ಜ.31, ಫೆ.1ರಂದು ಮಂಗಳೂರಲ್ಲಿ ಆಯುಷ್‌ ಹಬ್ಬ

KannadaprabhaNewsNetwork |  
Published : Jan 06, 2026, 03:15 AM IST
ಆಯುಷ್‌ ಹಬ್ಬದ ಪೋಸ್ಟರ್‌ ಬಿಡುಗಡೆಗೊಳಿಸುತ್ತಿರುವ ಸ್ಪೀಕರ್‌ ಯು.ಟಿ. ಖಾದರ್‌. | Kannada Prabha

ಸಾರಾಂಶ

‘ಆಯುಷ್ ಹಬ್ಬ- 2026’ ಜ.31 ಮತ್ತು ಫೆ.1ರಂದು ನಗರದ ಡಾ.ಟಿ.ಎಂ.ಎ. ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯಲಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.

ಮಂಗಳೂರು: ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಕುರಿತು ಜಾಗೃತಿ ಮೂಡಿಸುವ ‘ಆಯುಷ್ ಹಬ್ಬ- 2026’ ಜ.31 ಮತ್ತು ಫೆ.1ರಂದು ನಗರದ ಡಾ.ಟಿ.ಎಂ.ಎ. ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯಲಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.

ಆಯುಷ್ ಇಲಾಖೆ, ಎಲ್ಲ ಆಯುಷ್ ಆಸ್ಪತ್ರೆಗಳು ಮತ್ತು ಕಾಲೇಜುಗಳು, ಆಯುಷ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿರುವ ಆಯುಷ್ ಹಬ್ಬದ ಪೋಸ್ಟರ್‌ನ್ನು ಶನಿವಾರ ಬಿಡುಗಡೆಗೊಳಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾನು ಹಿಂದೆ ಆರೋಗ್ಯ ಸಚಿವನಾಗಿದ್ದಾಗ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯುಷ್‌ ಹಬ್ಬ ಆಯೋಜಿಸಿದ್ದು ಯಶಸ್ವಿಯಾಗಿ ನೆರವೇರಿತ್ತು. ಆಯುಷ್ ವೈದ್ಯಕೀಯ ಪದ್ಧತಿಯು ನಮ್ಮ ಋಷಿಮುನಿಗಳ ಕೊಡುಗೆ. ಅದನ್ನು ಉಳಿಸಿಕೊಳ್ಳುವ ಕೆಲಸ ಈ ಮೂಲಕ ನಡೆಯಲಿದೆ ಎಂದರು.

ಆಯುಷ್ ಹಬ್ಬ ಸಮಿತಿಯ ಗೌರವಾಧ್ಯಕ್ಷೆ ಡಾ. ಆಶಾಜ್ಯೋತಿ ರೈ ಮಾತನಾಡಿ, ಆಯುಷ್ ಚಿಕಿತ್ಸಾ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಾಥಮಿಕ ಉದ್ದೇಶ. ಸುಮಾರು 5,000 ವೈದ್ಯರು, 10,000 ಆಯುಷ್ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು 20,000ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಾರ್ವಜನಿಕರಿಗೆ ಪ್ರವೇಶ ಉಚಿತ. 50 ಸ್ಟಾಲ್‌ಗಳ ಮೂಲಕ ಸಮಗ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ನೋಂದಾಯಿಸಿಕೊಂಡವರಿಗೆ ಉಚಿತವಾಗಿ ನಾಡಿ ಪರೀಕ್ಷೆ ಜತೆಗೆ ಉಚಿತ ಆರೋಗ್ಯ ಶಿಬಿರ ನಡೆಸಲಾಗುವುದು. ಜತೆಗೆ ಹಿರಿಯ ನಾಗರಿಕರಿಗೆ ಆಯುಷ್ ಆರೈಕೆ, ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಬೇಕಾದ ಜೀವನಶೈಲಿ ಮತ್ತು ಒತ್ತಡ ನಿರ್ವಹಣಾ ಶಿಬಿರಗಳು, ಆರೋಗ್ಯಕ್ಕೆ ಅಗತ್ಯವಾದ ಪೌಷ್ಟಿಕ ಆಹಾರ ಮಾಹಿತಿ ಮತ್ತು ಆರೋಗ್ಯಕರ ಆಹಾರ ಉತ್ಸವವೂ ಇರಲಿದೆ. ಸರಳ ಆಯುಷ್ ಚಿಕಿತ್ಸೆಗಳ ಮೂಲಕ ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಹೇಗೆ ಚಿಕಿತ್ಸೆ ನೀಡಬಹುದು ಎಂಬ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದರು.ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಮಹಮ್ಮದ್ ಇಕ್ಬಾಲ್, ವೈದ್ಯರಾದ ಡಾ. ಕೇಶವ ಪಿ.ಕೆ, ಡಾ.ಸಚಿನ್ ನಡ್ಕ, ಕೃಷ್ಣ ಗೋಖಲೆ, ಡಾ.ನಂದೀಶ್, ಡಾ.ಪ್ರವೀಣ್ ರೈ, ಡಾ.ಎನ್.ಟಿ‌. ಅಂಚನ್ ಇದ್ದರು.

