ಗೇಟು ತುಂಡಾಗಿ ತಿರುಗಿಸಲಾಗದೆ ಜಖಂ: ನೀರು ಸೋರಿಕೆ
ತಾಲೂಕಿನ ಸಖರಾಯಪಟ್ಟಣದ ಸುತ್ತಮುತ್ತಲ ಗ್ರಾಮಗಳ ರೈತರ ಜೀವನಾಡಿಯಾದ ಅಯ್ಯನಕೆರೆಯ ತೂಬು ದುರಸ್ತಿ ಆಗದೆ ರೈತರಲ್ಲಿ ಆತಂಕ ಉಂಟು ಮಾಡಿದೆ. ಮಳೆಗಾಲ ಆರಂಭವಾಗುವ ಮೂಲಕ ಕೆರೆಗೆ ನೀರು ಬರಲು ಆರಂಭಿಸಿದ್ದರೂ ಕೂಡ ಕೆರೆಯ ತೂಬಿನ ಗೇಟು ದುರಸ್ತಿ ಯಾಗುವಂತೆ ಕಾಣದಿರುವುದು ರೈತರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ. ತೂಬಿನ ಗೇಟು ತುಂಡಾಗಿರುವ ಕಾರಣ ತಿರುಗಿಸಲು ಬಾರದೆ ಅಲ್ಲೇ ಜಖಂಗೊಡು ನೀರು ಸೋರಿಕೆಯಾಗುತ್ತಿದೆ.
ಕೆರೆಗೆ ಬರುವ ನೀರನ್ನು ಹಿಡಿದಿಟ್ಟುಕೊಳ್ಳುವ ತೂಬು ಸರಿಯಾಗದೆ ನೀರು ಕೆರೆಯಲ್ಲಿ ನಿಲ್ಲುತ್ತಿಲ್ಲ. ಕಳೆದ ವರ್ಷಗೇಟಿನ ಸಮಸ್ಯೆಯಿಂದ ಕೆರೆಯಿಂದ 4-5 ಅಡಿ ನೀರು ವೃಥಾ ಪೋಲಾಗಿತ್ತು. ಈಗ ಮತ್ತೆ ಮಳೆಗಾಲ ಪ್ರಾರಂಭವಾಗಿದ್ದು ಕೆರೆಗೆ ನೀರು ಬರುತ್ತಿದ್ದು ಇನ್ನೇನು ತೂಬಿಗೆ ನೀರು ಬರುವ ಲಕ್ಷಣಗಳು ಗೋಚರಿಸುತ್ತಿವೆ. ನೀರಿನ ಹರಿವು ಹೆಚ್ಚಾದರೆ ದುರಸ್ತಿ ಮಾಡಲು ಸಾಧ್ಯವಾಗದು. ಇದನ್ನರಿತು ಸಂಭಂದಿಸಿದ ನೀರಾವರಿ ಇಲಾಖೆ ಗಮನಹರಿಸಿ ಕೂಡಲೇ ಗೇಟು ದುರಸ್ತಿ ಮಾಡಲು ಗಮನಹರಿಸಬೇಕಾಗಿದೆ.ಅಯ್ಯನಕೆರೆ ರೈತರ ಜೀವನಾಡಿ ಆಗಿದ್ದು ಏನೇ ಆಗಲಿ ಸಂಭಂದಿಸಿದ ಎಲ್ಲರೂ ಕೈ ಜೋಡಿಸಿ ಸಖರಾಯಪಟ್ಟಣ ಭಾಗದ ಜನರ ಜೀವವಾದ ಅಯ್ಯನಕೆರೆಯ ತೂಬನ್ನು ಸರಿಪಡಿಸಿ ರೈತರ ತೋಟ ಜಮೀನುಗಳನ್ನು ಉಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮೈಸೂರಿನಿಂದ ತಂತ್ರಜ್ಞರು ಬಂದು ಪರಿಶೀಲಿಸಿ ಗೇಟಿನ ಅಳತೆ ತೆಗೆದುಕೊಂಡು ಹೋಗಿದ್ದಾರೆ. 3-4 ದಿನಗಳಲ್ಲಿ ಬಂದು ಸರಿಪಡಿಸಲಾಗುವುದು ಎಂಬ ಭರವಸೆ ದೊರೆತಿದೆ. ಈ ನಿಟ್ಟಿನಲ್ಲಿ ನಾವೂ ಪ್ರಯತ್ನಿಸುತ್ತಿದ್ದು ಶೀಘ್ರ ದುರಸ್ತಿ ಮಾಡಲಾಗುವುದು ರೈತರು ಆತಂಕ ಪಡುವುದು ಬೇಡ.