ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೃಷಿಯಲ್ಲಿ ಹೊಸ ಹೊಸ ತಳಿಗಳನ್ನು ಸಂಶೋಧಿಸಿ ಆಹಾರಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಡಾ. ಬಾಬು ಜಗಜೀವನ್ ರಾಮ್ ಅವರ ಕೊಡುಗೆ ಅಪಾರವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರು 39ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶೋಷಿತ ಸಮುದಾಯದಲ್ಲಿ ಜನಿಸಿ ಸಾಕಷ್ಟು ನೋವು, ಅಪಮಾನಗಳನ್ನು ಎದುರಿಸಿ ಶಿಕ್ಷಣವೇ ಶಕ್ತಿ ಎಂದು ನಂಬಿದ್ದ ಡಾ. ಬಾಬು ಜಗಜೀವನ್ ರಾಮ್ ಅವರು ತಳ ಸಮುದಾಯದವರು ಸಹ ಉಪಪ್ರಧಾನಿಯಂತಹ ದೇಶದ ಅತ್ಯುನ್ನತ ಹುದ್ದೆಗೇರಬಹುದು ಎಂಬುದನ್ನು ಸಾಧಿಸಿ ತೋರಿಸಿಕೊಟ್ಟರು. ಸಚಿವ ಸಂಪುಟದಲ್ಲಿ ಆಹಾರ, ಕಾರ್ಮಿಕ, ರಕ್ಷಣಾ ಖಾತೆಗಳನ್ನು ಬಾಬೂಜೀಯವರು ಸಮರ್ಥವಾಗಿ ನಿಭಾಯಿಸಿ ಇತರರಿಗೂ ಮಾದರಿಯಾಗಿದ್ದಾರೆ. ಅವರ ಆದರ್ಶ ಚಿಂತನೆಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಿದೆ ಎಂದರು.ಭಾರತದಲ್ಲಿ ಆಹಾರಕ್ಕೆ ಆಹಾಕಾರ ಉಂಟಾಗಿದ್ದ ಸಂದರ್ಭದಲ್ಲಿ ಆಹಾರ ಖಾತೆಯನ್ನು ವಹಿಸಿಕೊಂಡ ಬಾಬುಜೀಯವರು ವೈಜ್ಞಾನಿಕ ಕೃಷಿಗೆ ಒತ್ತು ನೀಡುವ ಮೂಲಕ ಹೊಸಹೊಸ ತಳಿಗಳ ಅವಿಷ್ಕಾರಕ್ಕೆ ನಾಂದಿ ಹಾಡಿದರು. ಕಾರ್ಮಿಕ ಮಂತ್ರಿಯಾಗಿ ಕಾರ್ಮಿಕರ ದೌರ್ಜನ್ಯ, ದಬ್ಬಾಳಿಕೆಗಳನ್ನು ತಡೆದು ಕಾರ್ಮಿಕರ ಕಲ್ಯಾಣಕ್ಕೆ ಶ್ರಮಿಸಿದರು. ರಕ್ಷಣಾ ಮಂತ್ರಿಯಾಗಿದ್ದ ಸಮಯದಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತ ಸೈನ್ಯವನ್ನು ಯಶಸ್ವಿಯಾಗಿ ಮುನ್ನೆಡೆಸಿದ ಕೀರ್ತಿ ಬಾಬೂಜೀಯವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ ಅವರು ಮಾತನಾಡಿ, ದೇಶ ಕಂಡ ಧೀಮಂತ ನಾಯಕ ಬಾಬು ಜಗಜೀವನ್ ರಾಮ್ ಅವರಾಗಿದ್ದಾರೆ. ದೇಶದ ಅಭಿವೃದ್ಧಿಗೆ ಬಾಬೂಜೀಯವರ ಕೊಡುಗೆ ಅಪಾರವಾಗಿದೆ. ಜನಸಾಮಾನ್ಯರಿಗೆ ಸ್ವಾಭಿಮಾನದ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ವೇದಿಕೆ ಒದಗಿಸಿಕೊಟ್ಟ ಬಾಬೂಜೀಯವರ ಪುಣ್ಯಸ್ಮರಣೆಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ, ಬಿಹಾರದ ಕುಗ್ರಾಮದಲ್ಲಿ ಹುಟ್ಟಿ ಭಾರತದ ರಾಜಕೀಯ ಇತಿಹಾಸಲ್ಲಿ ಅಪೂರ್ವ ಸಾಧನೆಗೈದವರು ಬಾಬು ಜಗಜೀವನ್ ರಾಮ್. ಅಸ್ಪೃಶ್ಯತೆ ಆಚರಣೆ ವ್ಯಾಪಕವಾಗಿದ್ದ ಆಗಿನ ಕಾಲದಲ್ಲಿ ಶಾಲಾದಿನಗಳಿಂದಲೂ ಹುಟ್ಟು ಹೋರಾಟಗಾರರಾಗಿದ್ದ ಎದೆಗುಂದದೇ ಜನರನ್ನು ಜಾಗೃತಗೊಳಿಸಿದರು. ಹಸಿರು ಕ್ರಾಂತಿ ಹುಟ್ಟುಹಾಕಿ ದೇಶದ ಆಹಾರಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬೂ ಜಗಜೀವನ್ ರಾಮ್ ಈ ನಾಡು ಕಂಡ ಮಹಾನ್ ನಾಯಕರು. ಅವರ ವಿಚಾರಧಾರೆಗಳು ಅದರ್ಶ ಮೌಲ್ಯಯುತ ಗುಣಗಳನ್ನು ನಾವೆಲ್ಲರೂ ಅನುಸರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಜನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ ಅವರು ‘ಮುಟ್ಟಿಸಿಕೊಳ್ಳದ ತಂದೆ ನೀನು ಜಂಗಮ, ಜಗದ ಜಂಗಮ’ ಗೀತೆ ಹಾಡಿ ಕಾರ್ಯಕ್ರಮದಲ್ಲಿ ಗಮನ ಸೆಳೆದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಸಮಾಜ ಕಲ್ಯಾಣ ಉಪನಿರ್ದೇಶಕ ಬಿಂದ್ಯಾ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಂಜುಂಡೇಗೌಡ, ಸಮಾಜದ ಮುಖಂಡರಾದ ಬಸವನಪುರ ರಾಜಶೇಖರ್, ಚಾ.ಗು. ನಾಗರಾಜು, ಎಂ. ಶಿವಕುಮಾರ್, ಡ್ಯಾನ್ಸ್ ಬಸವರಾಜು, ಸೆಂಟ್ರಿಂಗ್ ಸಿದ್ದಪ್ಪ, ಸೋಮೇಶ್, ಮನು, ರಾಚಪ್ಪ, ಮಹೇಶ್, ಆಲೂರು ನಾಗೇಂದ್ರ, ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಭಾಂಗಣದ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.