ಅಡುಗೆ ಗ್ಯಾಸ್‌ ಸಿಲಿಂಡರ್‌ಗೆ ಕಡಿವಾಣ: ಬಂಕ್‌ಗಳಿಗೆ ತಟ್ಟಿದ ಬಿಸಿ

KannadaprabhaNewsNetwork |  
Published : Apr 05, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರು ಗೃಹ ಬಳಕೆ ಅಡುಗೆ ಸಿಲಿಂಡರ್‌ ಬುಕಿಂಗ್‌ ಹಾಗೂ ವಿತರಣೆಗೆ ಕಟ್ಟುನಿಟ್ಟು ಕ್ರಮದಿಂದ ಕಾಫಿನಾಡು ಚಿಕ್ಕಮಗಳೂರಿನ ಎಲ್‌ಪಿಜಿ ಬಂಕ್‌ಗಳ ಮೇಲೆ ಒತ್ತಡ ಹೆಚ್ಚಾಗಿ ನಿಗದಿತ ಪ್ರಮಾಣದಷ್ಟು ಇಂಧನ ಪೂರೈಕೆಯಾದರೂ ಸಾಕಾಗುತ್ತಿಲ್ಲ. ಹೀಗಾಗಿ, ಗ್ಯಾಸ್‌ ಬಂಕ್‌ಗಳ ಮುಂದೆ ಆಟೋಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗೃಹ ಬಳಕೆ ಅಡುಗೆ ಸಿಲಿಂಡರ್‌ ಬುಕಿಂಗ್‌ ಹಾಗೂ ವಿತರಣೆಗೆ ಕಟ್ಟುನಿಟ್ಟು ಕ್ರಮದಿಂದ ಕಾಫಿನಾಡು ಚಿಕ್ಕಮಗಳೂರಿನ ಎಲ್‌ಪಿಜಿ ಬಂಕ್‌ಗಳ ಮೇಲೆ ಒತ್ತಡ ಹೆಚ್ಚಾಗಿ ನಿಗದಿತ ಪ್ರಮಾಣದಷ್ಟು ಇಂಧನ ಪೂರೈಕೆಯಾದರೂ ಸಾಕಾಗುತ್ತಿಲ್ಲ. ಹೀಗಾಗಿ, ಗ್ಯಾಸ್‌ ಬಂಕ್‌ಗಳ ಮುಂದೆ ಆಟೋಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಮಗಳೂರು ನಗರದಲ್ಲಿ ಮೂರು ಎಲ್‌ಪಿಜಿ ಗ್ಯಾಸ್‌ ಬಂಕ್‌ಗಳಿದ್ದು, ಈ ಪೈಕಿ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌, ಗೋ ಗ್ಯಾಸ್‌ ಹಾಗೂ ಎಸ್ಸೇ ಪೆಟ್ರೋಲಿಯಂ ಕಂಪನಿ ಬಂಕ್‌ಗಳಿವೆ.

ಎಲ್ಲ ಗ್ಯಾಸ್‌ ಬಂಕ್‌ಗಳಲ್ಲಿ ಗ್ಯಾಸ್‌ ಖಾಲಿಯಾಗಿ ಬಹುತೇಕ 6 ರಿಂದ 7 ದಿನ ಕಳೆದಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಬಂಕ್‌ ನಲ್ಲಿ ಮಾತ್ರ ಗ್ಯಾಸ್‌ ಪೂರೈಕೆ ಲಕ್ಷಣ ಕಾಣುತ್ತಿದ್ದು ಇನ್ನುಳಿದ ಎರಡು ಖಾಸಗಿ ಬಂಕ್‌ಗಳಲ್ಲಿ ಸದ್ಯಕ್ಕೆ ಗ್ಯಾಸ್‌ ಪೂರೈಕೆ ಆಗುವ ಲಕ್ಷಣವಿಲ್ಲ.

ಹೀಗಾಗಿ, ಶನಿವಾರ ಇಂಡಿಯನ್‌ ಬಂಕ್‌ ಮುಂದೆ ಮಾತ್ರ ಆಟೋ ಸಾಲುಗಟ್ಟಿ ನಿಂತಿದ್ದು, ಉಳಿದ ಬಂಕ್‌ ಗಳನ್ನು ಬಂದ್‌ ಮಾಡಿದ ದೃಶ್ಯ ಕಂಡು ಬಂದವು.

