ಡಿಸಿ ಆಗುವ ಕನಸು ನನಸು ಮಾಡಿದ ಬಾಗಲಕೋಟೆ ಜಿಲ್ಲೆ: ಜಾನಕಿ ಕೆ.ಎಂ

KannadaprabhaNewsNetwork |  
Published : Jun 21, 2025, 12:49 AM IST
(ಫೋಟೊ20ಬಿಕೆಟಿ4, ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿಗಳಿಗೆ ಬೀಳ್ಕೊಡುಗೆ) | Kannada Prabha

ಸಾರಾಂಶ

ಬಾಲ್ಯದಲ್ಲಿ ಕಂಡಿದ್ದ ಜಿಲ್ಲಾಧಿಕಾರಿಯಾಗುವ ಕನಸನ್ನು ಬಾಗಲಕೋಟೆ ಜಿಲ್ಲೆ ಈಡೇರುವಂತೆ ಮಾಡಿದೆ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಲ್ಯದಲ್ಲಿ ಕಂಡಿದ್ದ ಜಿಲ್ಲಾಧಿಕಾರಿಯಾಗುವ ಕನಸನ್ನು ಬಾಗಲಕೋಟೆ ಜಿಲ್ಲೆ ಈಡೇರುವಂತೆ ಮಾಡಿದೆ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಕಾರ್ಯಕ್ರಮಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಾಸನ ಜಿಲ್ಲೆಯ ಒಂದು ಸಣ್ಣ ಗ್ರಾಮದಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪ್ರಾರಂಭ ಮಾಡಿ 5ನೇ ತರಗತಿಯಲ್ಲಿದ್ದಾಗ ಜಿಲ್ಲಾಧಿಕಾರಿ ಆಗುವ ಕನಸು ಕಂಡಿದ್ದೆ. ಆ ಕನಸು ಬಾಗಲಕೋಟೆಯಲ್ಲಿ ನನಸು ಆಗಿದ್ದು, ಈ ಜಿಲ್ಲೆ ನನ್ನ ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿಯುವಂತೆ ಮಾಡಿದೆ ಎಂದರು.

ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ಈ ಎರಡು ವರ್ಷಗಳ ಅವಧಿಯಲ್ಲಿ ಹೆಚ್ಚಿನ ಪ್ರೀತಿ, ವಿಶ್ವಾಸವನ್ನು ಜಿಲ್ಲೆಯ ಜನರು ಮತ್ತು ಅಧಿಕಾರಿಗಳು ನೀಡಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಕೆಲಸದ ವಿಷಯಕ್ಕೆ ನಾನು ನಿಮ್ಮಗಳ ಜೊತೆಗೆ ಜೋರಾಗಿ ಮಾತಾಡಿದ್ದೀನಿ. ಜಗಳ ಆಡಿದ್ದೀನಿ, ಆದರೆ ನನ್ನನ್ನು ದ್ವೇಷ ಮಾಡುವಂತವರು ಯಾರಿಲ್ಲ ಎಂಬ ದೃಢ ವಿಶ್ವಾಸ ನನಗಿದೆ. ಜಿಪಂ ಸಿಇಒ ಶಶಿಧರ ಕುರೇರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಈ ಇಬ್ಬರೂ ಸದಾ ನನ್ನ ತಮ್ಮಂದಿರಂತೆ ಜೊತೆಗಿದ್ದು, ಕಾರ್ಯನಿರ್ವಹಿಸಿದ್ದಾರೆ. ಇವರಿಬ್ಬರೂ ವಯಸ್ಸು, ಅನುಭವದಲ್ಲಿ ನನಗಿಂತ ಚಿಕ್ಕವರಾದರೂ ಪ್ರಜ್ಞಾವಂತಿಕೆ, ಪ್ರೌಢಿಮೆ, ಬದ್ಧತೆಯಲ್ಲಿ ಕಡಿಮೆ ಇಲ್ಲವೆಂದು ಹೇಳಿದರು.

ಎರಡು ಬಾರಿ ಅಪರ ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡಿದ ಅನುಭವವನ್ನು ನಿಕಟಪೂರ್ವ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಅವರಲ್ಲಿ ಹಂಚಿಕೊಂಡಿದ್ದೆ. ಆ ಅನುಭವ ಮಾತುಗಳಿಂದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನನ್ನಲ್ಲಿನ ಉತ್ತಮ ಗುಣಗಳಿಗೆ ಕಾರಣರಾದ ಎಲ್ಲ ಕನ್ನಡದ ಬರಹಗಾರರಿಗೆ, ಮಹಿಳಾ ಜಿಲ್ಲಾಧಿಕಾರಿಯಾಗಿ ಸಂಭ್ರಮಿಸಿದ ಜಿಲ್ಲೆಯ ಸಮಸ್ತ ಮಹಿಳೆಯರಿಗೆ ಧನ್ಯವಾದ ಹೇಳಿದರು. ಜಿಲ್ಲೆಯ ನೆನಪುಗಳು ಬದುಕಿನೂದ್ದಕ್ಕೂ ನನ್ನ ಜೊತೆಗಿರಲಿವೆ. ಜಿಲ್ಲೆ ಇನ್ನಷ್ಟು ಪ್ರಗತಿಯತ್ತ ಸಾಗಲಿ ಎಂದು ಹಾರೈಸಿದರು.

ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಸಂಗಪ್ಪ ಎಂ.ಮಾತನಾಡಿ, ನಾನು ಹುಟ್ಟಿ ಬೆಳೆದ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿರುವುದು ನನ್ನ ಭಾಗ್ಯ. ಹಿಂದಿನ ಜಿಲ್ಲಾಧಿಕಾರಿಗಳು ನಡೆಸಿಕೊಂಡ ಬಂದ ಆಡಳಿತವನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸಮಸ್ಯೆ ಹೊತ್ತು ಬಂದವರ ಜೊತೆಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವುದಲ್ಲಿ ಇರುವ ತೃಪ್ತಿ ಬೇರೆ ಯಾವುದರಲ್ಲೂ ಇಲ್ಲ ಎಂದರು.

ನಿರ್ಗಮಿತ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ತಹಸೀಲ್ದಾರ ಮಾತನಾಡಿ, ಉಪವಿಭಾಗಾಧಿಕಾರಿಯಾಗಿ ಕೆಲಸ ಮಾಡುವುದು ಮತ್ತು ಅಪರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವುದು ತುಂಬಾ ಬದಲಾವಣೆ ಇದೆ. ಬಾಗಲಕೋಟೆಯಲ್ಲಿ ಬಹಳಷ್ಟು ವಿಷಯ ಕಲಿತಿದ್ದೇನೆ. ಉತ್ತಮವಾಗಿ ಕಾರ್ಯನಿರ್ವಹಿಸಿದ ತೃಪ್ತಿ ನನಗೆ ಇದೆ. ಇಲ್ಲಿ ಕಲಿತಿರುವ ವಿಷಯ ವಸತಿ ಯೋಜನೆಯ ವ್ಯವಸ್ಥಾಪಕ ನಿದೇರ್ಶಕರ ಹುದ್ದೆ ನಿಭಾಯಿಸಲು ಅನುಕೂಲವಾಗಿದೆ ಎಂದು ಹೇಳಿ ಬಾಗಲಕೋಟೆ ಜಿಲ್ಲೆ ಕುರಿತು ಸ್ವ-ರಚಿತ ಕವನ ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಸರ್ಕಾರಿ ನೌಕರರಿಗೆ ವರ್ಗಾವಣೆ ಅನಿವಾರ್ಯ. ಆದರೆ ಆ ಅವಧಿಯಲ್ಲಿ ಮಾಡಿದ ಕಾರ್ಯವನ್ನು ಮರೆಯುವಂತಿಲ್ಲ. ಜಿಲ್ಲಾಧಿಕಾರಿಗಳನ್ನು ಹತ್ತಿರದಿಂದ ನೋಡಿದ್ದು, ಅವರಿಂದ ಸಾಕಷ್ಟು ಕಲಿತಿದ್ದೇನೆ. ಪ್ರತಿಯೊಂದು ಅಭಿವೃದ್ಧಿ ವಿಷಯದಲ್ಲಿ ಚರ್ಚೆ ಮಾಡಿ ಮುಂದುವರಿಯುತ್ತಿದ್ದೇವೆ. ಇದರಿಂದ ಎಲ್ಲ ಕೆಲಸಗಳು ಸರಾಗವಾಗಿ ನಡೆಯತ್ತಿದ್ದವು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಜವಾಬ್ದಾರಿ ಹೆಚ್ಚಾದಾಗ ಬಹಳಷ್ಟು ತಾಳ್ಮೆ ಇರಬೇಕಾಗುತ್ತದೆ. ಅಂತಹ ತಾಳ್ಮೆ ಅವರಲ್ಲಿ ಇತ್ತು. ಪ್ರತಿಯೊಂದು ಸಂದರ್ಭದಲ್ಲಿ ಸಲಹೆಗಳನ್ನು ನೀಡಿದ್ದರಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಯಿತು ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