- ಮಾಯಕೊಂಡ 22 ಕೆರೆ ತುಂಬಿಸಲು ಅನುದಾನ ಕೊಡಿ: ಶಾಸಕ ಬಸವಂತಪ್ಪ ಮನವಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ- ಚಿತ್ರದುರ್ಗ ಮೆಗಾ ಡೇರಿ ಆರಂಭಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ತಕ್ಷಣವೇ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಿದರು.ಮೆಗಾ ಡೈರಿ ಸ್ಥಾಪಿಸಲು ತಾಲೂಕಿನ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕಲ್ಪಪನಹಳ್ಳಿಯಲ್ಲಿ ಭೂಮಿ ಖರೀದಿಸಲಾಗಿದೆ. ಸರ್ಕಾರ ತಕ್ಷಣ ಅನುದಾನ ಬಿಡುಗಡೆ ಮಾಡಿ, ಡೇರಿ ಆರಂಭಿಸಿದರೆ ಉಭಯ ಜಿಲ್ಲೆಯ ರೈತರಿಗೆ ಆರ್ಥಿಕ ಶಕ್ತಿ ತುಂಬಿದಂತಾಗುತ್ತದೆ ಎಂದು ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಸರ್ಕಾರದ ಗಮನ ಸೆಳೆದರು.
ಶಿವಮೊಗ್ಗ ಹಾಲು ಒಕ್ಕೂಟದಿಂದ ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳನ್ನು ಪ್ರತ್ಯೇಕಿಸಿ, ಉಭಯ ಜಿಲ್ಲೆಗಳನ್ನು ಒಳಗೊಂಡ ಮೆಗಾ ಡೇರಿ ಸ್ಥಾಪಿಸುವಂತೆ ದಶಕಗಳಿಂದಲೂ ಬೇಡಿಕೆ ಇದೆ. ಹೈನುಗಾರಿಕೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಸಬ್ಸಿಡಿ ಕೊಡುವುದನ್ನು ಶೇ.75ಕ್ಕೆ ಹೆಚ್ಚಿಸಿದರೆ ಆರ್ಥಿಕ ಸ್ವಾವಲಂಬನೆಗೆ ಅವಕಾಶ ನೀಡಿದಂತಾಗುತ್ತದೆ ಎಂದರು.ರಾಜ್ಯದಲ್ಲಿ ಅತಿ ಹಿಂದುಳಿದ ಮೀಸಲು ಕ್ಷೇತ್ರಗಳಲ್ಲಿ ಒಂದಾಗಿರುವ ಮಾಯಕೊಂಡ ಕ್ಷೇತ್ರ ಹಾಗೂ ಪಕ್ಕದ ಕ್ಷೇತ್ರಗಳ 22 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಎಲ್ ಅಂಡ್ ಟಿ ಕಂಪನಿ ಕೈಗೊಂಡಿತ್ತು. ಕಳಪೆ ಕಾಮಗಾರಿಯಿಂದಾಗಿ 100 ಹಳ್ಳಿಗೆ ಕುಡಿಯುವ ನೀರು, ನೀರಾವರಿ ಸೌಲಭ್ಯ ಕಲ್ಪಿಸುವ ಕನಸು ಸಾಕಾರಗೊಂಡಿಲ್ಲ. ಪುನಾ ಹೊಸದಾಗಿ ಪೈಪ್‌ಲೈನ್ ಕಾಮಗಾರಿಗೆ ಹಣ ನೀಡಿ, ಕಾಮಗಾರಿ ಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈಗ ಅನುದಾನ ಬಿಡುಗಡೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಹೆಚ್ಚು ಗುಡ್ಡಗಾಡು ಪ್ರದೇಶವಿರುವ ಮಾಯಕೊಂಡ ಭಾಗದಲ್ಲಿ ಅತಿ ಹೆಚ್ಚು ಕೆರೆಗಳನ್ನು ನಿರ್ಮಿಸಬೇಕು. ಬ್ರಿಟಿಷರ ಕಾಲದಲ್ಲಿ ಬ್ರಿಟಿಷರು ನಿರ್ಮಿಸಿದ್ದ ಕೆರೆಯೂ ಇದೆ. ಅದನ್ನೂ ಜೀರ್ಣೋದ್ಧಾರ ಮಾಡಿದರೆ, ಅಂತರ್ಜಲ ವೃದ್ಧಿಯಾಗಿ, ಜೀವ ಸಂಕುಲಕ್ಕೆ ನೀರಿನ ಸಮಸ್ಯೆ ನೀಗಿಸಿದಂತಾಗುತ್ತದೆ. ಪರಿಶಿಷ್ಟ ಜಾತಿ- ಪಂಗಡಗಳ ಅಭಿವೃದ್ಧಿ ನಿಗಮಗಳಿಗೆ ಅನೇಕ ಸೌಲಭ್ಯ ಕಲ್ಪಿಸಲು ಅನುದಾನದ ಕೊರತೆ ಇದೆ. ಹೆಚ್ಚು ಅನುದಾನ ನೀಡಬೇಕು. ಪರಿಶಿಷ್ಟರು ಆರ್ಥಿಕವಾಗಿ ಸಬಲರಾಗಲು ಭೂ ಒಡೆತನ ಯೋಜನೆ ಜಾರಿಗೊಳಿಸಿದ್ದು, ಕ್ಷೇತ್ರಕ್ಕೆ ಕೇವಲ ಒಂದೇ ಒಂದು ಸೌಲಭ್ಯ ಕೊಟ್ಟರೆ ಸಾಲದು. ಹೆಚ್ಚು ಸೌಲಭ್ಯ ನೀಡುವ ಕೆಲಸವಾಗಬೇಕು. ಖಾಸಗಿ ಕಾಲೇಜುಗಳಲ್ಲಿ ಡಿಪ್ಲೊಮಾ, ನರ್ಸಿಂಗ್, ಪ್ಯಾರಾ ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಲ್ಲಿ ಅಭ್ಯಾಸ ಮಾಡುವ ಪರಿಶಿಷ್ಟ ಮಕ್ಕಳಿಗೆ 2013-14ರಲ್ಲಿ ಹಾಸ್ಟೆಲ್ ಸೌಲಭ್ಯವಿತ್ತು. ಈಗ ಇಲ್ಲ. ತಕ್ಷಣವೇ ಅಂತಹ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.ಹೊರಗುತ್ತಿಗೆ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು. ಶೋಷಿತ ಸಮುದಾಯಗಳಿಗೆ ತ್ವರಿತ ನ್ಯಾಯ ಒದಗಿಸಲು ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ರಾಜ್ಯದಲ್ಲಿ 33 ವಿಶೇಷ ಪೊಲೀಸ್ ಠಾಣೆ ಸ್ಥಾಪಿಸಬೇಕು. ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ₹2 ಕೋಟಿ ಮೀಸಲಿಟ್ಟು, ಒಬಿಸಿ, ಅಲ್ಪಸಂಖ್ಯಾತರಿಗೂ ₹2 ಕೋಟಿ ಮೀಸಲಿಡಬೇಕು. ರೈತರು, ಕಾಯಕ ಜೀವಿಗಳು, ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‌ಸಿಪಿ-ಎಸ್‌ಟಿಪಿ ಯೋಜನೆಯಡಿ ₹48,018 ಕೋಟಿ ಮೀಸಲಿಟ್ಟ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದಿಸುವುದಾಗಿ ಶಾಸಕ ಬಸವಂತಪ್ಪ ಸದನಕ್ಕೆ ತಿಳಿಸಿದರು.
- - -ಕೋಟ್‌ಮಳೆಗಾಲದಲ್ಲಿ ತುಂಗಾ ಜಲಾಯಶದಿಂದ ಭದ್ರಾ ಜಲಾಶಯಕ್ಕೆ ನೀರು ತುಂಬಿಸಿ ಅಪ್ಪರ್ ಭದ್ರಾಗೆ ನೀರು ನೀಡುವ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಿದರೆ ಭದ್ರಾ ಅಚ್ಚುಕಟ್ಟಿನ ರೈತರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ, ನಮ್ಮ ಭಾಗದ ರೈತರಿಗೆ ಅನಾನುಕೂಲವಾಗಲಿದೆ. ಕೂಡಲೇ ಸರ್ಕಾರ ಈ ಯೋಜನೆ ಕಾಮಗಾರಿ ಪೂರ್ಣಗೊಳಿಸಲಿ. ರಾಗಿ, ಭತ್ತ, ತೊಗರಿ ಬೆಂಬಲ ಬೆಲೆಯಡಿ ಖರೀದಿಸಿದಂತೆ ಮೆಕ್ಕೆಜೋಳವನ್ನೂ ಬೆಂಬಲ ಬೆಲೆಯಡಿ ಖರೀದಿಸಬೇಕು.
- ಕೆ.ಎಸ್.ಬಸವಂತಪ್ಪ, ಶಾಸಕ- - - -19ಕೆಡಿವಿಜಿ1, 2:
ವಿಧಾನಸೌಧದಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದರು.