- ಪುರಸಭೆಯಿಂದ 3,4 ಮತ್ತು 5ನೇ ವಾರ್ಡಿನ ನಮ್ಮ ನಡೆ ಸಾರ್ವಜನಿಕರ ಕಡೆ, ಬಿ.ಖಾತಾ ಅಭಿಯಾನ ಉಧ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುರಾಜ್ಯ ಸರ್ಕಾರದ ಆದೇಶದಂತೆ ಪಟ್ಟಣದ 3,4 ಮತ್ತು 5ನೇ ವಾರ್ಡಿನಲ್ಲಿ ನಮ್ಮ ನಡೆ ಸಾರ್ವಜನಿಕರ ಕಡೆ ಮತ್ತು ಬಿ.ಖಾತಾ ಅಭಿಯಾನ ನಡೆಯುತ್ತಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.ಗುರುವಾರ ಪಟ್ಟಣದ ದೊಡ್ಡಪೇಟೆ ಶ್ರೀಏಳೂರು ಬೀರಲಿಂಗೇಶ್ವರ ದೇವಾಲಯ ಮುಂಭಾಗದಲ್ಲಿ ಪುರಸಭೆಯಿಂದ 3,4 ಮತ್ತು 5ನೇ ವಾರ್ಡಿನ ನಮ್ಮ ನಡೆ ಸಾರ್ವಜನಿಕರ ಕಡೆ ಮತ್ತು ಬಿ.ಖಾತಾ ಅಭಿಯಾನ ಉಧ್ಘಾಟಿಸಿ ಮಾತನಾಡಿದರು.ಪುರಸಭೆಯಿಂದ ಈ ಬಗ್ಗೆ ಪ್ರಚಾರ ಮಾಡಿದ್ದು ಮನೆ ಮತ್ತು ನಿವೇಶನಗಳ ಮಾಲೀಕರು ಕಂದಾಯ ವ್ಯಾಪ್ತಿಗೆ ಬರಬೇಕೆಂದು 1 ಮತ್ತು 2 ನೇ ವಾರ್ಡಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡುವ ಜೊತೆಗೆ ಆ. ವಾರ್ಡಿನಲ್ಲಿ ತ್ಯಾಜ್ಯ ನೀರು ಹೊರ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಪುರಸಭೆ ನಮ್ಮ ಜಾಗವನ್ನು ವಶಕ್ಕೆ ಪಡೆದು ತಂತಿ ಬೇಲಿ ಹಾಕಲಾಗಿದೆ ಎಂದರು.
ಕಂದಾಯ ಭೂಮಿಯಲ್ಲಿ ಕಟ್ಟಿದ ಮನೆಗಳನ್ನು ಬಿ.ಖಾತಾ ವ್ಯಾಪ್ತಿಗೆ ತರುವ ಮೂಲಕ ಇ-ಸ್ವತ್ತು ನೀಡಲು ಕಳೆದ ಎರಡು ತಿಂಗಳಿಂದ ಪುರಸಭಾ ಸದಸ್ಯರು, ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ಆಸ್ತಿಗಳ ವಾರಸುದಾರರಿಗೆ ಇ-ಸ್ವತ್ತು ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.ಆದರೆ 5ನೇ ವಾರ್ಡಿನಲ್ಲಿ ಶೇ. 60 ಮತ್ತು 3, 4 ನೇ ವಾರ್ಡಿನಲ್ಲಿ ಶೇ. 30ರಷ್ಟು ನಿವಾಸಿಗಳು ಕಂದಾಯ ವ್ಯಾಪ್ತಿಗೆ ಬಾರದ ಕಾರಣ ಜನರ ಮನೆ ಬಾಗಿಲಿಗೆ ಪುರಸಭೆಯೇ ಬಂದಿದೆ. ಜನರು ಮೂಲ ದಾಖಲೆಗಳನ್ನು ನೀಡಿ ಇ- ಸ್ವತ್ತನ್ನು ಪಡೆದು ಕಂದಾಯ ವ್ಯಾಪ್ತಿಗೆ ಬರಬೇಕು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ 6, 7, 8 ನೇ ವಾರ್ಡ್ ಳಲ್ಲಿ ಇದೇ ರೀತಿ ಕಾರ್ಯಕ್ರಮದ ಮೂಲಕ ಜನರು ತಮ್ಮ ಆಸ್ತಿಗಳ ರಕ್ಷಣೆಗೆ ದಾಖಲೆ ಮಾಡಿಕೊಳ್ಳಬೇಕು. ಇಂತಹ ಅಭಿಯಾನಕ್ಕೆ ತಮ್ಮ 30 ವರ್ಷಗಳ ರಾಜಕೀಯ ಅನುಭವದಲ್ಲೇ ಹೆಚ್ಚಿನ ಪ್ರತಿಕ್ರಿಯೆ ಬಂದು ಸರತಿ ಸಾಲಿನಲ್ಲಿ ನಿಂತು ಜನರು ಕಂದಾಯ ಕಟ್ಟಿ ಆಸ್ತಿಗಳಿಗೆ ನಿಜವಾದ ವಾರಸುದಾರರಾಗುತ್ತಿರುವುದು ಸಂತೋಷದ ಸಂಗತಿ. ಇದಕ್ಕಾಗಿ ಪುರಸಭೆ ಸದಸ್ಯರು ಮತ್ತು ಆಡಳಿತ ವರ್ಗಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.