ಇಂದಿನಿಂದ ಅಯುತ ಚಂಡಿಕಾ ಮಹಾಯಾಗ, ಮಹಾರುದ್ರಾನುಷ್ಠಾನ

KannadaprabhaNewsNetwork |  
Published : Jan 24, 2024, 02:04 AM IST
ಫೋಟೋ : ೧೯ಕೆಎಂಟಿ_ಜೆಎಎನ್_ಕೆಪಿ1: ಹೆಗಲೆಯ ಭುಜಗಪುರದ ಶ್ರೀದುರ್ಗಾಪರಮೇಶ್ವರಿ | Kannada Prabha

ಸಾರಾಂಶ

ಜ. ೨೪ರಂದು ಗಣಹವನ, ಪವಮಾನ ಹೋಮ, ದುರ್ಗಾ ಮೂಲಮಂತ್ರ ಹೋಮ, ಧ್ವಜಾಧಿವಾಸ ಹೋಮ, ರಾಕ್ಷೋಘ್ನ-ವಾಸ್ತು ವಿಧಾನಗಳು, ಉತ್ಸವ, ಬಲಿ ಮುಂತಾದವು ನಡೆಯಲಿದೆ. ಜ. ೨೫ರಂದು ಅಥರ್ವಶೀರ್ಷ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಸುಹಾಸಿನಿಯರಿಂದ ಕುಂಕುಮಾರ್ಚನೆ

ಕುಮಟಾ: ತಾಲೂಕಿನ ಹೆಗಲೆಯಲ್ಲಿರುವ ಭುಜಗಪುರ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಜ.೨೪ರಿಂದ ೨೮ರ ವರೆಗೆ ಅಯುತ ಚಂಡಿಕಾ ಮಹಾಯಾಗ ಮತ್ತು ಮಹಾರುದ್ರಾನುಷ್ಠಾನ ಹಮ್ಮಿಕೊಳ್ಳಲಾಗಿದೆ.

ಸಂತಾನ ಪ್ರಾಪ್ತಿ, ಆರೋಗ್ಯ ಭಾಗ್ಯ ಹಾಗೂ ಸರ್ಪದೋಷ ನಿವಾರಣೆಗೆ ಹೆಸರುವಾಸಿಯಾಗಿರುವ ಈ ಮಂದಿರದಲ್ಲಿ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಆಶೀರ್ವಾದದೊಂದಿಗೆ ಸ್ಥಳೀಯ ಶ್ರೀಧರ ಕೃಷ್ಣ ಹೆಗಡೆ ನೇತೃತ್ವದಲ್ಲಿ ವೇ. ಶಂಕರ ಭಟ್ಟ ಕಟ್ಟೆ ಆಚಾರ್ಯತ್ವದಲ್ಲಿ ೩೦೦ಕ್ಕೂ ಅಧಿಕ ವೈದಿಕರಿಂದ ಧಾರ್ಮಿಕ ಕೈಂಕರ್ಯಗಳು ನಡೆಯಲಿದೆ.

ಮಹಾಯಾಗದ ಅಂಗವಾಗಿ ಹತ್ತು ಸಾವಿರ ಸಪ್ತಶತೀ ಪಾರಾಯಣ ಮಂದಿರದಲ್ಲಿ ಸಮರ್ಪಿಸಲಾಗಿದೆ. ಜ. ೨೪ರಂದು ಗಣಹವನ, ಪವಮಾನ ಹೋಮ, ದುರ್ಗಾ ಮೂಲಮಂತ್ರ ಹೋಮ, ಧ್ವಜಾಧಿವಾಸ ಹೋಮ, ರಾಕ್ಷೋಘ್ನ-ವಾಸ್ತು ವಿಧಾನಗಳು, ಉತ್ಸವ, ಬಲಿ ಮುಂತಾದವು ನಡೆಯಲಿದೆ. ಜ. ೨೫ರಂದು ಅಥರ್ವಶೀರ್ಷ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಸುಹಾಸಿನಿಯರಿಂದ ಕುಂಕುಮಾರ್ಚನೆ, ೨೫ ಕುಂಡಗಳಲ್ಲಿ ಅಯುತ ಚಂಡಿಕಾ ಮಹಾಯಾಗ ಪ್ರಾರಂಭ ಮುಂತಾದ ಕಾರ್ಯಕ್ರಮ ನಡೆಯುವುದು. ಜ. ೨೬ರಂದು ಅಯುತ ಚಂಡಿಕಾ ಹೋಮದೊಟ್ಟಿಗೆ ನವಗ್ರಹ ಶಾಂತಿ, ಸೌರಸೂಕ್ತ ಹೋಮ, ಗಾಯತ್ರೀ ಹೋಮ, ಡಿ.ಆರ್. ಹೆಗಡೆ ಅವರಿಂದ ಹರಿಕೀರ್ತನೆ ನಡೆಯಲಿದೆ. ಜ.೨೭ರಂದು ಮೃತ್ಯುಂಜಯ ಹವನ, ಮಹಾರುದ್ರ ಹವನ, ವಿದುಷಿ ಸಾವಿತ್ರಿ ಸದಾಶಿವ ಜೋಶಿ, ಮುಂಬೈ ಅವರಿಂದ ಸಂಗೀತ ಸೇವೆ, ಸ್ಥಳೀಯ ಕಲಾವಿದರಿಂದ ಭರತನಾಟ್ಯ, ಜ. ೨೮ರಂದು ದುರ್ಗಾಶಾಂತಿ, ಶ್ರೀಸೂಕ್ತ ಹೋಮ, ಪುರುಷಸೂಕ್ತ ಹೋಮ, ಸ್ಕಂದಶಾಂತಿ, ಸರ್ಪಸೂಕ್ತ ಹೋಮ, ಜನಾರ್ದನ ವಾಸುದೇವ ಮೂಲಮಂತ್ರಹೋಮ, ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಮಹಾಪೂರ್ಣಾಹುತಿ ನೆರವೇರಲಿದೆ. ಈ ಮಹತ್ಕಾರ್ಯಕ್ಕೆ ಆಸ್ತಿಕ ಬಂಧುಗಳು ಬಂದು ದೇವಿಯ ಪೂರ್ಣಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಆಯೋಜಕರಾದ ವಿನಾಯಕ ಶ್ರೀಧರ ಹೆಗಡೆ, ಗುರುಪ್ರಕಾಶ ಗಣೇಶ ಹೆಗಡೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