ಆಯುರ್ವೇದ ನಡಿಗೆ ಜಾಥಾಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಹೊಸಪೇಟೆಪ್ರತಿಯೊಬ್ಬರಲ್ಲಿ ಯಾವುದೇ ದೈಹಿಕ ಮತ್ತು ಮಾನಸಿಕ ಸಮಸ್ಯೆ ಇಲ್ಲದೆ ಸದೃಢ ಆರೋಗ್ಯ ಜೀವನ ನಡೆಸಲು ಆಯುರ್ವೇದ ಗಿಡಮೂಲಿಕೆಗಳು ಮತ್ತು ಔಷಧಿಗಳೇ ಸೂಕ್ತ ಎಂದು ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಮುನಿವಾಸುದೇವ ರೆಡ್ಡಿ ಹೇಳಿದರು.
ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಆಯುಷ್ ಫೆಡೆರೇಷನ್ ಆಫ್ ಇಂಡಿಯಾ (ಎಎಫ್‌ಐ) ಜಿಲ್ಲಾ ಘಟಕ, ಪತಂಜಲಿ ಯೋಗ ಸಂಸ್ಥೆ ಮತ್ತು ಟಿಎಂಎಇ ನರ್ಸಿಂಗ್ ಕಾಲೇಜ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಆಯುರ್ವೇದ ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.ಪುರಾತನ ಕಾಲದಿಂದಲೂ ದೇಶಿಯ ಆಯುರ್ವೇದ ಚಿಕಿತ್ಸೆಗೆ ಬಹಳಷ್ಟು ಮಹತ್ವವಿದೆ. ಆಯುರ್ವೇದವು ಕೇವಲ ರೋಗಲಕ್ಷಣ ನಿಗ್ರಹಿಸುವುದಲ್ಲದೆ, ಸಮಸ್ಯೆಯ ಮೂಲ ಕಾರಣವನ್ನು ಗುರುತಿಸಿ ಚಿಕಿತ್ಸೆ ನೀಡಲು ಸೂಕ್ತ ವೈದ್ಯಕೀಯ ಕ್ರಮವಾಗಿದೆ. ದೇಹದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಔಷಧೋಪಚಾರವಿದೆ. ಪ್ರತಿ ವ್ಯಕ್ತಿಯ ದೇಹದ ಪ್ರಕೃತಿ (ದೋಷಗಳು) ವಿಭಿನ್ನವಾಗಿರುತ್ತದೆ. ಆಯುರ್ವೇದವು ಪ್ರತಿಯೊಬ್ಬರಿಗೂ ವ್ಯಕ್ತಿಯ ಪ್ರಕೃತಿ ಅನುಸಾರವಾಗಿ ಚಿಕಿತ್ಸೆ ನೀಡುವ ಮೂಲಕ ಶಾಶ್ವತ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಬಹುದು ಎಂದರು.
ಆಯುಷ್ ವೈದ್ಯಾಧಿಕಾರಿ ಡಾ. ಕೆ.ಎಚ್. ಗುರುಬಸವರಾಜ್ ಮಾತನಾಡಿ, ಆಯುರ್ವೇದ ಚಿಕಿತ್ಸೆಯು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ದೇಹವನ್ನು ಒಳಗಿನಿಂದ ಬಲಪಡಿಸುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸುತ್ತದೆ. ಇದರಿಂದಾಗಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಶೀಘ್ರ ಚೇತರಿಕೆ ಸಾಧ್ಯವಿದೆ. ಆಯುರ್ವೇದದ ಬಗ್ಗೆ ಸಾರ್ವಜನಿಕರು ಹೆಚ್ಚಿನ ಆಸಕ್ತಿಯನ್ನು ಹೊಂದುವ ಮೂಲಕ ಚಿಕಿತ್ಸೆಗೆ ಮುಂದಾಗಬೇಕಿದೆ. ಆಯುರ್ವೇದವು ಪ್ರತಿಯೊಬ್ಬರು ನಂಬಿಕೆಯಿಂದ ಚಿಕಿತ್ಸೆ ಪಡೆದು ಇದೇ ಚಿಕಿತ್ಸಾ ವಿಧಾನವನ್ನು ಬಯಸುವಂತ ದಿನಗಳು ಸನ್ನಿಹಿತವಾಗಿವೆ. ಆಯುರ್ವೇದ ಜೀವನ, ಆರೋಗ್ಯ ಮತ್ತು ಎಲ್ಲಾ ಋತುಗಳ ಬಗ್ಗೆ ಹೇಳುವಂತಹ ಅದ್ಬುತ ವಿಜ್ಞಾನವಾಗಿದೆ. ಆಯುರ್ವೇದವು ಯೋಗ, ಧ್ಯಾನ, ಮಸಾಜ್ ಮತ್ತು ಉಸಿರಾಟದ ವ್ಯಾಯಾಮಗಳ ಮೂಲಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ ಎಂದರು.ಸೆ.23 ರಂದು ನಡೆಯಲಿರುವ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ನಿಮಿತ್ತ ಆಯುರ್ವೇದದ ಮಹತ್ವ, ಉದ್ದೇಶ, ಪರಿಣಾಮಕಾರಿ ಚಿಕಿತ್ಸೆ ಮತ್ತು ವಿವರಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಯುರ್ವೇದ ನಡಿಗೆ ಜಾಥಾವನ್ನು ನಡೆಸಲಾಯಿತು. ಜಾಥಾವು ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆವರಣದಿಂದ ಆರಂಭಗೊಂಡು ಗಾಂಧಿ ಚೌಕ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಪುನೀತ್ ರಾಜಕುಮಾರ್ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಎಲ್‌ಎಫ್‌ಎಸ್ ಶಾಲೆ, ನಗರಸಭೆ ಕಚೇರಿ ಮಾರ್ಗವಾಗಿ ಸರ್ಕಾರಿ ಆಯುರ್ವೇದ ಆಸ್ಪತ್ರೆವರೆಗೆ ಪ್ರಮುಖ ಬೀದಿಗಳಲ್ಲಿ ಆಯುರ್ವೇದ ನಡಿಗೆ ಜಾಥಾ ನಡೆಸಲಾಯಿತು. ಬಳಿಕ ಎಲ್ಲಾ ಆಧಿಕಾರಿಗಳು ಮತ್ತು ವಿದ್ಯಾರ್ಥಿಗಳು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ವೇಳೆಯಲ್ಲಿ ಆಯುಷ್ ಇಲಾಖೆಯ ಡಾ. ಶಿವಶರಣಯ್ಯ, ಡಾ. ರೂಪ್ ಸಿಂಗ್ ರಾಥೋಡ್, ಡಾ. ಹೇಮಲತಾ, ಎಎಫ್‌ಐ ಘಟಕದ ಡಾ. ಕೇದಾರ್ ದಂಡಿನ್, ಡಾ. ಬಿ.ವಿ. ಭಟ್, ಪತಂಜಲಿ ಯೋಗ ಸಂಸ್ಥೆಯ ಕಿರಣ್ ಗುರೂಜಿ, ರಾಜೇಶ್ ಕಾರ್ವಾ ಸೇರಿ ಆಯುಷ್ ಇಲಾಖೆ ವಿವಿಧ ಅಧಿಕಾರಿಗಳು ಮತ್ತು ಎಎಫ್‌ಐ ಸಂಸ್ಥೆಯ ಸದಸ್ಯರು, ಪತಂಜಲಿ ಯೋಗ ಸಂಸ್ಥೆಯ ಸದಸ್ಯರು ಮತ್ತು ಟಿಎಂಎಇ ನರ್ಸಿಂಗ್ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.