ಅನಧಿಕೃತ ಗೃಹ ಬಳಕೆ ಸಿಲಿಂಡರ್‌ ತಡೆ ಎಫೆಕ್ಟ್‌?

ಇಸ್ರೇಲ್‌-ಇರಾನ್‌ ಯುದ್ಧ ಆರಂಭದ ಬಳಿಕ ರಾಜ್ಯದಲ್ಲಿ ಗೃಹ ಮತ್ತು ವಾಣಿಜ್ಯ ಬಳಕೆ ಅಡುಗೆ ಅನಿಲದ ಸಿಲಿಂಡರ್‌ ಪೂರೈಕೆ ಯಲ್ಲಿ ವ್ಯತ್ಯಾಸ ಉಂಟಾದ ಹಿನ್ನೆಲೆಯಲ್ಲಿ ಬುಕಿಂಗ್‌ ಹಾಗೂ ಪೂರೈಕೆಯಲ್ಲಿ ಸರ್ಕಾರದಿಂದ ಕೆಲವು ಕಟ್ಟುನಿಟ್ಟು ನಿಯಮ ಜಾರಿಗೊಳಿಸಲಾಯಿತು.

ಆ ವರೆಗೆ ಎಲ್ಲವೂ ಸುಸೂತ್ರವಾಗಿದ್ದ ಆಟೋ ಗ್ಯಾಸ್‌ ಪೂರೈಕೆ ವ್ಯವಸ್ಥೆ ದಿಢೀರ್‌ನೇ ಅಸ್ಥವ್ಯಸ್ಥಗೊಂಡಿದೆ. ಅನಧಿಕೃತ ಗೃಹ ಬಳಕೆಯ ಸಿಲಿಂಡರ್‌ ಬಳಕೆ ಮಾಡಿ ಓಡಿಸುತ್ತಿದ್ದ ಎಲ್‌ಪಿಜಿ ಆಟೋಗಳು ಬಂಕ್‌ ಕಡೆ ಮುಖ ಮಾಡಿದ್ದರಿಂದ ಬಂಕ್‌ ಗಳಲ್ಲಿ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಎಲ್‌ಪಿಜಿ ಬಂಕ್‌ ಮಾಲೀಕರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಎಲ್‌ಪಿಜಿ ಪೂರೈಕೆ ಕಡಿಮೆ ಆಗಿಲ್ಲ:

ನಗರದ ಇಂಡಿಯನ್‌ ಗ್ಯಾಸ್‌ ಬಂಕ್‌ಗೆ ಯುದ್ಧ ಆರಂಭಕ್ಕೂ ಮುನ್ನ ವಾರಕ್ಕೆ 3 ಟನ್‌ನಂತೆ ತಿಂಗಳಿಗೆ ಬರೋಬ್ಬರು 15 ಟನ್‌ ನಷ್ಟು ಎಲ್‌ಪಿಜಿ ಪೂರೈಕೆ ಇತ್ತು. ಈಗಲೂ ಅಷ್ಟೇ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ. ಆದರೆ, ಅದೇ ದಿನವೇ ಪೂರ್ಣ ಖಾಲಿ ಆಗುತ್ತಿದೆ. ಅದಕ್ಕೆ ಕಾರಣ ಖಾಸಗಿ ಗ್ಯಾಸ್‌ ಬಂಕ್‌ನಲ್ಲಿನ ಇಂಧನ ಪೂರೈಕೆ ವ್ಯತ್ಯಾಸ ಸಹ ಇರಬಹುದು ಎಂದು ಇಂಡಿಯನ್‌ ಗ್ಯಾಸ್‌ ಬಂಕ್‌ ಅಧಿಕಾರಿಗಳು ವಿವರಿಸಿದ್ದಾರೆ.

