ಬ್ಯಾಡಗಿ:ಜಪಾನ್ ದೇಶದ ಆಚಿನಾಗೋವಿಯಲ್ಲಿ ಸೆ. 21ರಿಂದ ಆರಂಭವಾಗಲಿರುವ 20ನೇ ಏಷಿಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಥೈಲ್ಯಾಂಡ್ ದೇಶದ ಕಬಡ್ಡಿ ತಂಡದ ಮುಖ್ಯ ತರಬೇತುದಾರರಾಗಿ ಬ್ಯಾಡಗಿ ಪಟ್ಟಣದ ನ್ಯಾಷನಲ್ ಯುಥ್ ಕ್ಲಬ್‌ನ ಹಿರಿಯ ರಾಷ್ಟ್ರೀಯ ಕಬಡ್ಡಿ ಆಟಗಾರ ರವೀಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಥೈಲ್ಯಾಂಡನಲ್ಲಿ ಬ್ಯಾಡಗಿ ಖದರ್: ಆರಂಭದಿಂದಲೂ ಬ್ಯಾಡಗಿ ಪಟ್ಟಣ ಕಬಡ್ಡಿ ಕ್ರೀಡೆಯಲ್ಲಿ ಮುಂಚೂಣಿಯಲ್ಲಿದೆ, ಕಬಡ್ಡಿ ಆಟದಿಂದಲೇ ಬೆಂಗಳೂರಿನ ಸಿಐಎಲ್ (ಕೇಂದ್ರ ಸರ್ಕಾರ) ತಂಡದಲ್ಲಿ ನೌಕರಿ ಗಿಟ್ಟಿಸಿಕೊಂಡ ರವೀಂದ್ರ ಶೆಟ್ಟಿ ಸಾಧನೆಯ ಹಾದಿಯಲ್ಲಿ ಹಿಂದಿರುಗಿ ನೋಡಿದ ಉದಾಹರಣೆಗಳಿಲ್ಲ, ಕಬಡ್ಡಿ ಆಟಗಾರನಾಗಿ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಂಡ ರವೀಂದ್ರ ಶೆಟ್ಟಿ ಬಳಿಕ ಕಬಡ್ಡಿ ಕೋಚ್ ತರಬೇತಿ (ಎನ್‌ಐಎಸ್) ಪೂರೈಸಿದರು. ಆಡಿದ ಅನುಭವ ಹಾಗೂ ತರಬೇತಿ ಅನುಭವ ಎರಡರ ಸಮ್ಮಿಶ್ರಣದಿಂದ ಇಂದು ದೇಶದಾದ್ಯಂತ ಉತ್ತಮ ಕ್ರೀಡಾಪಟುಗಳಿಗೆ ಅವಕಾಶ ನೀಡಲು ಅನುಕೂಲವಾಯಿತು.ಮಣ್ಣಿನ ಆಟ ಕಬಡ್ಡಿ ವಿದೇಶಕ್ಕೆ: ಕಬಡ್ಡಿ ಭಾರತದ ಮಣ್ಣಿನ ಜತೆಗೂಡಿರುವ ಆಟವಾಗಿದ್ದು, ಈ ಕ್ರೀಡೆಯನ್ನು ಇತರ ದೇಶಗಳಿಗೂ ತಲುಪಿಸುವ ನಿಟ್ಟಿನಲ್ಲಿ ಕಳೆದ 3 ವರ್ಷಗಳಿಂದ ಅವಿರತ ಶ್ರಮ ವಹಿಸುತ್ತಿರುವ ರವೀಂದ್ರ ಶೆಟ್ಟಿ ಥೈಲ್ಯಾಂಡ್ ದೇಶದ ಪುರುಷರ ಹಾಗೂ ಮಹಿಳಾ ಕಬಡ್ಡಿ ತಂಡಗಳಿಗೆ ತರಬೇತುದಾರರಗಾಗಿ ನೇಮಕಗೊಂಡು ತರಬೇತಿ ನೀಡುತ್ತಿದ್ದಾರೆ.
ಅಭಿನಂದನೆ: ಏಷಿಯನ್ ಗೇಮ್ಸ್‌ನಲ್ಲಿ ಥೈಲ್ಯಾಂಡ್ ತಂಡ ಮುನ್ನಡೆಸುತ್ತಿರುವ ರವೀಂದ್ರ ಶೆಟ್ಟಿ ಅವರ ಸಾಧನೆಗೆ ನ್ಯಾಷನಲ್ ಯುಥ ಕ್ಲಬ್‌ನ ಸದಸ್ಯರು ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಹಾಗೂ ತೀರ್ಪುಗಾರರ ಮಂಡಳಿಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.ರವೀಂದ್ರ ಶೆಟ್ಟಿ ಅವರ ಅವಿರತ ಶ್ರಮ ಹಾಗೂ ಪ್ರಯತ್ನದಿಂದ ಕಬಡ್ಡಿ ಸಾಗರದಾಚೆಗೆ ತಲುಪಿದ್ದು, ಅದನ್ನು ಕೊಂಡೊಯ್ದ ಬ್ಯಾಡಗಿಯ ಹೆಮ್ಮಯ ಪುತ್ರ ಎಂದರೆ ತಪ್ಪಾಗಲಾರದು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ರವೀಂದ್ರ ಶೆಟ್ಟಿ ನನಗೆ ಹತ್ತಿರದಿಂದ ಪರಿಚಯವಿರುವ ವ್ಯಕ್ತಿ ಅತ್ಯಂತ ಸರಳ ವ್ಯಕ್ತಿತ್ವ. ಅವರು ಸಾಮಾನ್ಯ ಸಾಧನೆ ತೋರುವ ಮೂಲಕ ಕಬಡ್ಡಿಯಲ್ಲಿ ಬ್ಯಾಡಗಿ ಹೆಸರನ್ನು ವಿದೇಶ ತಲುಪಿಸಿದ್ದಾರೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.