ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಭೂ ಕುಸಿತದ ಭೀತಿ ಎದುರಾಗಿದೆ
ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಭೂ ಕುಸಿತದ ಭೀತಿ ಎದುರಾಗಿದೆ. ಗುಡ್ಡದ ಅಂಚಿನಲ್ಲಿರುವ 8 ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಗುರುವಾರ ಮುಟ್ಟಳ್ಳಿ ಗ್ರಾಪಂನಿಂದ ಮನೆಯವರಿಗೆ ನೋಟಿಸ್ ನೀಡಲಾಯಿತು.
ಮುಟ್ಟಳ್ಳಿಯಲ್ಲಿ 2022ರಲ್ಲಿ ಸುರಿದ ಭಾರಿ ಮಳೆಗೆ ಗುಡ್ಡದ ಅಂಚಿನಲ್ಲಿ ಮನೆ ಕುಸಿದು 4 ಮಂದಿ ಮೃತಪಟ್ಟಿದ್ದರು. ಜೂ.16ರಂದು ಬೆಂಗಳೂರು ಮತ್ತು ಕಾರವಾರದಿಂದ ಪರಿಣಿತ ಭೂಮಿತಿ ಶಾಸ್ತ್ರಜ್ಞರು ಮುಟ್ಟಳ್ಳಿಗೆ ಬಂದು ಗುಡ್ಡ ಕುಸಿತದ ಸಂಭಾವ್ಯ ಪರಿಸ್ಥಿಯ ಬಗ್ಗೆ ಪರಿಶೀಲನೆ ನಡೆಸಿದ್ದರು. ಈ ತಜ್ಞರು ಜಿಎಸ್‌ಐ ವರದಿಯಂತೆ ಪ್ರಸ್ತುತ ಪ್ರದೇಶದಲ್ಲಿ ಭೂಕುಸಿತವಾಗುವ ಸಂಭವ ಇದೆ ಎಂದು ಸಲಹೆ ನೀಡಿದ್ದರು. ಜತೆಗೆ ಅಲ್ಲಿನ ಪ್ರದೇಶವೂ ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ ಎಂದು ವರದಿ ನೀಡಿದ್ದರು. ತಜ್ಞರ ವರದಿ ಆಧರಿಸಿದ ಮುಟ್ಟಳ್ಳಿ ಗ್ರಾಪಂನಿಂದ ಸುರಕ್ಷತೆ, ಕಾಳಜಿ ದೃಷ್ಟಿಯಿಂದ ಮಳೆಗಾಲ ಮುಗಿಯುವ ತನಕ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಈ ಪ್ರದೇಶದ ಮನೆಯವರಿಗೆ ನೋಟಿಸ್ ನೀಡಿ ತಿಳಿಸಲಾಗಿದೆ. ಮುಟ್ಟಳ್ಳಿ ಪಿಡಿಒ ರಾಜೇಶ್ವರಿ ಚಂದಾವರ, ನೋಡಲ್ ಅಧಿಕಾರಿ ಶ್ರವಣ ಕುಮಾರ, ಗ್ರಾಪಂ ಅಧ್ಯಕ್ಷೆ ರಜನಿ ನಾಯ್ಕ ಮತ್ತು ಅವರ ತಂಡ ಈ ಸಂದರ್ಭದಲ್ಲಿ ಇದ್ದರು.
ಕಳೆದ ಎರಡು ವರ್ಷಗಳಿಂದ ಭಾರಿ ಮಳೆಯಾಗುವ ಸಂದರ್ಭದಲ್ಲಿ ಮಾತ್ರ ನೀವು ಬಂದು ಇಲ್ಲಿಂದ ಸ್ಥಳಾಂತರಗೊಳ್ಳುವಂತೆ ನೋಟಿಸ್ ನೀಡ್ತೀರಿ. ಸುರಕ್ಷಿತ ಸ್ಥಳ ಯಾವುದು? ನಾವು ಎಲ್ಲಿ ಹೋಗಬೇಕು? ಏನು ಮಡಬೇಕು ಎಂದು ನೀವು ನೋಟಿಸ್‌ನಲ್ಲಿ, ಮತ್ತೆ ಮೌಖಿಕವಾಗಿಯೂ ತಿಳಿಸಿಲ್ಲ. ಈಗ ಏಕಾಏಕಿ ನಾವು ಇಲ್ಲಿಂದ ಎಲ್ಲಿಗೆ ತೆರಳಬೇಕು? ಲಕ್ಷಗಟ್ಟಲೇ ಹಣ ಖರ್ಚು ಮಾಡಿ ನಿರ್ಮಿಸಿದ ಮನೆಯನ್ನು ಏನು ಮಾಡಬೇಕು? ಪರ್ಯಾಯವಾಗಿ ವ್ಯವಸ್ಥೆ ಕಲ್ಪಿಸದೇ ಅಪಾಯ ಇದೆ. ಇಲ್ಲಿಂದ ತೆರಳಿ ಎಂದರೆ ಹೇಗೆ ನಮ್ಮ ಕಥೆ ಏನು? ಎಂದು ನೋಟಿಸ್ ನೀಡಲು ಬಂದ ಅಧಿಕಾರಿಗಳ ಎದುರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮಳೆಗಾಲದ ಮೊದಲೇ ಈ ಕುರಿತು ಚರ್ಚೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿತ್ತು ಎನ್ನುವ ಅಭಿಪ್ರಾಯ ಕೂಡ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಮುಟ್ಟಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶೇಷಗಿರಿ ನಾಯ್ಕ, ಸದಸ್ಯೆ ಲಕ್ಷ್ಮೀ ನಾಯ್ಕ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.