---ಬಾಕ್ಸ್‌---

ಕೆ.ಜಿಗೆ ₹145 ದರ

ಯುದ್ಧ ಆರಂಭಕ್ಕೂ ಮೊದಲು ನಗರದಲ್ಲಿ ₹56 ಕೆ.ಜಿಗೆ ಎಲ್‌ಪಿಜಿ ಗ್ಯಾಸ್‌ ಅನ್ನು ಆಟೋಗಳಿಗೆ ನೀಡಲಾಗುತ್ತಿತ್ತು. ಆದರೆ, ಇದೀಗ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಗ್ಯಾಸ್‌ ಬಂಕ್‌ನಲ್ಲೆ ಗ್ಯಾಸ್‌ ದರ ₹90.7 ಗೆ ಏರಿಕೆಯಾಗಿದೆ. ಉಳಿದಂತೆ ಖಾಸಗಿ ಬಂಕ್‌ಗಳಲ್ಲಿ ₹130 ರಿಂದ ₹145 ವರೆಗೆ ಮಾರಾಟ ಮಾಡಲಾಗುತ್ತಿದೆ. ಪ್ರತಿ ಬಾರಿ ಗ್ಯಾಸ್‌ ಬಂದಾಗಲೂ ದರ ಏರಿಕೆ ಆಗಲಿದೆ ಎಂದು ಆಟೋ ಚಾಲಕರು ದೂರಿದ್ದಾರೆ.-- ಕೋಟ್‌ --

ಬಂಕ್‌ಗಳಲ್ಲಿ ಎಲ್‌ಪಿಜಿ ಇಲ್ಲ. ಒಂದು ವಾರದಿಂದ ಆಟೋ ನಿಲ್ಲಿಸಿಕೊಂಡಿದ್ದೇವೆ. ಖಾಸಗಿ ಬಂಕ್‌ಗಳಲ್ಲಿ ದರ ಹೆಚ್ಚಳ ಮಾಡಿ ದ್ದಾರೆ. ಆ ಮಾತ್ರಕ್ಕೆ ಗ್ರಾಹಕರಿಂದ ಹೆಚ್ಚಿನ ಹಣ ಪಡೆಯಲು ಸಾಧ್ಯವಾಗುವುದಿಲ್ಲ.

- ಪ್ರದೀಪ್‌, ಆಟೋ ಚಾಲಕ, ಚಿಕ್ಕಮಗಳೂರು-- ಕೋಟ್‌ --

ತಿಂಗಳ ಹಿಂದೆ ₹56ಗೆ ಒಂದು ಕೆ.ಜಿ ಎಲ್‌ಪಿಜಿ ದೊರೆಯುತ್ತಿತ್ತು, ಇದೀಗ ಸರ್ಕಾರಿ ಸ್ವಾಮ್ಯದ ಬಂಕ್‌ನಲ್ಲಿ ₹97ಗೆ ಬಂದಿದೆ. ಖಾಸಗಿ ಬಂಕ್‌ಗಳಲ್ಲಿ ₹140ಗೆ ಮಾರಾಟ ಮಾಡಲಾಗುತ್ತಿದೆ. ಆ ದರದಲ್ಲಿ ಎಲ್‌ಪಿಜಿ ತುಂಬಿ ಆಟೋ ಚಾಲಾಯಿಸಿ ದುಡಿಮೆ ಮಾಡಲು ಆಗಲ್ಲ.

ಸತೀಶ್‌, ಆಟೋ ಚಾಲಕ, ಚಿಕ್ಕಮಗಳೂರು---ಬಾಕ್ಸ್‌--

ಸೋಮವಾರದೊಳಗೆ ಸರಿಪಡಿಸದಿದ್ದರೆ, ಮುಷ್ಕರ

ಸೋಮವಾರದೊಳಗೆ ಆಟೋ ಗ್ಯಾಸ್‌ ಪೂರೈಕೆ ಹಾಗೂ ಕಾಳ ಸಂತೆಯಲ್ಲಿ ಎಲ್‌ಪಿಜಿ ಮಾರಾಟ ಸರಿಪಡಿಸದಿದ್ದರೆ, ಸಾಮೂಹಿಕವಾಗಿ ಮುಷ್ಕರ ನಡೆಸಲಾಗುವುದು ಎಂದು ಆಟೋ ಚಾಲಕರು ಮತ್ತು ಮಾಲೀಕರ ಸಂಘ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಈಗಾಗಲೇ ಹಲವು ಬಾರಿ ಮನವಿ ಮಾಡಿದರೂ ಆಟೋಗಳಿಗೆ ಗ್ಯಾಸ್‌ ಪೂರೈಕೆ ಸರಿಯಾಗಿಲ್ಲ. ಇದೇ ರೀತಿ ಮುಂದುವರಿದರೆ, ಸೋಮವಾರದಿಂದ ಮುಷ್ಕರ ನಡೆಸಬೇಕಾಗಲಿದೆ ಎಂದು ಸಂಘದ ಅಧ್ಯಕ್ಷ ಉದಯ್‌ ಕುಮಾರ್‌ ಎಚ್ಚರಿಸಿದ್ದಾರೆ.

