ಕನ್ನಡಪ್ರಭವಾರ್ತೆ, ಹಾಸನ
ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು, ಭೂಸ್ವಾಧೀನ ಪರಿಹಾರ ಮತ್ತು ಆಡಳಿತ ಕಾರ್ಯಪದ್ಧತಿಗಳ ಕುರಿತಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ಕಾಚೇನಹಳ್ಳಿ ಏತ ನೀರಾವರಿ ಯೋಜನೆ ಮೊದಲ ಹಂತ ಹಾಗೂ ಎರಡನೇ ಹಂತಕ್ಕೆ ಹಿಂದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ೧೬೫ ಕೋಟಿ ರು. ಬಿಡುಗಡೆ ಮಾಡಿದ್ದರು. ಕೆಲವರು ಉದ್ಘಾಟನೆ ಮಾಡಿ ಭಾಷಣ ಮಾತ್ರ ಮಾಡಿ ಹೋದರೂ, ಆರು ವರ್ಷಗಳಾದರೂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಆಲಗೋಡನಹಳ್ಳಿ ಲಿಫ್ಟ್ ಇರಿಗೇಶನ್ ಮೂಲಕ ೨೬ ಕೆರೆಗಳನ್ನು ತುಂಬಿಸಲು ೨೦೧೯ ರಲ್ಲಿ ೪೭ ಕೋಟಿ ರು., ಶಂಭುಗೌಡನ ಕೆರೆಗೆ ೨೧ ಕೋಟಿ ರು., ಒಂಟಿಪುರದಿಂದ ಕಾಚೇನಹಳ್ಳಿ ಡ್ಯಾಂಗೆ ೨೨ ಕೋಟಿ ರು. ಮೀಸಲಿಟ್ಟರೂ ಪರಿಹಾರ ಕೈಗೆಟಕಿಲ್ಲ. ನಾವು ರೈತರ ಪರವಾದ ಸರ್ಕಾರವೆಂದು ಹೇಳುತ್ತೇವೆ. ಆದರೆ ಜಿಲ್ಲಾಧಿಕಾರಿ ಅಕೌಂಟ್‌ಗೆ ಹಣ ಬಂದರೂ ಪರಿಹಾರ ನೀಡದೇ ಎಸ್‌ಎಲ್‌ಒ ಕಚೇರಿಗೆ ಅಲೆಸುತ್ತಿದ್ದಾರೆ. ಎಸ್‌ಎಲ್‌ಒ ಕಚೇರಿ ಜಿಲ್ಲಾಧಿಕಾರಿಯ ಅಧೀನದಲ್ಲಿದೆ. ಜಿಲ್ಲಾಧಿಕಾರಿ ವಾರಕ್ಕೊಂದು ಸಭೆ ನಡೆಸುತ್ತಾರೆ, ಆದರೆ ಎಷ್ಟು ಅರ್ಜಿದಾರರ ಅರ್ಜಿಗಳು ಬಗೆಹರಿದಿವೆ ಎಂಬುದು ಗೊತ್ತಾಗುತ್ತಿಲ್ಲ. ಹಳೆಯ ಅರ್ಜಿಗಳನ್ನು ತ್ವರಿತವಾಗಿ ಮುಕ್ತಾಯ ಮಾಡಬೇಕು ಎಂದು ಒತ್ತಾಯಿಸಿದರು. ೧೯೮೬ರಲ್ಲಿ ಭೂಸ್ವಾಧೀನ ಮಾಡಲಾಗಿದ್ದರೂ, ಭೂಮಿ ಕಳೆದುಕೊಂಡವರಿಗೆ ಪರಿಹಾರದ ಹಣ ವಿತರಣೆ ಆಗಿಲ್ಲ, ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದಾರೆ.
ಈ ಜಿಲ್ಲಾಧಿಕಾರಿ ಹೊಡೆತ ತಡೆಯದೇ ಕೆಲವು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಯಾರಾದರೂ ಸೂಸೈಡ್ ಮಾಡಿಕೊಂಡರೆ ಜಿಲ್ಲಾಧಿಕಾರಿಗಳೇ ಹೊಣೆಗಾರರಾಗುತ್ತಾರೆ. ಡೀಸಿಯವರ ಒತ್ತಡದಿಂದ ಸೂಸೈಡ್ ಮಾಡಿಕೊಳ್ಳುವ ಹಂತಕ್ಕೆ ಹೋಗುವಂತಾಗಿದೆ ಎಂದು ಒಬ್ಬ ತಹಸೀಲ್ದಾರ್ ನನ್ನ ಬಳಿ ಹೇಳಿಕೊಂಡಿದ್ದಾರೆ. ನಾನು ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಜಿಲ್ಲಾಧಿಕಾರಿಗಳೇ ನಿಮ್ಮ ನಡವಳಿಕೆ ತಿದ್ದಿಕೊಳ್ಳಿ, ಕೆಳಮಟ್ಟದ ಅಧಿಕಾರಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳಿ ಹಾಸನದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಮಾಜಿ ಸಚಿವ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.