ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ೧೯೨೮ರಿಂದ ಇಂದಿನವರೆಗೆ ಮೀಸಲು ಅರಣ್ಯ ಘೋಷಣೆ ದಾಖಲೆಗಳಲ್ಲಿ ಮಾತ್ರ ಉಳಿದಿದೆ. ಕಂದಾಯ ಇಲಾಖೆಯಲ್ಲಿಯೂ ಪರಿಷ್ಕರಣೆ ನಡೆಯದ ಕಾರಣ ಗೊಂದಲ ಮುಂದುವರಿದಿದೆ. ೨೦೨೨ ಡಿಸೆಂಬರ್ ೩೦ರಂದು ಕರ್ನಾಟಕ ಅರಣ್ಯ ಅಧಿನಿಯಮ ೧೯೬೩ರ ೫ನೇ ಪ್ರಕಾರದಡಿ ಅರಣ್ಯ ಇಲಾಖೆ ಹೊಸದಾಗಿ ಘೋಷಣೆ ಹೊರಡಿಸಿ, ಅರಣ್ಯ ವ್ಯವಸ್ಥಾಪನಾಧಿಕಾರಿಗೆ ಭೂಮಿಯ ಸರ್ವೇ ನಡೆಸಿ ವಶಪಡಿಸಿಕೊಳ್ಳಲು ಸೂಚನೆ ನೀಡಿತ್ತು. ಆದರೆ ಇದುವರೆಗೆ ಯಾವುದೇ ಅನುಷ್ಠಾನ ನಡೆದಿಲ್ಲ ಎಂದು ಅವರು ದೂರಿದರು. ಅರಸೀಕೆರೆ ತಾಲೂಕಿನ ಅತ್ತಿಗುಡ್ಡ ಹಾಗೂ ನೀಲಗಿರಿ ಕಾವಲು ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದರೂ, ಅತ್ತಿಗುಡ್ಡ ಕಾವಲಿನಲ್ಲಿ ೩೦೦ಕ್ಕೂ ಹೆಚ್ಚು ರೈತರು, ನೀಲಗಿರಿ ಪ್ರದೇಶದಲ್ಲಿ ೧,೬೦೦ಕ್ಕೂ ಹೆಚ್ಚು ರೈತರು ಅತಿಕ್ರಮಣ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಕೇವಲ ನೋಟಿಸ್ ನೀಡಿದ ಮೇಲೆ ಸುಮ್ಮನಾಗಿರುವುದು ಅರಣ್ಯ ರಕ್ಷಣೆಗೂ, ಸಾರ್ವಜನಿಕರ ಹಿತಕ್ಕೂ ಧಕ್ಕೆಯಾಗಿದೆ ಎಂದು ಶಿವರಾಂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
೫೦ ಸಾವಿರ ಎಕರೆ ಮೀಸಲು ಅರಣ್ಯ ಭೂಮಿ, ೪೦ ಸಾವಿರಕ್ಕೂ ಹೆಚ್ಚು ಕುಟುಂಬಗಳ ಒತ್ತುವರಿ:ಜಿಲ್ಲೆಯ ೩೬ ಪ್ರದೇಶಗಳಲ್ಲಿ ಒಟ್ಟಾರೆ ೫೦ ಸಾವಿರ ಎಕರೆ ಭೂಮಿ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಟ್ಟಿದೆ. ಇದರಲ್ಲಿ ೪೦ ಸಾವಿರಕ್ಕೂ ಹೆಚ್ಚು ಕುಟುಂಬಗಳು ಒತ್ತುವರಿ ಮಾಡಿರುವ ಅಂದಾಜು ಇದೆ. ಇಷ್ಟು ದೊಡ್ಡ ವಿಷಯವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆಗೂ ತೆಗೆದುಕೊಂಡಿಲ್ಲ. ಇದು ಅವರ ದೂರದೃಷ್ಟಿ ಕೊರತೆ ಹಾಗೂ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಶಿವರಾಂ ಕಿಡಿಕಾರಿದರು.
ಅರಣ್ಯ ಸಂರಕ್ಷಣೆ ಜೊತೆಗೆ, ದಶಕಗಳಿಂದ ಭೂಮಿಯನ್ನು ಬಳಸಿಕೊಂಡು ಬದುಕುತ್ತಿರುವ ರೈತರಿಗೆ ಪರಿಹಾರ ಒದಗಿಸಬೇಕು. ಅರಣ್ಯ ಇಲಾಖೆಯ ದಾಖಲೆಗಳು ಸ್ಪಷ್ಟವಾಗಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಸಮಸ್ಯೆಗೆ ಗಮನ ಹರಿಸದಿರುವುದು ಸರ್ಕಾರದ ನಿಷ್ಠೆಯ ಮೇಲೆ ಅನುಮಾನ ಹುಟ್ಟಿಸುತ್ತಿದೆ ಎಂದು ಕಿಡಿಕಾರಿದರು.