ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನ ವಾರ್ಷಿಕೋತ್ಸವ

KannadaprabhaNewsNetwork | Published : Mar 21, 2025 12:32 AM

ಸಾರಾಂಶ

ಸುಮಾರು ಸಾವಿರ ವರ್ಷಗಳ ಐತಿಹಾಸಿಕ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಪೊನ್ನಂಪೇಟೆ ತಾಲೂಕು ಬಾಡಗರಕೇರಿಯಲ್ಲಿರುವ ದಕ್ಷಿಣ ಭಾರತದ ಏಕೈಕ ಹಾಗೂ ಸುಮಾರು ಸಾವಿರ ವರ್ಷಗಳ ಐತಿಹಾಸಿಕ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಸಾವಿರಾರು ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಪ್ರಾರ್ಥನೆ ಸಲ್ಲಿಸಿದರು.

ಮಾರ್ಚ್ 8 ರಂದು ಕೊಡಿಮರ ನಿಲ್ಲಿಸುವ ಮೂಲಕ ಉತ್ಸವ ಆರಂಭವಾಗಿ ಕಳೆದ 11 ದಿನಗಳಿಂದ ಪ್ರತಿನಿತ್ಯ ವಿವಿಧ ಪೂಜಾ ಕೈಂಕರ್ಯ, ವಿಶೇಷ ಪೂಜೆ ನಡೆಯಿತು.

ದೇವಸ್ಥಾನವನ್ನು ಪುಷ್ಪಲಂಕಾರ, ವಿದ್ಯುತ್ ಅಲಂಕಾರದಲ್ಲಿ ಕಂಗೊಳಿಸುತ್ತಿತ್ತು. ಉತ್ಸವ ಹಿನ್ನಲೆ 10 ಗಂಟೆಗೆ ನಿತ್ಯ ಪೂಜೆ, ತುಲಾಭಾರ, ಮಧ್ಯಾಹ್ನ 3 ಗಂಟೆಗೆ ಶಾಸ್ತ್ರೋಕ್ತವಾಗಿ 12 ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ, ಸಂಜೆ 5ಕ್ಕೆ ಉತ್ಸವ ಮೂರ್ತಿ ದರ್ಶನ, ಅವಭೃತ ಸ್ನಾನ ರಾತ್ರಿ 8.30 ಕ್ಕೆ ಊರಿನ ಪ್ರತಿ ಕುಟುಂಬದ ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ತಳೆಯತಕ್ಕಿ ಬೊಳಕ್ ನೊಂದಿಗೆ ಉತ್ಸವ ಮೂರ್ತಿಗೆ ಸ್ವಾಗತ, ರಾತ್ರಿ ಉತ್ಸವ ಮೂರ್ತಿ ದರ್ಶನ, ಉತ್ಸವ ಮೂರ್ತಿ ನೃತ್ಯ, ವಸಂತ ಪೂಜೆ ನಡೆಯಿತು.

ಸಂಜೆ 6 ರಿಂದ 8 ಗಂಟೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ಭಕ್ತಾದಿಗಳಿಗೆ ಬಾಡಗರಕೇರಿಯ ಮರೆನಾಡು ಸ್ಪೋರ್ಟ್ಸ್ ಕ್ಲಬ್ ನಿಂದ ಲಘು ಉಪಹಾರ ಏರ್ಪಡಿಸಲಾಗಿತ್ತು. ಪಟಾಕಿಗಳ ಬಣ್ಣದ ಚಿತ್ತಾರ ಗಮನ ಸೆಳೆಯಿತು.

ದೇವತಕ್ಕ ಅಣ್ಣೀರ ಕುಟುಂಬದ ದಾದ ಗಣಪತಿ, ನಾಡ್ ತಕ್ಕ ಕಾಯಪಂಡ ಕುಟುಂಬದ ಅಯ್ಯಪ್ಪ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೋನಿರ ಸುಬ್ರಮಣಿ, ಉಪಾಧ್ಯಕ್ಷ ಕಾಯಪಂಡ ಸ್ಟಾಲಿನ್ ಗಣಪತಿ, ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್, ಖಜಾಂಚಿ ಬಲ್ಯಮೀದೇರಿರ ಚೇತನ್ ಸೋಮಣ್ಣ, ಸದಸ್ಯರಾದ ಮೀದೇರಿರ ಜೈ ಗಣಪತಿ, ಕಾಯಪಂಡ ಕಾವೇರಪ್ಪ, ಅಣ್ಣೀರ ಲೋಕೇಶ್, ಮಲ್ಲೇಂಗಡ ಗಣಪತಿ, ಅಣ್ಣೀರ ಸರು ಮಂಜುನಾಥ್, ಕಾಯಪಂಡ ಸುರೇಂದ್ರ, ಅಮ್ಮತ್ತೀರ ಪರಮೇಶ್ವರ, ಬಲ್ಯಮೀದೇರಿರ ರನ್ನು, ಕಾಯಪಂಡ ಸುನಿಲ್, ಪ್ರಧಾನ ಅರ್ಚಕ ಗಿರೀಶ್ ಅವರ ನೇತೃತ್ವದಲ್ಲಿ ಉತ್ಸವ ಯಶಸ್ವಿಯಾಗಿ ನೆರವೇರಿತು. ಬುಧವಾರ ಬೆಳಗ್ಗೆ ಕೊಡಿಮರ ಇಳಿಸುವ ಮೂಲಕ ಉತ್ಸವ ಕಟ್ಟು ತೆರವುಗೊಂಡಿತು.

Share this article