ಜಡೆಕುಂಟೆ ಮಂಜುನಾಥ
ಚಳ್ಳಕೆರೆ ನಗರದ ಪ್ರವಾಸಿ ಮಂದಿರದ ಪಕ್ಕದಲ್ಲೇ ಇರುವ ಬಾಬು ಜಗಜೀವನ ರಾಂ ಭವನ (ಆದಿ ಕರ್ನಾಟಕ ಹಾಸ್ಟೆಲ್) ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾಗಿ ಕಾಮಗಾರಿ ಮುಗಿದು ಇದೀಗ ಉದ್ಘಾಟನಾ ಭಾಗ್ಯಕ್ಕಾಗಿ ಕಾದು ಕುಳಿತಿದೆ.
ಸಮಾಜ ಕಲ್ಯಾಣ ಇಲಾಖೆ ಅನುದಾನ ಹಾಗೂ ಪರಿಶಿಷ್ಟ ಜಾತಿಗಳ ಉಪಯೋಜನೆಯ ಕ್ರೋಢೀಕೃತ ಅನುದಾನದಲ್ಲಿ ನಿರ್ಮಾಣವಾಗಿರುವ ಬಾಬು ಜಗಜೀವನರಾಂ ಭವನ ಮಧುವಣಗಿತ್ತಿಯಂತೆ ರೆಡಿಯಾಗಿ ನಿಂತು ಬಿಟ್ಟಿದೆ. ಇನ್ನೇನು ಆಸಿಡ್ ಕ್ಲೀನಿಂಗ್ ಆಗಿಬಿಟ್ಟರೆ ಕಲ್ಲುನೆಟ್ಟು, ಟೇಪ್ ಕತ್ತರಿಸುವುದೊಂದೇ ಬಾಕಿ ಉಳಿದಿದೆ. ಆದ್ರೆ ಆ ಕೆಲಸ ಯಾವಾಗ ಆಗುತ್ತದೆಯೋ ಎಂಬ ನಿರೀಕ್ಷೆ ಹಲವರದು.2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗ ಚಳ್ಳಕೆರೆ ಶಾಸಕರಾಗಿ ಮೊದಲ ಬಾರಿಗೆ ಶಾಸನ ಸಭೆಗೆ ಆರಿಸಿ ಹೋಗಿದ್ದ ಈಗಿನ ಶಾಸಕ ಟಿ.ರಘುಮೂರ್ತಿ ಅವರ ಕೋರಿಕೆಯಂತೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅಂದಿನ ಸಮಾಜ ಕಲ್ಯಾಣ ಮಂತ್ರಿ ಎಚ್.ಆಂಜನೇಯ ಅವರು ಬಾಬೂಜಿ ಭವನಕ್ಕೆ ಅನುದಾನ ನೀಡಿದ್ದರು. ಇದೊಂದೇ ಅಲ್ಲದೇ ವಿವಿಧ ಸಮುದಾಯ ಭವನಗಳಿಗೂ ಭರಪೂರ ಅನುದಾನ ನೀಡಿದ್ದರು. ಆಗ ಶುರುವಾಗಿದ್ದ ಚಳ್ಳಕೆರೆ ಬಾಬೂಜಿ ಭವನಕ್ಕೆ ಇನ್ನೂ ಉದ್ಘಾಟನಾ ಭಾಗ್ಯ ಸಿಗದೇ ಇರುವುದು ಅಚ್ಚರಿ ತರಿಸಿದೆ.
ಚಳ್ಳಕೆರೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳು 2013ರ ನಂತರ ಪ್ರಗತಿಯ ಪಥದಲ್ಲಿ ಸಾಗುತ್ತಿವೆ. ಅಭಿವೃದ್ಧಿ ಕಾಮಗಾರಿಗಳೂ ಸೇರಿದಂತೆ ಅನೇಕ ಕಟ್ಟಡಗಳು ತಲೆ ಎತ್ತಿವೆ. ತಾಲೂಕು ಕಚೇರಿ, ಹೆಗ್ಗೆರೆ ತಾಯಮ್ಮ ಹೈಸ್ಕೂಲ್, ಬಿಸಿನೀರು ಮುದ್ದಪ್ಪ ಶಾಲೆ, ಎಚ್ ಪಿಪಿಸಿ ಕಾಲೇಜು, ಸರ್ಕಾರಿ ಬಸ್ ನಿಲ್ದಾಣ, ಇದೀಗ ಖಾಸಗಿ ಬಸ್ ನಿಲ್ದಾಣ ಇಂತಹ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಜಗಜೀವನರಾಂ ಹೆಸರಲ್ಲಿ ನಿರ್ಮಾಣ ಆಗುತ್ತಿರುವ ಭವನ ಸುದೀರ್ಘ ಒಂದು ದಶಕಕ್ಕೂ ಹೆಚ್ಚು ಸಮಯ ತೆಗೆದುಕೊಂಡಿದ್ದು ಮಾತ್ರ ವಿಪರ್ಯಾಸ.
ಕಾಮಗಾರಿ ಮುಗಿದಿದೆ: ತಾಲೂಕು ಸಮಾಜ ಕಲ್ಯಾಣಾಧಿಕಾರಿ ದೇವ್ಲಾನಾಯಕ್ ಮಾತನಾಡಿ, ಬಾಬೂಜಿ ಭವನದ ಎಲ್ಲಾ ಕಾಮಗಾರಿ ಪೂರ್ಣಗೊಂಡಿದೆ. ಭವನದ ಉಸ್ತುವಾರಿಗೆ ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿ ಇದೆ. ಈ ಸಮಿತಿ ಬಾಡಿಗೆ ದರ ನಿಗಧಿ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಡಲಾಗಿದೆ. ಶೀಘ್ರದಲ್ಲೇ ಬಾಬೂಜಿ ಭವನ ಲೋಕಾರ್ಪಣೆಗೊಳ್ಳಲಿದೆ.