡ ಹಬ್ಬ ದಸರಾ ಹಾಗೂ ಶುಕ್ರವಾರ ಮಹಾನವಮಿಯಂದು ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲು ಜಿಲ್ಲಾದ್ಯಂತ ಭರದ ಸಿದ್ಧತೆ ನಡೆದಿದೆ.

ಹಾವೇರಿ: ನಾಡ ಹಬ್ಬ ದಸರಾ ಹಾಗೂ ಶುಕ್ರವಾರ ಮಹಾನವಮಿಯಂದು ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲು ಜಿಲ್ಲಾದ್ಯಂತ ಭರದ ಸಿದ್ಧತೆ ನಡೆದಿದೆ.ಮಹಾನವಮಿ ಹಬ್ಬದ ಅಂಗವಾಗಿ ಮಹಿಳೆಯರು ೯ ದಿನಗಳ ಕಾಲ ಬನ್ನಿ, ಮಹಾಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕೊನೆಯ ದಿನದ ಹಬ್ಬದ ಆಚರಣೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಹಬ್ಬದ ಪೂರ್ವ ತಯಾರಿಯಾಗಿ ಜನತೆ ಬಗೆ-ಬಗೆಯ ಹೂವು, ಹಣ್ಣು ಸೇರಿದಂತೆ ಇತರ ದಿನಸಿ ಖರೀದಿಗೆ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಆಯುಧ ಪೂಜೆ ಹಾಗೂ ವಿಜಯದಶಮಿ ಪೂಜೆಗಾಗಿ ಮಾರುಕಟ್ಟೆಗೆ ವಿವಿಧ ಹೂಗಳು ಬಂದಿದ್ದು ಚೆಂಡು ಹೂ ಹಾಗೂ ಸೇವಂತಿಗೆ ಹೂ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಮಹಾನವಮಿ ಹಬ್ಬದ ಹಿನ್ನೆಲೆ ಗುರುವಾರ ಮಾರುಕಟ್ಟೆಗೆ ಆಗಮಿಸಿ ಪೂಜಾ ಸಾಮಗ್ರಿ, ಹೂವು ಹಣ್ಣು ಖರೀದಿಯಲ್ಲಿ ತೊಡಗಿದ್ದು, ಬೆಲೆಯೇರಿಕೆ ಬಿಸಿ ಜನರನ್ನು ಕಾಡುತ್ತಿದೆ. ಹೂವು, ಹಣ್ಣಿನ ಬೆಲೆಯಲ್ಲಿ ಪ್ರತಿವರ್ಷಕ್ಕೆ ಹೋಲಿಸಿದರೆ ದರ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುತ್ತಿದೆ. ಆಯುಧ ಪೂಜೆ ದಿನ ವಾಹನ, ಯಂತ್ರೋಪಕರಣಗಳನ್ನು ಹೂವಿನಿಂದ ಅಲಂಕಾರ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹೂವುಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತು. ನಗರದ ಎಂ.ಜಿ.ರಸ್ತೆ, ಸಂತೆ ಮಾರುಕಟ್ಟೆ, ಬಸ್ ನಿಲ್ದಾಣ, ಕಾಗಿನೆಲೆ ಕ್ರಾಸ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ತಾತ್ಕಾಲಿಕ ಅಂಗಡಿ ತೆರೆದ ವ್ಯಾಪಾರಸ್ಥರು, ರಸ್ತೆಯಲ್ಲಿ ಸಾಗುತ್ತಿದ್ದ ಗ್ರಾಹಕರನ್ನು ಸೆಳೆಯಲು ಪೈಪೋಟಿ ನಡೆಸಿದರು. ಗುರುವಾರ ಮಾರುಕಟ್ಟೆಯಲ್ಲಿ ಒಂದು ಕೆಜಿ ಗುಲಾಬಿ(ಪೆಟಲ್) ೪೦೦ ರು., ಸೇವಂತಿ ೨೫೦-೩೦೦ ರು., ಚಂಡು ಹೂ ಕೆಜಿಗೆ ೬೦-೮೦ ರು., ಒಂದು ಮಾರು ಮಲ್ಲಿಗೆ ೭೦-೮೦ ರು., ಕನಕಾಂಬರ ೧೨೦ ರು., ಗುಲಾಬಿ ಒಂದು ಕಟ್ಟಿಗೆ ೧೫೦-೨೦೦ ರು., ಸೂಜಿಮಲ್ಲಿಗೆ ಕೆಜಿಗೆ ೪೦೦ ರು. ಮಾರಾಟವಾಗುತ್ತಿದ್ದವು. ಆಯುಧ ಪೂಜೆ ದಿನ ವಾಹನ, ಯಂತ್ರೋಪಕರಣಗಳಿಗೆ ಹೂವಿನಿಂದ ಅಲಂಕರಿಸಲು ಹೂವಿನ ಹಾರಗಳ ಮಾರಾಟ ಜೋರಾಗಿ ಸಾಗಿತ್ತು. ಇನ್ನು ಹಣ್ಣುಗಳ ದರವೂ ಏರಿಕೆಯಾಗಿದೆ. ಡಜನ್ ಬಾಳೆಹಣ್ಣು ೪೦-೫೦ ರು., ಏಲಕ್ಕಿ ಬಾಳೆ ೬೦-೭೦ ರು., ಸೇಬು ೧೨೦-೧೮೦, ಒಂದು ಜೊತೆ ಅನಾನಸ್ ೭೦-೧೦೦, ದಾಳಿಂಬೆ ೧೮೦, ಮೋಸಂಬಿ ೬೦-೮೦ ರು. ಮಾರಾಟವಾಗುತ್ತಿದೆ. ಬಾಳೆಕಂಬ ಜೋಡಿಗೆ ೪೦-೫೦ ರು. ಮಾರಾಟವಾಗುತ್ತಿದ್ದವು. ಇನ್ನು ಬೂದುಗುಂಬಳಕಾಯಿ ಗಾತ್ರಕ್ಕೆ ಅನುಗುಣವಾಗಿ ೧೦೦-೨೫೦ ರು. ವರೆಗೆ ಮಾರಾಟವಾಗುತ್ತಿದ್ದವು. ಜನರು ಚೌಕಾಸಿ ಮಾಡಿ ಖರೀದಿಸುತ್ತಿರುವುದು ಕಂಡು ಬಂದಿತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