ಶಾಸಕ ಕೆ.ಎಸ್. ಆನಂದ್ ಸಹಕಾರದಿಂದ ₹40 ಕೋಟಿ ಬಿಡುಗಡೆಯಾಗಿದ್ದು ಇದರಲ್ಲಿ ಪಟ್ಟಣದಲ್ಲಿ ಪೈಪುಗಳ ಅಳವಡಿಕೆ , ಮೇಲುತೊಟ್ಟಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಒಳ ಚರಂಡಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಸರ್ಕಾರದ ₹5ಕೋಟಿ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು ಎಂದರು.ಪುರಸಭಾ ಸದಸ್ಯ ತೋಟದ ಮನೆ ಮೋಹನ್ ಮಾತನಾಡಿ, ಸರ್ಕಾರವೇ ಮನೆ ಬಾಗಿಲಿಗೆ ಬಂದು ಮೂಲಭೂತ ಸೌಲತ್ತು ನೀಡುತ್ತಿದೆ. ಮನೆಗಳ ಮತ್ತು ನಿವೇಶನಗಳ ದಾಖಲೆಗಳನ್ನು ಜನರು ಪಡೆಯಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಎಂದರು ಸದಸ್ಯ ಈರಳ್ಳಿ ರಮೇಶ್ ಮಾತನಾಡಿ, ಪುರಸಭೆ ಆಡಳಿತ ಮಂಡಳಿ ತೀರ್ಮಾನದಂತೆ ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಉತ್ತಮ ಕಾರ್ಯಕ್ರಮ ಮಾಡಲಾಗುತ್ತಿದೆ. ಆದರೆ 3ಮತ್ತು 4ನೇ ವಾರ್ಡಿನ ವಾರಸುದಾರರು ದಾಖಲೆ ಮಾಡಿಸಿಕೊಂಡಿಲ್ಲ. ಆದರೂ ಪುರಸಭೆಯಿಂದ ಮೂಲ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದರು.ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಯತಿರಾಜ್, ಮಂಡಿ ಎಕ್ಬಾಲ್, ಮೋಹನ್, ನಾಮ ನಿರ್ದೇಶಿತ ಸದಸ್ಯರಾದ ವಿನಯ್ ದಂಡಾವತಿ,ಕಡೂರು ದೇವೇಂದ್ರ, ಹರೀಶ್,ಕೃಷ್ಣಪ್ಪ, ಖಾದರ್, ಮುಖಂಡರಾದ ಪಂಗುಲಿ ಮಂಜುನಾಥ್, ಚಿನ್ನರಾಜು, ಕಾಂತರಾಜ್ , ತಿಮ್ಮಯ್ಯ, ಪ್ರೇಮ್ ಮತ್ತಿತರರು ಇದ್ದರು.
8ಕೆಕೆಡಿಯು1.1ಎಕಡೂರು ಪಟ್ಟಣದ ದೊಡ್ಡಪೇಟೆಯ ಏಳೂರು ಬೀರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ 3,4 ಮತ್ತು 5ನೇ ವಾರ್ಡಿನಲ್ಲಿ ನಮ್ಮ ನಡೆ ಸಾರ್ವಜನಿಕರ ಕಡೆ ಮತ್ತು ಬಿ.ಖಾತಾ ಅಭಿಯಾನವನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಉಧ್ಘಾಟಿಸಿದರು.