ಗುರುವಪ್ಪ ಬಾಳೇಪುಣಿ ಸ್ಮರಣಾರ್ಥ ಎಜು ಕಾರುಣ್ಯ ಟ್ರಸ್ಟ್‌ ದತ್ತಿ ನಿಧಿ ಹಸ್ತಾಂತರ

KannadaprabhaNewsNetwork |  
Published : Jul 06, 2025, 11:49 PM IST
32 | Kannada Prabha

ಸಾರಾಂಶ

ಮಂಗಳೂರಿನ ಎಜು ಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಡಿಪು ಜನಶಿಕ್ಷಣ ಟ್ರಸ್ಟ್ ನಲ್ಲಿ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೇಪುಣಿ ಸ್ಮರಣಾರ್ಥ ಶೈಕ್ಷಣಿಕ ದತ್ತಿನಿಧಿ ಹಸ್ತಾಂತರ ಕಾರ್ಯಕ್ರಮ ಶನಿವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಮಂಗಳೂರಿನ ಎಜು ಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಡಿಪು ಜನಶಿಕ್ಷಣ ಟ್ರಸ್ಟ್ ನಲ್ಲಿ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೇಪುಣಿ ಸ್ಮರಣಾರ್ಥ ಶೈಕ್ಷಣಿಕ ದತ್ತಿನಿಧಿ ಹಸ್ತಾಂತರ ಕಾರ್ಯಕ್ರಮ ಶನಿವಾರ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ‌ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಶಿಕ್ಷಣ ಪಡೆಯಲು ಉತ್ಸಾಹ ಇರುವ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ನಮ್ಮಿಂದಾಗುವ ಎಲ್ಲಾ ರೀತಿಯ ಸಹಕಾರ ನೀಡುವ ಅವಶ್ಯಕತೆ ಇದೆ. ಗುರುವಪ್ಪ ಬಾಳೇಪುಣಿ ಹೆಸರಲ್ಲಿ ಶೈಕ್ಷಣಿಕ ನೆರವು ನೀಡುವ ಮೂಲಕ ಅವರ ಹೆಸರು ಉಳಿಸುವ ಕಾರ್ಯ ನಡೆದಿದೆ ಎಂದು ಶ್ಲಾಘಿಸಿದರು.

ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ, ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದವರು ಜನಶಿಕ್ಷಣ ಟ್ರಸ್ಟ್ ನಲ್ಲಿ ಸೇರಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಲಭಿಸಿದೆ. ಪ್ರತಿಭಾನ್ವಿತ ಉನ್ನತ ಶಿಕ್ಷಣಕ್ಕೆ ದಾನಿಗಳು ನೆರವು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ‌ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಉದ್ಯಮಿ ರಾಧಾಕೃಷ್ಣ ರೈ ಉಮಿಯ ಮಾತನಾಡಿ, ಹರೇಕಳ ಹಾಜಬ್ಬರಂತವರನ್ನು ಸಮಾಜಕ್ಕೆ ಪರಿಚಯಿಸಿದ, ಶಿಕ್ಷಣ ಹೆಚ್ಚಿನ ಮಹತ್ವ ನೀಡುತ್ತಿದ್ದ ಗುರುವಪ್ಪ ಬಾಳೇಪುಣಿ ಹೆಸರಲ್ಲಿ ಶೈಕ್ಷಣಿಕ ದತ್ತನಿಧಿ ಕಾರ್ಯಕ್ರಮ ನಡೆಯುತ್ತಿರುವುದು ಉತ್ತಮ ಕಾರ್ಯ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಸಮಾಜದ ಶಕ್ತಿ.‌ ಹೆಚ್ಚಿನ ಯಾರ ಬಗ್ಗೆ ಮಾತನಾಡುತ್ತಾರೆಯೋ ಅವರ ಆದರ್ಶ ಪಾಲನೆ ಮಾಡುವುದು ವಿರಳ. ಆದರೆ ಎಜು ಕಾರುಣ್ಯ ಟ್ರಸ್ಟ್ ಗುರುವಪ್ಪ ಬಾಳೇಪುಣಿ ಹೆಸರು ಉಳಿಸುವ ಪ್ರಯತ್ನ ಮಾಡಿದೆ. ಇಂದಿನ ಫಲಾನುಭವಿಗಳು ಮುಂದಿನ ದಿನಗಳಲ್ಲಿ ಇತರರ ಶಿಕ್ಷಣಕ್ಕೆ ಬೆಳಕಾಗಬೇಕು ಎಂದರು.

ಪೊಸ ಕುರಲ್ ವಾಹಿನಿಯ ಆಡಳಿತ ನಿರ್ದೇಶಕ ವಿದ್ಯಾಧರ ಶೆಟ್ಟಿ, ಅಬ್ಬಕ್ಕ ಟಿವಿಯ ಆಡಳಿತ ನಿರ್ದೇಶಕ ಶಶಿಧರ ಪೊಯ್ಯತ್ತಬೈಲ್, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮ್ಮರ್ ಕುಂಞಿ, ಕಲಾವಿದ ದಿನೇಶ್ ನಡಾರ್, ಉದ್ಯಮಿ ಇಬ್ರಾಹಿಂ ತಪ್ಷಿಯಾ ನಡುಪದವು, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಅಬೂಬಕ್ಕರ್ ಜಲ್ಲಿ, ಎಜು ಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ರಮೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಟ್ರಸ್ಟ್‌ನ ಅಧ್ಯಕ್ಷ ಮೋಹನ್ ದಾಸ್ ಮರಕಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಧೃತಿ ವಂದಿಸಿದರು.

PREV