ಭೀಕರ ಬರದಿಂದ ಹಮಾಲರ ಬದುಕು ಹೈರಾಣ

KannadaprabhaNewsNetwork |  
Published : Sep 18, 2026, 02:30 AM IST
ಕೊಪ್ಪಳ ಎಪಿಎಂಸಿಯಲ್ಲಿ ಲೋಡ್‌ಗಾಗಿ ಕಾದು ಕುಳಿತಿರುವ ಹಮಾಲರು. | Kannada Prabha

ಸಾರಾಂಶ

ಕೊಪ್ಪಳದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಕಾಲಿಟ್ಟರೆ ಹಮಾಲರ ಸಂಕಷ್ಟದ ಕರಾಳ ಚಿತ್ರಣ ಕಣ್ಣಿಗೆ ರಾಚುತ್ತದೆ. ಮೈಮೇಲಿನ ಅಂಗಿ ತೆಗೆದು, ಹೆಗಲಿಗೆ ಟವೆಲ್ ಹಾಕಿಕೊಂಡು, ಯಾವುದಾದರೂ ಒಂದು ಲೋಡ್‌ ಬರಬಹುದೇನೋ ಎಂಬ ನಿರೀಕ್ಷೆಯಲ್ಲಿ ಹಮಾಲರು ಗುಂಪು-ಗುಂಪಾಗಿ ಕುಳಿತಿರುವ ದೃಶ್ಯ ಕಂಡುಬರುತ್ತದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ‘ರೈತ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎಂಬ ನಾಣ್ಣುಡಿ ಸುಮ್ಮನೆ ಹುಟ್ಟಿದ್ದಲ್ಲ. ರೈತನ ಬದುಕು ಚೇತರಿಸಿದರೆ ಆತನನ್ನು ಅವಲಂಬಿಸಿರುವ ಅದೆಷ್ಟೋ ಕುಟುಂಬಗಳ ಒಲೆ ಉರಿಯುತ್ತದೆ. ಆದರೆ, ಈ ಬಾರಿ ಮಳೆ ಕೈಕೊಟ್ಟಿದೆ. ಹೊಲಗಳು ಬಣಗುಡುತ್ತಿವೆ. ರೈತರು ಮಾತ್ರವಲ್ಲ, ರೈತನ ಬೆವರನ್ನೇ ನಂಬಿ ಬದುಕುವ ಹಮಾಲರ ಬದುಕೂ ಬರದ ಬೇಗೆಯಲ್ಲಿ ಬೆಂದುಹೋಗಿದೆ.

ಕೊಪ್ಪಳದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಕಾಲಿಟ್ಟರೆ ಈ ಸಂಕಷ್ಟದ ಕರಾಳ ಚಿತ್ರಣ ಕಣ್ಣಿಗೆ ರಾಚುತ್ತದೆ. ಮೈಮೇಲಿನ ಅಂಗಿ ತೆಗೆದು, ಹೆಗಲಿಗೆ ಟವೆಲ್ ಹಾಕಿಕೊಂಡು, ಯಾವುದಾದರೂ ಒಂದು ಲೋಡ್‌ ಬರಬಹುದೇನೋ ಎಂಬ ನಿರೀಕ್ಷೆಯಲ್ಲಿ ಹಮಾಲರು ಗುಂಪು-ಗುಂಪಾಗಿ ಕುಳಿತಿರುವ ದೃಶ್ಯ ಕಂಡುಬರುತ್ತದೆ.

