ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪ್ರಗತಿಪರ ರೈತ ಮಹಾಲಿಂಗಪ್ಪ ಇಟ್ನಾಳ ಅವರು ಜೋಳದ ದಂಟಿನಿಂದ ಬೆಲ್ಲ ತಯಾರಿಸುವ ಮೂಲಕ ವಿಶಿಷ್ಟ ಸಾಧನೆಗೈದಿದ್ದಾರೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬಾಗಲಕೋಟೆ ಜಿಲ್ಲೆಯ ರೈತ ಮಾಹಿತಿ ನೀಡಿದರು. ಪರಂಪರಾಗತವಾಗಿ ಕಬ್ಬಿನಿಂದ ಬೆಲ್ಲ ತಯಾರಿಸಲಾಗುತ್ತಿತ್ತು. ಪ್ರಪ್ರಥಮ ಬಾರಿಗೆ ಸಿಹಿ ಜೋಳದ ದಂಟಿನಿಂದ ಬೆಲ್ಲ ತಯಾರಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದೇನೆ ಎಂದರು. ಇಷ್ಟು ದಿನ ರೈತರು ತಮ್ಮ ಜಾನುವಾರುಗಳಿಗೆ ಅಗತ್ಯವಾದ ಜೋಳದ ದಂಟನ್ನು ಇಟ್ಟುಕೊಂಡು ಉಳಿದದ್ದನ್ನು ಮಾರಾಟ ಮಾಡುತ್ತಿದ್ದರು. ಇಲ್ಲವೇ, ಸುಟ್ಟು ಹಾಕುತ್ತಿದ್ದರು, ಆದರೆ, ಇದೀಗ ಜೋಳ ಬೆಳೆದ 120 ದಿನಗಳ ಒಳಗಾಗಿ ಕಟಾವು ಮಾಡಿ ಕೊಟ್ಟರೆ ಪ್ರತಿ ಟನ್‌ಗೆ ₹3,000 ಲಾಭ ಗಳಿಸಬಹುದಾಗಿದೆ ಎಂದರು.
ಈಗಾಗಲೇ ಜೋಳದ ದಂಟಿನಿಂದ ತಯಾರಿಸಿದ ಬೆಲ್ಲವನ್ನು ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಕಬ್ಬಿನ ಬೆಲ್ಲಕ್ಕಿಂತ ಜೋಳದಿಂದ ತಯಾರಿಸಿದ ಬೆಲ್ಲ ಉತ್ತಮ ಎಂಬುದು ಸಾಬೀತಾಗಿದೆ. ಇತ್ತೀಚೆಗೆ ಅಭಿವೃದ್ಧಿಗೊಂಡಿರುವ ಹೊಸ ತಳಿಯ ಸಿಹಿ ಜೋಳಗಳಲ್ಲಿ ಕಡ್ಡಿಯ ಗಾತ್ರ ದೊಡ್ಡದಾಗಿದ್ದು, ಸಿಹಿಯ ಅಂಶವೂ ಹೆಚ್ಚಾಗಿದೆ. ಇದೇ ವೈಶಿಷ್ಟ್ಯವನ್ನು ಗಮನಿಸಿ, ಕಬ್ಬಿನಿಂದ ಬೆಲ್ಲ ತಯಾರಿಸುವ ವಿಧಾನವನ್ನು ಅಳವಡಿಸಿಕೊಂಡು ಜೋಳದ ದಂಟಿನಿಂದ ಬೆಲ್ಲ ತಯಾರಿಕೆಯಲ್ಲಿ ಯಶಸ್ವಿ ಆಗಿರುವುದಾಗಿ ತಿಳಿಸಿದರು.ಅ.8ರಂದು ಕೃಷಿ ವಿಜ್ಞಾನಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಜೋಳದ ದಂಟಿನಿಂದ ರಸ ತೆಗೆದು ಬೆಲ್ಲ ತಯಾರಿಸುವ ಮೂಲಕ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಗುವುದು. ಕಬ್ಬಿಗೆ ಹೋಲಿಸಿದರೆ ಜೋಳದ ದಂಟಿನಿಂದ ತಯಾರಿಸಿದ ಬೆಲ್ಲ ಶೇ.70ರಷ್ಟು ಸಿಹಿಯಾಗಿದೆ. ಈ ವೇಳೆ ಬೆಲ್ಲವನ್ನು ಹೆಚ್ಚಿನ ದಿನ ಸಂಗ್ರಹಿಸುವ ನಿಟ್ಟಿನಲ್ಲಿ ಕೃಷಿ ವಿವಿಯ ತಜ್ಞರಿಂದ ಸಲಹೆ ಪಡೆದು ಆ ನಿಟ್ಟಿನಲ್ಲಿ ಪ್ಯಾಕಿಂಗ್ ಮತ್ತು ಮಾರಾಟ, ಬೆಲೆ ನಿಗದಿ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ವಿವರಿಸಿದರು.