ಕಾರ್ಕಳ: ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ತಾಮ್ರದ ತಗಡು ಕಳ್ಳತನ ನಡೆದಿರುವ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಕಳ್ಳತನ ನಡೆದ ಪ್ರದೇಶಕ್ಕೆ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ವಿ. ಸುನಿಲ್ ಕುಮಾರ್ ಭೇಟಿ ನೀಡಿ, ಪಾರ್ಕ್‌ನ ಸದ್ಯದ ಸ್ಥಿತಿ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ವಿವಿಧ ವಿವಾದಗಳು, ಆರೋಪ–ಪ್ರತ್ಯಾರೋಪಗಳ ಹಿನ್ನೆಲೆ ಸಾರ್ವಜನಿಕ ಪ್ರವೇಶಕ್ಕೆ ಮುಚ್ಚಲ್ಪಟ್ಟಿದ್ದ ಈ ಮಹತ್ವಾಕಾಂಕ್ಷಿ ಯೋಜನೆಯ ಮೇಲ್ಚಾವಣಿಯ ತಾಮ್ರದ ಹಲಗೆಗಳನ್ನು ದುಷ್ಕರ್ಮಿಗಳು ಬಾಗಿಲು ಒಡೆದು ಕಳ್ಳತನ ಮಾಡಿದ್ದಾರೆ. ಮೇಲ್ಚಾವಣಿಯನ್ನು ಸಂಪೂರ್ಣವಾಗಿ ಕಿತ್ತು ಹಾಕಲಾಗಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ಪರಶುರಾಮ ಥೀಮ್ ಪಾರ್ಕ್ ಪಾಳು ಬಿದ್ದಿರುವುದು ಅಸೂಯೆ ಮತ್ತು ರಾಜಕೀಯ ದ್ವೇಷದ ಫಲ ಎಂದು ಟೀಕಿಸಿದ ಅವರು, “ಇದು ನನ್ನ ಕನಸಿನ ಯೋಜನೆ. ಪ್ರವಾಸೋದ್ಯಮದ ದೃಷ್ಟಿಯಿಂದ ವಿಜೃಂಭಿಸಬೇಕಾಗಿದ್ದ ಈ ಸ್ಥಳ ಇಂದು ಗಿಡಗಂಟಿಗಳಿಂದ ತುಂಬಿ ನಿರ್ಜನವಾಗಿದೆ. ಇದನ್ನು ಈ ಸ್ಥಿತಿಗೆ ತಂದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದರು.
ತಕ್ಷಣವೇ ಹಣ ಬಿಡುಗಡೆ ಮಾಡಬೇಕು: ಬಿಜೆಪಿ ಸರ್ಕಾರ ಮಂಜೂರು ಮಾಡಿದ ನಾಲ್ಕೂವರೆ ಕೋಟಿ ರು. ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ ಅವರು, ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಥೀಮ್ ಪಾರ್ಕ್‌ಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಬೇಕು. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಬೇಕು. ಅನಗತ್ಯ ಅಪಪ್ರಚಾರ ಮಾಡಿದವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಹೇಳಿದರು.
11ರಂದು ಸಾವಿರಾರು ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಸ್ವಚ್ಛತಾ ಕಾರ್ಯ ನಡೆಸಲಿದ್ದಾರೆ ಎಂದು ಘೋಷಿಸಿದ ಅವರು, ಜಿಲ್ಲಾಡಳಿತ ಸ್ವಚ್ಛಗೊಳಿಸದಿದ್ದರೆ ನಾವೇ ಮಾಡುತ್ತೇವೆ. ಮಕರ ಸಂಕ್ರಾಂತಿಯ ದಿನದಿಂದ ಒಂದು ತಿಂಗಳು ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಇಲಾಖೆ ಮಾಡದಿದ್ದರೆ ನಾವೇ ಮಾಡುತ್ತೇವೆ ಎಂದರು.ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಓಂ ಶಕ್ತಿ ಮಾಲಧಾರಿಗಳ ಮೇಲೆ ನಡೆದ ಹಲ್ಲೆ, ಕೋಗಿಲು ಬಿಜೆಪಿ ಪ್ರತಿಭಟನೆಗೆ ಅನುಮತಿ ನಿರಾಕರಣೆ, ದ್ವೇಷ ಭಾಷಣ ಮಸೂದೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಕುರಿತು ಕೂಡ ಸುನಿಲ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.
“ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಿಂದೂ ಭಾವನೆಗಳ ಮೇಲೆ ನಿರಂತರ ಅವಹೇಳನ ನಡೆಯುತ್ತಿದೆ. ಇದು ಸರ್ಕಾರದ ತುಷ್ಟೀಕರಣ ನೀತಿಯ ಪರಿಣಾಮ ಎಂದು ಆರೋಪಿಸಿದರು.
ಎರಡನೇ ಬಾರಿ ಕಳ್ಳತನ: ಕಾಂಗ್ರೆಸ್ ಗಂಭೀರ ಆರೋಪ