ಇನ್ನೂ ಎಲ್‌ಪಿಜಿ ಗ್ಯಾಸ್ ಬಂಕರ್‌ಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಶೀಘ್ರ ಆಟೋಗಳಿಗೆ ಗ್ಯಾಸ್ ಲಭ್ಯವಾಗುವಂತೆ ಸೂಚನೆ ನೀಡಬೇಕು.

ನಗರದಲ್ಲಿ ಸುಮಾರು 4 ಸಾವಿರ ಆಟೋಗಳು ಸಂಚರಿಸುತ್ತಿದ್ದು, 3 ಆಟೋ ಎಲ್‌ಪಿಜಿ ಗ್ಯಾಸ್ ಬಂಕರ್‌ಗಳಲ್ಲಿ ಒಂದೊಂದು ದರ ಇದೆ. ₹56 ಇದ್ದ ಎಲ್‌ಪಿಜಿ ಗ್ಯಾಸ್ ₹145ಗೆ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿದರು.

ಈ ಕಾರಣದಿಂದ ಆಟೋ ಚಾಲಕರಿಗೆ ಜೀವನ ನಡೆಸಲು ತೊಂದರೆಯಾಗಿದೆ. ಈಗಾಗಲೇ ಎಲ್‌ಪಿಜಿ ಗ್ಯಾಸ್ ಸಿಗದಿರುವ ಕಾರಣ ಆಟೋಗಳು ಮನೆ ಬಳಿ ಮತ್ತು ರಸ್ತೆಗಳಲ್ಲಿ ನಿಲ್ಲಿಸಲಾಗಿದೆ. ಬಂಕ್‌ನ ಮಾಲೀಕರು ವಿನಾಕಾರಣ ದರ ಹೆಚ್ಚಳ ಮಾಡಿ ಆಟೋ ಚಾಲಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಜಗದೀಶ್‌ ಕೋಟೆ, ಸಹಕಾರ್ಯದರ್ಶಿ ಯಶ್ವಂತ್, ಸಂಘಟನಾ ಕಾರ್ಯದರ್ಶಿ ಈಶ್ವರ್, ಪ್ರಧಾನ ಕಾರ್ಯದರ್ಶಿ ಎಚ್.ಸಿ ರಾಘವೇಂದ್ರ, ಮುಖಂಡರಾದ ಉದಯ್‌ಕುಮಾರ್, ಜಯಪ್ರಕಾಶ್, ನಿಸಾರ್, ಅಬ್ಬಾಸ್ ಉಪಸ್ಥಿತರಿದ್ದರು.

ಫೋಟೋ: ಗ್ಯಾಸ್‌ಚಿಕ್ಕಮಗಳೂರು ನಗರದ ಬೈಪಾಸ್‌ನಲ್ಲಿರುವ ಎಸ್ಸೇ ಪೆಟ್ರೋಲಿಯಂ ಕಂಪನಿ ಬಂಕ್‌ ಬಂದ್‌ ಆಗಿರುವುದು.

ಫೋಟೋ:

ಇಂಡಿಯನ್‌ 1 ಮತ್ತು 2

ಮೂಡಿಗೆರೆ ರಸ್ತೆಯಲ್ಲಿರುವ ಇಂಡಿಯನ್‌ ಗ್ಯಾಸ್‌ ಬಂಕ್‌ನಲ್ಲಿ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತಿರುವ ಆಟೋಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಾದಾಪುರ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಮಹಾರಥೋತ್ಸವ
ಅರಸೀಕೆರೆಯಲ್ಲಿ ಯುವಕನ ಮೇಲೆ ಹಲ್ಲೆ ಆರೋಪ