ಚಿಕ್ಕಪ್ಪನಹಳ್ಳಿ ಷಣ್ಮುಖ
ಚಿತ್ರದುರ್ಗ ನಗರವ ಸೀಳಿ ಹೋಗಿರುವ ಬಿ.ಡಿ. ರಸ್ತೆಯ ಮಾಹಿತಿ ಎಲ್ಲಿದೆಯೋ, ಹೇಗಿದೆಯೋ, ಯಾವ ಪರಿಸ್ಥಿತಿಯಲ್ಲಿದೆಯೋ ಎಂಬ ಆತಂಕದ ಹುಡುಕಾಟಗಳು ಈಗ ಶುರುವಾಗಿವೆ. ನಗರದ ರಸ್ತೆಯ ಎರಡೂ ಬದಿಯಲ್ಲಿ 21 ಮೀಟರ್ ಗಳಿಗೆ ಅಗಲೀಕರಣ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಭೆ ಪರ್ಮಾನು ಹೊರಡಿಸಿದ ನಂತರ ಹಳೇ ಕಡತಗಳ ತಲಾಶ್ ಮಾಡುವ ಕೆಲಸ ಆರಂಭವಾಗಿದ್ದು ಮೂಲ ದಾಖಲಾತಿಗಳು ಲಭ್ಯವಾಗಿಲ್ಲ. ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಕಚೇರಿಗಳಲ್ಲಿ ಏನಾದರೂ ಸಿಗಬಹುದೇ ಎಂದು ದುರ್ಬೀನು ಹಾಕಲಾಗಿದೆ.
ಚಿತ್ರದುರ್ಗ ನಗರ ಐತಿಹಾಸಿಕ ಹಿನ್ನಲೆ ಹೊಂದಿದ್ದು ಸ್ವಾತಂತ್ರ ಪೂರ್ವದಲ್ಲಿ ಇಲ್ಲಿನ ರಸ್ತೆಗಳ ಮೇಲೆ ಬ್ರೀಟೀಷರ ವಾಹನಗಳು, ಎತ್ತಿನ ಗಾಡಿ, ಜಟಕಾ ಬಂಡಿ ಓಡಾಡಿವೆ. 50 ವರ್ಷಗಳ ಹಿಂದೆ ಬಿ.ಡಿ ರಸ್ತೆ ಎರಡೂ ಬದಿಯಲ್ಲಿ ಹುಣಿಸೆ ಮರಗಳಿದ್ದವು. ಲೋಕೋಪಯೋಗಿ ಇಲಾಖೆ ಈ ಹುಣಿಸೆ ಮರಗಳ ಹರಾಜು ಹಾಕಿ ಅದರಿಂದ ಆದಾಯ ಪಡೆಯುತ್ತಿತ್ತು. ಭೀಮಪ್ಪ ನಾಯಕರು ಅಂದಿನ ಪುರಸಭೆ ಅಧ್ಯಕ್ಷರಾಗಿದ್ದಾಗ (12-9-1948 ರಿಂದ 12-5-49 ರವರೆಗೆ) ಬಿ.ಡಿ ರಸ್ತೆಯನ್ನು ಅಂದೇ ಸಿಮೆಂಟ್ ಕಾಂಕ್ರಿಟ್ ರಸ್ತೆಯನ್ನಾಗಿ ಮಾಡಿದ್ದರು. ರಸ್ತೆ ಕ್ಯೂರಿಂಗ್ ಮಾಡಲು ನಿಲ್ಲಿಸಿದ ನೀರಿನಲ್ಲಿ ನಾವುಗಳು ಬರಿಗಾಲಲ್ಲಿ ಓಡಾಡುತ್ತಾ ಸಂಭ್ರಮಿಸಿದ್ದವೆಂದು ಹಳೇ ತಲೆಮಾರಿನವರು ನೆನಪು ಮಾಡಿಕೊಳ್ಳುತ್ತಾರೆ. ಸಾಲು ಹುಣಿಸೆ ಮರಗಳ ನಡುವಿನ ರಸ್ತೆಯೇ ಅಂದು ವಾಹನ, ಎತ್ತಿನ ಗಾಡಿಗಳಿಗೆ ರಹದಾರಿಯಾಗಿತ್ತು.