ದೇಹ ಸಿದ್ಧವಿದೆ, ದುಡಿಮೆ ಸಿಗುತ್ತಿಲ್ಲ: ಸಾಮಾನ್ಯವಾಗಿ ಉತ್ತಮ ಮಳೆಯಾದರೆ ಮಾರುಕಟ್ಟೆಯಲ್ಲಿ ಚಟುವಟಿಕೆ ಗರಿಗೆದರುತ್ತದೆ. ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕಗಳ ಲೋಡ್‌ಗಳು ಬರುತ್ತವೆ. ಕೃಷಿ ಉತ್ಪನ್ನಗಳ ಲಾರಿಗಳು ಸಾಲುಗಟ್ಟಿ ನಿಲ್ಲುತ್ತವೆ. ಲೋಡ್‌ ಇಳಿಸಲು, ಸರಕು ಸಾಗಿಸಲು ಹಮಾಲರಿಗೆ ಬಿಡುವೇ ಇರುವುದಿಲ್ಲ. ಜೀವದ ಹಂಗು ತೊರೆದು ದುಡಿದು, ಸಿಕ್ಕ ಕೂಲಿಯಲ್ಲಿ ಕುಟುಂಬದ ಹೊಟ್ಟೆ ತುಂಬಿಸುತ್ತಿದ್ದರು. ಆದರೆ, ಈ ವರ್ಷ ಮಳೆಯ ಕೊರತೆಯಿಂದ ಕೃಷಿ ಉತ್ಪಾದನೆಯೇ ಕುಸಿದಿದೆ. ಪರಿಣಾಮ, ಎಪಿಎಂಸಿಗಳಲ್ಲಿ ಸರಕುಗಳ ಓಡಾಟ ಕಡಿಮೆಯಾಗಿದೆ. ಲೋಡ್‌ಗಳಿಗಾಗಿ ಹಮಾಲರು ಜಾತಕಪಕ್ಷಿಗಳಂತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಚುಕ್ಕನಕಲ್ ಗ್ರಾಮದಿಂದ ಕಳೆದ ಹತ್ತು ವರ್ಷಗಳಿಂದ ಕೊಪ್ಪಳಕ್ಕೆ ಹಮಾಲಿ ಕೆಲಸಕ್ಕಾಗಿ ಬರುತ್ತಿರುವ ಸುರೇಶ್, “ಹಳ್ಳಿಯಲ್ಲಿಯೂ ಕೆಲಸವಿಲ್ಲ. ನಗರಕ್ಕೆ ಬಂದರೆ ಹಮಾಲಿ ಸಿಗುತ್ತಿಲ್ಲ. ಮಳೆಯಿಲ್ಲದೆ ಬೆಳೆ ಇಲ್ಲ. ಬೆಳೆ ಇಲ್ಲದಿದ್ದರೆ ಮಾರುಕಟ್ಟೆಗೆ ಉತ್ಪನ್ನ ಬರುವುದಿಲ್ಲ. ನಮಗೆ ದುಡಿಮೆಯೇ ಇಲ್ಲದಂತಾಗಿದೆ” ಎಂದು ಅಳಲು ತೋಡಿಕೊಂಡರು.

ಹಮಾಲಿ ಶಂಕ್ರಪ್ಪ ಅವರ ಸಂಕಷ್ಟ ಇನ್ನಷ್ಟು ಘನಘೋರ. “ಸಾಲ ಮಾಡಿಕೊಂಡಿದ್ದೇವೆ. ದುಡಿದು ತೀರಿಸೋಣ ಎಂದರೆ ಕೆಲಸವೇ ಸಿಗುತ್ತಿಲ್ಲ. ಇಡೀ ದಿನ ಮಾರುಕಟ್ಟೆಯಲ್ಲಿ ಕಾದರೂ ₹100 ಕೂಲಿಯೂ ಸಿಗದ ದಿನಗಳಿವೆ. ಕೆಲವೊಮ್ಮೆ ಬರಿಗೈಯಲ್ಲೇ ಮನೆಗೆ ಮರಳಬೇಕಾಗುತ್ತದೆ” ಎಂದು ನೋವು ತೋಡಿಕೊಂಡರು.

