ಕನ್ನಡಪ್ರಭ ವಾರ್ತೆ ವಿಜಯಪುರ
ಆಯುರ್ವೇದ ಎಂದರೆ ನಮ್ಮ ಆಹಾರ, ವಿಹಾರ, ವಿಚಾರ, ವ್ಯವಹಾರ, ಇವೆಲ್ಲವುಗಳಲ್ಲಿನ ಬದಲಾವಣೆಗಳು ನಮ್ಮ ಆರೋಗ್ಯವನ್ನು ಕಾಯಿಲೆ ರಹಿತ ಜೀವನವನ್ನಾಗಿ ರೂಪಿಸಿಕೊಳ್ಳಲು ಸಹಕರಿಸುತ್ತವೆ ಎಂದು ದೇವನಹಳ್ಳಿ ಆಯುರ್ವೇದ ಆಸ್ಪತ್ರೆಯ ಡಾ.ಕುಮಾರ್ ತಿಳಿಸಿದರು.ರೋಟರಿ ಕ್ಲಬ್ ಆಶ್ರಯದಲ್ಲಿ ದೇವನಹಳ್ಳಿ ಆಯುರ್ವೇದ ಆಸ್ಪತ್ರೆ, ಯೋಗ, ನ್ಯಾಚುರಪತಿ ಸ್ವಾಸ್ಥ್ಯ ಕೇಂದ್ರ ಹಾಗೂ ದೊಡ್ಡಬಳ್ಳಾಪುರದ ಆತ್ರೇಯ ಆಯುರ್ವೇದ ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆಯುರ್ವೇದ ಆರೋಗ್ಯ ಶಿಬಿರ ಮತ್ತು ಔಷಧ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಯುರ್ವೇದದ ಮುಖ್ಯ ಉದ್ದೇಶ ಧರ್ಮ, ಅರ್ಥ, ಕಾಮ, ಮೋಕ್ಷ ಈ ನಾಲ್ಕು ವಿಧಿಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಲು, ನಮಗೆ ಆರೋಗ್ಯ ಮುಖ್ಯ, ಅದು ಬೇಕೆಂದರೆ ಜೀವನದಲ್ಲಿ ಆಯುರ್ವೇದ ಪದ್ಧತಿ ಪಾಲಿಸಬೇಕು. ಆಯುರ್ವೇದ ಕೇವಲ ಔಷಧಿ ಕೊಡುವ ಶಾಸ್ತ್ರ ಮಾತ್ರವಾಗಿರದೆ, ಔಷಧವಿಲ್ಲದೆ ನಮ್ಮ ಜೀವನವನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎಂದೂ ತಿಳಿಸಿಕೊಡುತ್ತದೆ ಎಂದರು.ದೊಡ್ಡಬಳ್ಳಾಪುರದ ಆತ್ರೇಯ ಮೆಡಿಕಲ್ ಕಾಲೇಜಿನ ಡಾ.ಶೋಯೆಬ್ ಅಹಮದ್ ಮಾತನಾಡಿ, ಹುಟ್ಟಿದ ಮಗುವಿನಿಂದ ಸಾಯುವವರೆಗಿನ ಎಲ್ಲಾ ವಯಸ್ಸಿನವರಿಗೂ ಆಯುರ್ವೇದದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಔಷಧಗಳಿವೆ. ನಮ್ಮ ಮನೆ ಹಿತ್ತಲಿನ ಮೂಲಂಗಿ, ಪುದೀನಾ ಮತ್ತಿತರ ಸೊಪ್ಪುಗಳಲ್ಲಿ ಹಾಗೂ ಅಡುಗೆ ಮನೆಯಲ್ಲಿ ಬಳಸುವ ಮಸಾಲೆ ಪದಾರ್ಥಗಳಲ್ಲಿನ ಔಷಧಗಳನ್ನು ಬಿಟ್ಟು ಎಲ್ಲೆಲ್ಲಿಯೋ ಇರುವ ದೊಡ್ಡ ಆಸ್ಪತ್ರೆ, ವೈದ್ಯರನ್ನು ಹುಡುಕಿಕೊಂಡು ಅಲೆದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಡಾ. ವಿಶ್ವ, ಡಾ.ಅನು ಆನಂದ್, ಸಹಾಯಕ ವೈದ್ಯರಾದ ತನುಶ್ರೀ, ಗಿರೀಶ್, ರಿಷಬ್ ರಾಜ್, ಶ್ರದ್ಧಾ, ಸೌರಭ, ಆತ್ರೆಯ, ವೈಶಾಲಿ ಹಾಗೂ ಸಿಬ್ಬಂದಿ ೬೦ಕ್ಕೂ ಹೆಚ್ಚು ರೋಗಿಗಳ ತಪಾಸಣೆ, ಉಚಿತ ಔಷಧೋಪಚಾರ ಮಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ವಿನಯ್, ಮಾಜಿ ಅಧ್ಯಕ್ಷರಾದ ಬಸವರಾಜು, ರವಿಶಂಕರ್, ಸಿದ್ದರಾಜು, ಎಎಂ ಮಂಜುಳಾ, ಸದಸ್ಯರಾದ ಪುನೀತ್, ಕಿರಣ್, ನರೇಂದ್ರ, ಇತರರು ಉಪಸ್ಥಿತರಿದ್ದರು.