ಆಯುಷ್‌ ಹಬ್ಬದ ವೈಶಿಷ್ಟ್ಯಗಳುಉಚಿತ ಸ್ವಾಸ್ಥ್ಯ ಶಿಬಿರ (ಜಿಲ್ಲೆಯ ಆಯುಷ್ ವೈದ್ಯರಿಂದ ಉಚಿತ ಸೇವೆ), ಉಚಿತ ನಾಡಿ ಪರೀಕ್ಷೆ (ಮುಂಚಿತವಾಗಿ ನೋಂದಣಿ ಮಾಡಿದವರಿಗೆ), ಹಿರಿಯ ನಾಗರಿಕರಿಗಾಗಿ ಆಯುಷ್ ಆರೈಕೆ, ಜೀವನ ಸಂಧ್ಯಾಕಾಲದ ಸ್ವಾಸ್ಥ್ಯ ರಕ್ಷಣೆಗಾಗಿ ಜೀವನಶೈಲಿ ನಿರ್ವಹಣಾ ಶಿಬಿರಗಳು.

ಆರೋಗ್ಯ ಆಹಾರ ಹಬ್ಬ: ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸಾ ಶಾಸ್ತ್ರದಲ್ಲಿ ಉಲ್ಲೇಖಿಸಲ್ಪಟ್ಟ ಸ್ವಾಸ್ಥ್ಯ ರಕ್ಷಣೆಗೆ ಅಗತ್ಯವಾದ ಆಹಾರ ಸಿದ್ಧತೆ ಮತ್ತು ರುಚಿಕರ ತಿಂಡಿ ತಿನಿಸುಗಳನ್ನು ಸವಿಯುವ ಹಬ್ಬ.ಮಹಿಳಾ ಸ್ವಾಸ್ಥ್ಯ ಹಬ್ಬ: ಮಹಿಳಾ ಆರೋಗ್ಯದ ಬಗ್ಗೆ ಪ್ರತ್ಯೇಕ ವಿಭಾಗ ತೆರೆಯಲಾಗುತ್ತಿದ್ದು, ಅಲ್ಲಿ ಮಹಿಳೆಯರು ಅನುಭವಿಸುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಹಾಗೂ ಆಧುನಿಕ ಒತ್ತಡಯುಕ್ತ ಜೀವನ ಶೈಲಿಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆ.ಆಯುಷ್ ಸೌಂದರ್ಯ ಹಬ್ಬ: ತ್ವಚೆಯ ಆರೋಗ್ಯದ ಬಗ್ಗೆ, ಆಯುಷ್‌ನ ವಿವಿಧ ಪದ್ಧತಿಗಳಲ್ಲಿ ವಿಶೇಷ ರೀತಿಯ ಚಿಕಿತ್ಸಾ ಸೂತ್ರಗಳನ್ನು ತಿಳಿಸಲಾಗುವುದು. ಹೃದಯ ಆರೋಗ್ಯ ಸಂಭ್ರಮ: ಹೃದಯ ತಜ್ಞ ವೈದ್ಯರು ಅಗತ್ಯ ಸಾಧನಗಳೊಂದಿಗೆ ತಪಾಸಣೆ ನಡೆಸುತ್ತಾರೆ. ಅಲ್ಲದೆ ಹೃದಯ ರೋಗದ ಬಗ್ಗೆ ಜನರಲ್ಲಿರುವ ಆತಂಕ ದೂರಗೊಳಿಸಿ, ಸರಳ ವಿಧಾನಗಳ ಚಿಕಿತ್ಸಾ ಸಲಹೆ ನೀಡಲಾಗುತ್ತದೆ.ಒತ್ತಡ ನಿವಾರಣಾ ಕೌಶಲ್ಯ: ಆಯುಷ್‌ನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗ ವತಿಯಿಂದ ಒತ್ತಡಮುಕ್ತ ಜೀವನಕ್ಕೆ ಪೂರಕವಾದ ಔಷಧರಹಿತ ಸರಳ ವಿಧಾನಗಳ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.ಆಯುಷ್ ವೈಜ್ಞಾನಿಕ ಅಧಿವೇಶನಗಳು: ಆಯುಷ್‌ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಒಳಗೊಂಡ ವೈಜ್ಞಾನಿಕ ಅಧಿವೇಶನಗಳು ಪ್ರತ್ಯೇಕ ಸಭಾಂಗಣದಲ್ಲಿ ನಡೆಯಲಿದೆ.ಸ್ವದೇಶೀ ಸಾವಯವ ಹಬ್ಬ: ರಸಗೊಬ್ಬರ ಮತ್ತು ಕೀಟನಾಶಕ ಮುಕ್ತವಾದ, ನೈಸರ್ಗಿಕ ವಿಧಾನದಲ್ಲಿ ಮಾಡಿದ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮಳಿಗೆಗಳು.ಸ್ವಾಸ್ಥ್ಯ ಪ್ರದರ್ಶನ ಮಳಿಗೆಗಳು: ಆಧುನಿಕ ಜನಜೀವನಕ್ಕೆ ಸೂಕ್ತವೆನಿಸುವ ವೈವಿಧ್ಯಮಯ ಚಿಕಿತ್ಸಾ ವಿಧಾನಗಳ ಪರಿಚಯ ನೀಡುವುದು.

ಆಯುಷ್ ಔಷಧ ಮಳಿಗೆಗಳು, ಆಯುಷ್ ಹ್ಯಾಕಥಾನ್, ಆಯುಷ್ ಸ್ಮಾರ್ಟ್ ಅಪ್‌ಗಳು, ಸಾಂಸ್ಕೃತಿಕ ವೈಭವ, ಉದ್ದಿಮೆದಾರರ ಸಭೆ, ಮಧುಮೇಹ ಆಹಾರ ಹಬ್ಬ ಇರಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