ಗದಗ: ಆರೋಗ್ಯ ಮತ್ತು ನೆಮ್ಮದಿ ಮನುಷ್ಯನ ನಿಜವಾದ ಸಂಪತ್ತುಗಳಾಗಿವೆ. ಆಯುರ್ವೇದ ಎಂದರೆ ಆರೋಗ್ಯದಿಂದಿರುವುದು ಎಂದರ್ಥವಾಗಿದೆ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ನಮ್ಮ ಪೂರ್ವಿಕರು ಆರೋಗ್ಯ ಕಾಪಾಡಿಕೊಳ್ಳುವುದಕ್ಕೋಸ್ಕರ ಒಳ್ಳೆಯ ಆಹಾರ, ವಿಹಾರ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದರು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆಗಳ ಆಶ್ರಯದಲ್ಲಿ ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ ಎಂಬ ಘೋಷವಾಕ್ಯದಡಿ ಧನ್ವಂತರಿ ಜಯಂತಿ ಅಂಗವಾಗಿ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಹಿರಿಯರು ನಿತ್ಯ ಕರ್ಮದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ತಿಳಿದು ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಆರೋಗ್ಯದ ಹಿತದೃಷ್ಟಿಯಿಂದ ಯಾವ ಋತುಗಳಿಗೆ ಏನು ತಿನ್ನಬೇಕು ಎಂದು ತಿಳಿದುಕೊಳ್ಳುತ್ತಿದ್ದರು. ಆಯುರ್ವೇದದಿಂದ ಆರೋಗ್ಯಕರ ಸಮಾಜ ನಿರ್ಮಿಸಬಹುದಾಗಿದೆ. ಮನುಷ್ಯನು ಉತ್ಸಾಹದಿಂದಿರಲು ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡು ಅಮೂಲ್ಯವಾಗಿವೆ. ಆಯುರ್ವೇದ ಪದ್ಧತಿ ಪ್ರಕಾರ ಪ್ರತಿಯೊಬ್ಬರೂ ಉತ್ತಮ ಆಹಾರ ಪದ್ಧತಿ, ಯೋಗ, ಧ್ಯಾನ ಅಳವಡಿಸಿಕೊಂಡು ಆರೋಗ್ಯಕರ ಜೀವನ ನಡೆಸಬಹುದು ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಆಯುಷ್ ಇಲಾಖೆಯ ವೈದ್ಯರು ಕೈಗೊಂಡ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು ಹಾಗೂ ಪ್ರತಿಯೊಬ್ಬರೂ ಆಯುರ್ವೇದ ಔಷಧಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದರು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ಶ್ರೇಷ್ಠ ಚಿಕಿತ್ಸೆಯಾಗಿದೆ. ಇಂದಿನ ದಿನಮಾನಗಳಲ್ಲಿ ಕಲಬೆರಕೆ ಆಹಾರದಿಂದ, ನಿಗದಿತ ಸಮಯದಲ್ಲಿ ಊಟ ಮಾಡದೇ ಇರುವುದರಿಂದ, ರೋಗ ರುಜಿನಗಳನ್ನು ನಾವೇ ಬರಮಾಡಿಕೊಳ್ಳುತ್ತಿದ್ದೇವೆ. ಆಯುರ್ವೇದ ಚಿಕಿತ್ಸೆಯಲ್ಲಿ ವಿಶೇಷ ಶಕ್ತಿಯಿದೆ. ಆಯುರ್ವೇದ ಚಿಕಿತ್ಸೆಗಳು ಪ್ರಾಚೀನ ಚಿಕಿತ್ಸೆಗಳಾಗಿದ್ದು, ರೋಗಗಳನ್ನು ಯಾವುದೇ ದುಷ್ಪರಿಣಾಮ ಇಲ್ಲದೇ ಗುಣಪಡಿಸುವ ಶಕ್ತಿ ಇದಕ್ಕಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಸಮೋರೇಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು 10ನೇ ರಾಷ್ಟ್ರೀಯ ಆಯುರ್ವೇದ ದಿನವನ್ನು ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ ಎಂಬ ಘೋಷವಾಕ್ಯದಡಿ ಆಚರಿಸುತ್ತಿದ್ದೇವೆ. ಆಯುರ್ವೇದ ಚಿಕಿತ್ಸೆಯಿಂದ ರೋಗಿಗಳು ಯಾವುದೇ ದುಷ್ಪರಿಣಾಮ ಇಲ್ಲದೇ ಗುಣಮುಖ ಹೊಂದಿ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದರು.ಈ ಸಂದರ್ಭದಲ್ಲಿ ಆಯುಷ್ ಇಲಾಖೆಯ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಪಾಪನಾಶಿ ಹಾಗೂ ಅಂತೂರು- ಬೆಂತೂರು ಆಯುಷ್ಮಾನ್ ಆರೋಗ್ಯ ಮಂದಿರದ ಯೋಗ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಜರುಗಿತು.ಡಾ. ಮಹೇಶ ಹಿರೇಮಠ ಅವರು ಅನಾರೋಗ್ಯದಿಂದ ಆರೋಗ್ಯದ ಕಡೆಗೆ ಹಾಗೂ ಡಾ. ಪ್ರವೀಣ ಸರ್ವದೆ ಬೊಜ್ಜು ನಿವಾರಣೆಯಲ್ಲಿ ಆಹಾರದ ಪಾತ್ರ ಕುರಿತು ಉಪನ್ಯಾಸ ನೀಡಿದರು. ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಇದ್ದರು. ಡಾ. ಬಿ.ಎಂ.ಲೋಕಾಪುರ ಸ್ವಾಗತಿಸಿದರು. ಡಾ. ಅಶೋಕ ಮತ್ತಿಗಟ್ಟಿ ಧ್ವನಂತರಿ ಸ್ತೋತ್ರವನ್ನು ಪಠಿಸಿದರು. ಡಾ. ನೇತ್ರಾವತಿ ರಾಯ್ಕರ್ ಪ್ರಾರ್ಥಿಸಿದರು. ಡಾ. ಸಂಜೀವ ನಾರಪ್ಪನವರ ನಿರೂಪಿಸಿದರು. ಡಾ. ಕಮಲಾಕರ ಅರಳೆ ವಂದಿಸಿದರು.