ಕೂಸಿನ ಮನೆ: ಶಿಶು ಆರೈಕೆದಾರರ ತರಬೇತಿ ಕಾರ್ಯಕ್ರಮ

KannadaprabhaNewsNetwork | Published : Jul 25, 2024 1:15 AM

ಸಾರಾಂಶ

Babies house training programme

-ಹೃದಯವಂತಿಕೆ ಗುಣ ಮಕ್ಕಳ ಆರೈಕೆದಾರರಲ್ಲಿರಲಿ: ಬಿರಾದಾರ್

-----

ಕನ್ನಡಪ್ರಭವಾರ್ತೆ ಶಹಾಪುರ

ಕ್ರಿಯಾಶೀಲ ಮಕ್ಕಳ ಮನಸ್ಸು ಯಾವಾಗಲೂ ಒಂದಿಲ್ಲೊಂದು ಚಟುವಟಿಕೆಯಲ್ಲಿ ತಲ್ಲೀನರಾಗಿರುತ್ತಾರೆ. ಅಂತಹ ಮಕ್ಕಳ ಚಟುವಟಿಕೆ ನಿಯಂತ್ರಿಸಿ, ಪಾಲನೆ-ಪೋಷಣೆ ಮಾಡಲು ಶಿಶು ಆರೈಕೆದಾರರಲ್ಲಿ ತಾಯಿ ಹೃದಯವಂತಿಕೆ ಗುಣ ಇರಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ್ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ ಯಾದಗಿರಿ, ತಾಲೂಕು ಪಂಚಾಯಿತಿ ಶಹಾಪುರ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಶಹಾಪುರ ಇವರ ಸಹಯೋಗದಲ್ಲಿ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ. ಕೂಸಿನ ಮನೆಗಳ ಮಕ್ಕಳ ಆರೈಕೆದಾರರಿಗಾಗಿ ನಡೆದ 3ನೇ ಹಂತದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮನರೇಗಾ ಯೋಜನೆಯ ನೋಂದಾಯಿತ ಕೂಲಿಕಾರರ, ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರ ಹಾಗೂ ರೈತ ಕುಟುಂಬಗಳನ್ನು ಆರ್ಥಿಕವಾಗಿ ಬಲವರ್ಧನೆ ಮಾಡುವ ಜತೆಗೆ ಗ್ರಾಮೀಣ ಮಹಿಳಾ ಕೂಲಿ ಕಾರ್ಮಿಕರ 3ವರ್ಷದೊಳಗಿನ ಮಕ್ಕಳ ಆರೋಗ್ಯ, ಪೌಷ್ಟಿಕತೆ ಹಾಗೂ ಸುರಕ್ಷತೆಗಾಗಿ ಸರ್ಕಾರ ಗ್ರಾಮ ಪಂಚಾಯಿತಿಗೊಂದು ಕೂಸಿನ ಮನೆಗಳನ್ನು ಆರಂಭಿಸುತ್ತಿದ್ದು, ಕೂಸಿನ ಮನೆಯ ಲಾಭ ಪಡೆಯುವ ಕುರಿತು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆ ಪೋಷಣೆಗೆ ಕೂಸಿನ ಮನೆ ತೆರೆಯಲಾಗಿದ್ದು, ಕೂಲಿ ಕೆಲಸಕ್ಕೆ ಹೋಗುವ ತಾಯಂದಿರು ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಹೋದರೆ, ತಾಯಂದಿರು ಕೆಲಸ ಮಾಡಿ ಬರುವರೆಗೆ ಕೂಸಿನ ಮನೆಯಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಆರೈಕೆ ಮಾಡಲಾಗುತ್ತದೆ ಎಂದರು.

