ಆಯುಷ್ಮಾನ್ ಭಾರತ್ ಅಭಿಯಾನಕ್ಕೆ ಸಂಸದ ಮಂಜುನಾಥರಿಂದ ಚಾಲನೆ

KannadaprabhaNewsNetwork | Published : Jan 8, 2025 12:15 AM

ಸಾರಾಂಶ

ಈ ಯೋಜನೆಯಲ್ಲಿ ಪ್ರತಿಯೊಂದು ರೋಗಕ್ಕೂ ಒಂದು ದರ ನಿರ್ಧರಿಸಲಾಗಿದೆ. ಈ ದರ ಪಟ್ಟಿಯಂತೆ ನೇರವಾಗಿ ಆಸ್ಪತ್ರೆಗಳಿಗೆ ಹಣ ಪಾವತಿಯಾಗುತ್ತದೆ. ಇದೊಂದು ಪಕ್ಷಾತೀತವಾದ ಕಾರ್ಯಕ್ರಮ. ಎಲ್ಲರೂ ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ನಗರದ ಜಿಲ್ಲಾ ಪಂಚಾಯತ್ ಭವನದ ಲೋಕಸಭಾ ಸದಸ್ಯರ ಕಚೇರಿಯಲ್ಲಿ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಗುರುತಿನ ಚೀಟಿ ಒದಗಿಸುವ ಅಭಿಯಾನಕ್ಕೆ ಸಂಸದ ಡಾ. ಸಿ.ಎನ್. ಮಂಜುನಾಥ್ ಮಂಗಳವಾರ ಚಾಲನೆ ನೀಡಿದರು.

ಕಚೇರಿಯಲ್ಲಿ 70 ವರ್ಷ ಮೇಲ್ಪಟ್ಟ 5 ಮಂದಿ ಹಿರಿಯ ನಾಗರಿಕರಿಗೆ ಸಂಸದ ಮಂಜುನಾಥ್ ರವರು ಆಯುಷ್ಮಾನ್ ಭಾರತ್ ಗುರುತಿನ ಚೀಟಿ ವಿತರಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆರೋಗ್ಯ ಸೇವಾ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತಿದೆ. ದೇಶದ ಎಲ್ಲಾ ನೋಂದಾಯಿತ ಆಸ್ಪತ್ರೆಗಳಲ್ಲಿ ವಾರ್ಷಿಕ ಗರಿಷ್ಠ 5 ಲಕ್ಷದವರೆಗೂ ಉಚಿತ ಚಿಕಿತ್ಸೆ ಪಡೆಯ ಬಹುದಾಗಿದೆ ಎಂದು ಹೇಳಿದರು.

ಈ ಯೋಜನೆಯಲ್ಲಿ ಪ್ರತಿಯೊಂದು ರೋಗಕ್ಕೂ ಒಂದು ದರ ನಿರ್ಧರಿಸಲಾಗಿದೆ. ಈ ದರ ಪಟ್ಟಿಯಂತೆ ನೇರವಾಗಿ ಆಸ್ಪತ್ರೆಗಳಿಗೆ ಹಣ ಪಾವತಿಯಾಗುತ್ತದೆ. ಇದೊಂದು ಪಕ್ಷಾತೀತವಾದ ಕಾರ್ಯಕ್ರಮ. ಎಲ್ಲರೂ ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಂಸದರ ಕಚೇರಿಯಲ್ಲಿಯೇ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಕೊಡಲಾಗುತ್ತಿದೆ. ಇದಕ್ಕಾಗಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಆಧಾರ್ ಕಾರ್ಡ್ , ಭಾವಚಿತ್ರ ಸಲ್ಲಿಸಬೇಕು ಎಂದು ಮಂಜುನಾಥ್ ಹೇಳಿದರು. ಆನಂತರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಇದಕ್ಕೂ ಮುನ್ನ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಬೇಕಾದ ಸಲಕರಣೆಗಳನ್ನು ಸಂಸದ ಮಂಜುನಾಥ್ ರವರು ಹಸ್ತಾಂತರಿಸಿದರು.

ಸಾಮಾಜಿಕ ಹೊಣೆಗಾರಿಕೆ (ಸಿಎಸ್ ಆರ್) ಅಡಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಬೇಕಾದ 15 ಲಕ್ಷ ರುಪಾಯಿಗಳ ಸಲಕರಣೆಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಹಸ್ತಾಂತರ ಮಾಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಶಿವಲಿಂಗಯ್ಯ, ಬಿಜೆಪಿ ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ ಮತ್ತಿತರರು ಹಾಜರಿದ್ದರು.

Share this article