ಉಪವಾಸವೇ ಗತಿ: ಹಮಾಲರು ಬೆಳ್ಳಂಬೆಳಗ್ಗೆ ಎದ್ದು ಹೆಗಲಿಗೊಂದು ಟವೆಲ್ ಹಾಕಿಕೊಂಡು ಮಾರುಕಟ್ಟೆಗೆ ಬರುತ್ತಾರೆ. ದುಡಿಮೆ ಸಿಕ್ಕ ಬಳಿಕ ಸಿಗುವ ಕೂಲಿಯಿಂದಲೇ ಬೆಳಗಿನ ಉಪಾಹಾರ ಮಾಡುವುದು ಕೆಲವರ ರೂಢಿ. ಆದರೆ, ಈಗ ದುಡಿಮೆಯೇ ಇಲ್ಲ. ಹೀಗಾಗಿ ಬೆಳಗಿನ ಉಪಾಹಾರವಿಲ್ಲದೆ ಇಡೀ ದಿನ ಮಾರುಕಟ್ಟೆಯಲ್ಲಿ ಕಾದು, ಸಂಜೆ ಬರಿಗೈಯಲ್ಲಿ, ಕೆಲವೊಮ್ಮೆ ಉಪವಾಸದಲ್ಲೇ ಮನೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರದ ಕಣ್ಣು ನಮ್ಮತ್ತಲೂ ಬೀಳಲಿ: ಬರ ಎಂದಾಕ್ಷಣ ಸರ್ಕಾರದ ಗಮನ ರೈತರತ್ತ ಹರಿಯುತ್ತದೆ. ರೈತರ ಸಂಕಷ್ಟದ ಬಗ್ಗೆ ಪರಿಹಾರ, ಬೆಳೆ ವಿಮೆ, ನೆರವು ಸೇರಿದಂತೆ ಹಲವು ಕ್ರಮಗಳ ಚರ್ಚೆಯಾಗುತ್ತದೆ. ಆದರೆ, ರೈತನನ್ನು ಅವಲಂಭಿಸಿ ಬದುಕುವ ಹಮಾಲರ ಕುಟುಂಬಗಳ ಸಂಕಷ್ಟದತ್ತಲೂ ಸರ್ಕಾರ ಗಮನಹರಿಸಬೇಕು ಎಂಬುದು ಹಮಾಲರ ಆಗ್ರಹ.

“ನಿತ್ಯ ದುಡಿದರೆ ಮಾತ್ರ ಕೂಲಿ. ಈಗ ಬರದಿಂದ ದುಡಿಮೆಯೇ ಇಲ್ಲ, ಕೂಲಿಯೂ ಇಲ್ಲ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಹಮಾಲರ ಸಂಕಷ್ಟವನ್ನೂ ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು” ಎಂದು ಹಮಾಲರು ಒತ್ತಾಯಿಸುತ್ತಾರೆ.

ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕಾರಟಗಿ ಸೇರಿದಂತೆ ವಿವಿಧ ಎಪಿಎಂಸಿಗಳಲ್ಲಿ 10 ಸಾವಿರಕ್ಕೂ ಹೆಚ್ಚು ಹಮಾಲರು ದುಡಿದು ಬದುಕುತ್ತಿದ್ದಾರೆ. ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆ ಕುಂಠಿತವಾಗಿರುವ ಪರಿಣಾಮ ಇವರ ಬದುಕಿನ ಮೇಲೂ ನೇರ ಹೊಡೆತ ಬಿದ್ದಿದೆ.ಪರಿಹಾರ ನೀಡಬೇಕು: ಬರದಿಂದ ಮಾರುಕಟ್ಟೆಗೆ ರೈತರ ಉತ್ಪನ್ನಗಳು ಬರುತ್ತಿಲ್ಲ. ಹೀಗಾಗಿ, ಹಮಾಲರಿಗೆ ದುಡಿಮೆಯೇ ಇಲ್ಲದಂತಾಗಿದೆ. ನಿತ್ಯ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಹಮಾಲರ ಸಂಕಷ್ಟವನ್ನು ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಗಾಳೆಪ್ಪ ಟಪಾಲ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಪೋಷಣೆಯೇ ಬಾಲ್ಯದ ಅಡಿಪಾಯ: ಸುಮಂಗಲ
ಸಂಸ್ಕಾರಯುತ ಸಮಾಜ ಕಟ್ಟಲು ಗಣೇಶೋತ್ಸವ ಪ್ರೇರಣೆ: ಕಾಮತ್