ಕನ್ನಡಪ್ರಭ ವಾರ್ತೆ, ಬೆಂಗಳೂರು
ಎಐಸಿಸಿಯ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಗುಜರಾತ್ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯೂ ಆದ ಯುವ ನಾಯಕ ಬಿ.ವಿ.ಶ್ರೀನಿವಾಸ್ ಅವರಿಗೆ ನಗರದಲ್ಲಿ ಭಾನುವಾರ ಪಕ್ಷದ ಕಾರ್ಯಕರ್ತರು, ಮುಖಂಡರು ಅದ್ಧೂರಿ ಸ್ವಾಗತ ನೀಡಿದರು.ಈ ಹಿಂದೆ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರೂ ಆಗಿ ದೇಶಾದ್ಯಂತ ಪಕ್ಷ ಸಂಘಟಿಸುವ ಕೆಲಸ ಮಾಡಿದ್ದ ಶ್ರೀನಿವಾಸ್ ಅವರನ್ನು ಗುರುತಿಸಿ ಪಕ್ಷ ಇದೀಗ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನ ನೀಡಿದೆ. ಕೊರೋನಾ ಸಮಯದಲ್ಲಿ ಅವರು ನೊಂದ ಜನರಿಗೆ ನೀಡಿದ ಸೇವೆ, ಸೌಲಭ್ಯ ಸ್ಮರಣೀಯ. ನೂತನ ಹುದ್ದೆ ವಹಿಸಿಕೊಂಡ ಬಳಿಕ ಶ್ರೀನಿವಾಸ್ ಮೊದಲ ಬಾರಿಗೆ ಭಾನುವಾರ ರಾಜ್ಯಕ್ಕೆ ಆಗಮಿಸಿದರು. ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಕಾರ್ಯಕರ್ತರು, ಯುವ ಕಾಂಗ್ರೆಸ್ ಮುಖಂಡರು, ಎನ್‌ಎಸ್‌ಯುಐ ಸದಸ್ಯರು ಹಾಗೂ ಅವರ ಬೆಂಬಲಿಗರು ಅವರನ್ನು ಹೆಗಲಮೇಲೆ ಹೊತ್ತು ಸಂಭ್ರಮಿಸುವ ಮೂಲಕ ಭವ್ಯವಾಗಿ ಸ್ವಾಗತಿಸಿದರು.
ಜೆಸಿಬಿ ಮೂಲಕ ಸೇಬು, ಕಿತ್ತಲೆ ಹಣ್ಣಿನ ಬೃಹತ್ ಹಾರ- ತುರಾಯಿಗಳು, ರಾರಾಜಿಸಿದ ಪಕ್ಷದ ಧ್ವಜಗಳು, ಮುಗಿಲುಮುಟ್ಟಿದ ಪಕ್ಷ ಹಾಗೂ ಶ್ರೀನಿವಾಸ್ ಪರ ಘೋಷಣೆ, ಹರ್ಷೋದ್ಗಾರಗಳೊಂದಿಗೆ ಅವರನ್ನು ಬರಮಾಡಿಕೊಳ್ಳಲಾಯಿತು. ನಂತರ ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿವರೆಗೆ ಬೈಕ್ ಮತ್ತು ಕಾರು ರ್‍ಯಾಲಿ ಮೂಲಕ ಕರೆತರಲಾಯಿತು. ಮಾರ್ಗದುದ್ದಕ್ಕೂ ಅಲ್ಲಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಅವರಿಗೆ ಹೂಗುಚ್ಛ ನೀಡಿ ಶುಭಾಶಯ ತಿಳಿಸಿದರು. ಪಕ್ಷದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಹಾರೈಸಿದರು.ಈ ವೇಳೆ ಮಾತನಾಡಿದ ಶ್ರೀನಿವಾಸ್, ಕರ್ನಾಟಕ ಕಾಂಗ್ರೆಸ್ ಕುಟುಂಬದ ಅಗಾಧ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಪ್ರತಿ ಹಂತದಲ್ಲೂ ಸಂಘಟನೆಯನ್ನು ಬಲಪಡಿಸುವ ಮತ್ತು ಕಾಂಗ್ರೆಸ್ ಪಕ್ಷದ ಮೌಲ್ಯಗಳನ್ನು ಎತ್ತಿಹಿಡಿಯಲು ಬದ್ಧ ಎಂದರು.