ಕೂಸಿನ ಮನೆಗೆ ಬರುವ ಮಕ್ಕಳನ್ನು ಸ್ವಂತ ಮಕ್ಕಳಂತೆ ಪ್ರೀತಿ ಹಾಗೂ ಅಕ್ಕರೆಯಿಂದ ಆರೈಕೆ ಮಾಡುವುದು ಮಕ್ಕಳ ಆರೈಕೆದಾರರ ಜವಾಬ್ದಾರಿ. ಮಕ್ಕಳ ಆರೈಕೆಯಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ, ಎಲ್ಲ ಮಕ್ಕಳನ್ನು ಸಮಾನವಾಗಿ ಆರೈಕೆ ಮಾಡಬೇಕು. ಕೂಸಿನ ಮನೆಯ ಮಕ್ಕಳ ಪಾಲನೆ ಪೋಷಣೆ, ಪೌಷ್ಟಿಕ ಆಹಾರ ತಯಾರಿಕೆ, ಮಕ್ಕಳ ಆರೋಗ್ಯ, ಸ್ವಚ್ಛತೆ, ಕೂಸಿನ ಮನೆ ನಿರ್ವಹಣೆ ಕುರಿತು 7 ದಿನಗಳ ಕಾಲ ನೀಡುವ ತರಬೇತಿಯ ಸದುಪಯೋಗ ಪಡೆದು, ಮಕ್ಕಳನ್ನು ಆರೈಕೆ ಮಾಡಿ, ಕೂಸಿನ ಮನೆಯ ಯಶಸ್ವಿಗೆ ಸಹಕರಿಸಿ ಎಂದು ಮಕ್ಕಳ ಆರೈಕೆದಾರರಿಗೆ ಸೂಚಿಸಿದರು.

ಕೂಸಿನ ಮನೆಯಲ್ಲಿ ಮಕ್ಕಳ ಆರೈಕೆಗೆ ಅಗತ್ಯ ಮೂಲಸೌಲಭ್ಯಗಳಿದ್ದು, ಪ್ರಥಮ ಚಿಕಿತ್ಸಾ ಪಟ್ಟಿಗೆ, ಆಟಿಕೆ ಸಾಮಾನು, ಕಲಿಕಾ ಸಾಮಗ್ರಿ, ಶುದ್ಧ ಕುಡಿವ ನೀರು, ನಿತ್ಯ ಮೂರು ಬಾರಿ ಮಕ್ಕಳಿಗೆ ಪೌಷ್ಟಿಕ ಆಹಾರ ಕ್ರಮ ಸೇರಿದಂತೆ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಲಾಗುತ್ತದೆ ಎಂದು ತಿಳಿಸಿದರು.

ತಾಲೂಕು ಸಹಾಯಕ ನಿರ್ದೇಶಕ ಭೀಮಣಗೌಡ ಬಿರಾದಾರ್, ತಾ.ಪಂ ಸಹಾಯಕ ಲೆಕ್ಕಾಧಿಕಾರಿ ತಿರುಮಲರಡ್ಡಿ, ತಾಲೂಕು ಯೋಜನಾಧಿಕಾರಿ ಶ್ರೀ ಸುಬ್ಬರಾಯ ಚೌದ್ರಿ, ಮೊಬೈಲ್ ಕ್ರಷ್ ಕರ್ನಾಟಕ ಸ್ಟೇಟ್ ಮಾಸ್ಟರ್ ಟ್ರೇನರ್ ವಿಶ್ವನಾಥ, ರಜನಿ, ಸೇರಿದಂತೆ ಶಹಾಪುರ ಹಾಗೂ ವಡಗೇರಾ ತಾ.ಪಂ ವ್ಯಾಪ್ತಿಯ ಗ್ರಾ.ಪಂ ಕೂಸಿನ ಮನೆಗಳ ಶಿಶು ಆರೈಕೆದಾರರಿದ್ದರು.

-----

ಫೋಟೊ: 24ವೈಡಿಆರ್6:

ಶಹಾಪುರ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ. ಕೂಸಿನ ಮನೆಗಳ ಮಕ್ಕಳ ಆರೈಕೆದಾರರಿಗಾಗಿ 3ನೇ ಹಂತದ ತರಬೇತಿ ಕಾರ್ಯಕ್ರಮ ಜರುಗಿತು.

---000---

Share this article