ಸೇವೆ, ತ್ಯಾಗದ ಸಂದೇಶ ನೀಡಿದ ಬಾಬೂಜಿ: ಶಾಸಕ ಕೆ.ಎಸ್.ಬಸವಂತಪ್ಪ

KannadaprabhaNewsNetwork |  
Published : Jul 07, 2025, 12:17 AM IST
ಕ್ಯಾಪ್ಷನ6ಕೆಡಿವಿಜಿ37ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿದರು. | Kannada Prabha

ಸಾರಾಂಶ

ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎನ್ನುವ ಸಂದೇಶ ಸಾರಿದ ಹೆಗ್ಗಳಿಕೆ ಡಾ.ಬಾಬು ಜಗಜೀವನರಾಂ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎನ್ನುವ ಸಂದೇಶ ಸಾರಿದ ಹೆಗ್ಗಳಿಕೆ ಡಾ.ಬಾಬು ಜಗಜೀವನರಾಂ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ತಾಲೂಕಿನ ಅಣಜಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಂ ಅವರ 39ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜ ಸುಧಾರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು. ಕಾರ್ಮಿಕರ ಏಳಿಗೆಯನ್ನು ಸದಾ ಬಯಸುತ್ತಿದ್ದರು ಎಂದರು.

ದೇಶದ ಜನರು ಆಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ‘ಜೈಜವಾನ್ ಜೈ ಕಿಸಾನ್’ ಎಂಬ ಸಂದೇಶದೊಂದಿಗೆ ಹಸಿರು ಕ್ರಾಂತಿ ಪ್ರಾರಂಭಿಸಿ ನೆರವಾದ ಪರಿಣಾಮ ಇವತ್ತು ಇವತ್ತು ದೇಶದ ಎಲ್ಲಾ ಗೋದಾಮುಗಳಲ್ಲಿ ದವಸ ಧಾನ್ಯಗಳು ಸಂಗ್ರಹವಾಗಿ ಆಹಾರದ ಕೊರತೆ ನೀಗಿಸಿದೆ. ಇದು ಡಾ.ಬಾಬು ಜಗಜೀವನರಾಂ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಅವರು ಕೊಟ್ಟ ಕೊಡುಗೆಯಾಗಿದೆ. ಇಂತಹ ಮಹಾನ್ ನಾಯಕರ ಕೊಡುಗೆ, ತತ್ವಾದರ್ಶಗಳನ್ನು ಮಕ್ಕಳು, ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಬೇರೆ ದೇಶಗಳಲ್ಲಿ ಆಹಾರಕ್ಕಾಗಿ ಪರದಾಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಆದರೆ ನಮ್ಮ ದೇಶದಲ್ಲಿ ಇನ್ನು ಹತ್ತು ವರ್ಷ ಆಹಾರದ ಕೊರತೆಯಾದರೆ ಅದನ್ನು ನಿಭಾಯಿಸುವಷ್ಟು ಶಕ್ತಿ ನಮಗೆ ಇದೆ ಎಂದರು.

ನಾವೇನಾದರೂ ಒಂದು ಸಾಧನೆ ಮಾಡಿದರೆ, ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ಹಳ್ಳಿ ನೆನಸಿಕೊಳ್ಳುತ್ತದೆ. ನಾವು ರಾಷ್ಟ್ರ ಮಟ್ಟಕ್ಕೂ ಆಗದಿದ್ದರೂ, ನಮ್ಮ ಪಕ್ಕದ ಮನೆಯವರಿಗಾದರೂ ಒಳ್ಳೆಯದನ್ನು ಮಾಡಬೇಕು. ನಮ್ಮ ಪಕ್ಕದ ಮನೆಯವರು ಒಳ್ಳೆಯ ವ್ಯಕ್ತಿ ಎಂದು ಕರೆಯಬೇಕು. ಹೀಗೆ ನಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ರಾಷ್ಟ್ರ ನಾಯಕರ ಆದರ್ಶ, ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆಯನ್ನು ಯುವಪೀಳಿಗೆಗೆ ಪರಿಚಯಿಸುವ ಕೆಲಸ ಶಿಕ್ಷಕರು ಮಾಡಬೇಕೆಂದು ಕಿವಿಮಾತು ಹೇಳಿದರು.

ದಿಶಾ ಸಮಿತಿ ಸದಸ್ಯರಾದ ಎಸ್.ಕೆ.ಚಂದ್ರಣ್ಣ, ಆಲೂರು ಸೋಮಣ್ಣ, ಗಿರಿಯಾಪುರ ಕೃಷ್ಣಮೂರ್ತಿ, ಬಸಣ್ಣ, ಅಣಜಿ ರಾಜಪ್ಪ, ಪ್ರಾಂಶುಪಾಲ ಮುದೋಬ ನಾಯಕ್, ಶಾಲಾ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.

PREV