ನಂತರದ ಬೆಳವಣಿಗೆಯಲ್ಲಿ ಸಾಲುಮರಗಳ ಕಡಿದು ವಿಶಾಲವಾದ ರಸ್ತೆ ಮಾಡಲಾಗಿದೆ. ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಾದಂತೆ ರಸ್ತೆ ವಿಸ್ತಾರವಾಗುತ್ತಾ ಸಾಗಿದೆ. ಆದರೆ ರಸ್ತೆ ಮೂಲದಲ್ಲಿ ಎಷ್ಟಿತ್ತು, ಜಿಲ್ಲಾ ಮುಖ್ಯ ರಸ್ತೆಯಾದಾಗ ಅದರ ಅಳತೆ ಎಷ್ಟಾಯಿತು, ನಂತರ ಪಿಡಬ್ಲ್ಯೂಡಿ ರಸ್ತೆಯಾದಾಗ, ತರುವಾಯ ರಾಷ್ಟ್ರೀಯ ಹೆದ್ದಾರಿ ಆದಾಗ ಅಗಲದ ಚಕ್ಕು ಬಂದಿ ಎಷ್ಟು ಅಡಿಗೆ ವಿಸ್ತಾರವಾಯಿತು ಎಂಬಿತ್ಯಾದಿ ಮಾಹಿತಿಗಳು ನಿಖರವಾಗಿ ಲಭ್ಯವಾಗುತ್ತಿಲ್ಲ. ಆದರೂ ಇದುವರೆಗೂ ಮೂರು ಬಾರಿ ರಸ್ತೆ ಅಗಲೀಕರಣವಾಗಿದ್ದು, ಯಾವ ಆಧಾರದ ಮೇಲೆ ಮಾಡಲಾಯಿತು ಎಂಬುದಕ್ಕೆ ಸಣ್ಣ ಚೀಟಿಯೂ ಸಿಗ್ತಿಲ್ಲ.
ಸರ್ಕಾರದ ಸುತ್ತೋಲೆ ಪಾಲನೆ ಮಾಡಲಾಯಿತೇ, ರಸ್ತೆಗಳು ಅಗಲವಾದವೇ, ಯಾವ ಮಾನಂದಂಡ ಅನುಸರಿಸಲಾಯಿತು ಎಂಬಿತ್ಯಾದಿ ದಾಖಲೆಗಳು ಲಭ್ಯವಾಗಿಲ್ಲ. ಚಿತ್ರದುರ್ಗದ ಹೃದಯ ಭಾಗದಲ್ಲಿರುವ ಮದಕರಿ ನಾಯಕ ಕಂಚಿನ ಪ್ರತಿಮೆ ಸಮೀಪದ ದೀಪಕ್ ಬುಕ್ ಹೌಸ್ ಕಟ್ಟಡದ ದಾಖಲಾತಿಗಳು, ನಿವೇಶನ, ಕಟ್ಟಡ ನಿರ್ಮಾಣದ ವ್ಯಾಪ್ತಿಯಲ್ಲಿಯೇ ಇವೆ. ಇದು ಪಕ್ಕಾ ಖಾಸಗಿ ಆಸ್ತಿಯಾಗಿದೆ. ಕಾಲ ಕಾಲಕ್ಕೆ ಕಂದಾಯ ಕಟ್ಟಿಕೊಂಡು ಬರಲಾಗಿದೆ. ಈಗ 21 ಮೀಟರ್ ರಸ್ತೆ ನಿರ್ಮಾಣಕ್ಕೆ ಮುಂದಾದರೆ ಇಡೀ ಕಟ್ಟಡದ ಮುಕ್ಕಾಲು ಭಾಗ ನೆಲಸಮ ಮಾಡಬೇಕಾಗುತ್ತದೆ. ಪರಿಹಾರ ಕೊಡುವ ಅನಿವಾರ್ಯತೆ ಎದುರಾಗಬಹುದು.