ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ತಾಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಫೆ. 28ರಂದು ಮಧ್ಯಾಹ್ನ 2ಗಂಟೆಗೆ ಎಜಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆರಂಭವಾಗಲಿವೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ನವಗ್ರಹ ತೀರ್ಥಕ್ಷೇತ್ರದ ಅಧಿಪತಿ ಗುಣಧರನಂದಿ ಮಹಾರಾಜರು, ಪದ್ಮಾವತಿ ದೇವಿಯ ಶಕ್ತಿಪೀಠ ನಿರ್ಮಾಣಕ್ಕೆ ಶಂಕುಸ್ಥಾಪನೆ, ಎಜಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ಹಾಗೂ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಆಡಳಿತ ವಿಭಾಗದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಲಿವೆ ಎಂದರು.
ಕಾರ್ಯಕ್ರಮಕ್ಕೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವ ಡಾ. ಎಸ್. ಜಯಶಂಕರ್ ಚಾಲನೆ ನೀಡುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಶ್ವಶಾಂತಿ ಸಂಸ್ಥೆಯ ಸಂಸ್ಥಾಪಕ ಪಪೂ. ಆಚಾರ್ಯ ಡಾ. ಲೋಕೇಶ ಮುನಿ ಪಾಲ್ಗೊಳ್ಳಲಿದ್ದಾರೆ ಎಂದರು.ಕೊರೋನಾ ಸಂಕಷ್ಟದ ಬಳಿಕ ಇಡೀ ಜಗತ್ತಿಗೆ ಆಯುರ್ವೇದದ ಮಹತ್ವ ತಿಳಿದಿದೆ. ಅದನ್ನು ಇನ್ನಷ್ಟು ಪ್ರಚುರ ಪಡಿಸುವ ಉದ್ದೇಶದಿಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ. ಇದರೊಂದಿಗೆ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯ ಹೊಂದಿರುವ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಆಡಳಿತ ವಿಭಾಗದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಪ್ರೊ. ಸಂದೀಪ ಕ್ಯಾತನವರ, ಡಾ. ಎಸ್.ಎ. ಶ್ರೀನಿವಾಸ, ಡಾ. ಆಕಾಶ ಕೆಂಭಾವಿ ಹಾಗೂ ಡಾ. ಆನಂದ ಕುಲಕರ್ಣಿ ಇದ್ದರು.ಬೇಡಿಕೆ ಈಡೇರಿಸುವ ಭರವಸೆಯಿದೆ
ಈಚೆಗೆ ಬೆಳಗಾವಿಯ ಜೈನ ಮುನಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಜೈನಮುನಿಗಳಲ್ಲಿ ಭಯ, ತಲ್ಲಣಕ್ಕೆ ಕಾರಣವಾಗಿತ್ತು. ನಮಗೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಸೂಕ್ತ ಭದ್ರತೆ ಒದಗಿಸಿದೆ. ಆದರೆ, ಇಂದಿಗೂ ಅನೇಕ ಜೈನ ಮುನಿಗಳಲ್ಲಿ ಭಯವಿದೆ. ಈ ಸಂಬಂಧ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಹಿಂದೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಕೆಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಇನ್ನೂ ಕೆಲವು ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುವುದಾಗಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಷನದ ವೇಳೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಆದಷ್ಟು ಬೇಗನೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲಿ ಎಂದು ಆಗ್ರಹಿಸಿದರು.