ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿದ್ಯಾರ್ಥಿಗಳು ಕಷ್ಟಗಳಿಗೆ ಹೆದರದೆ, ತಮ್ಮಲ್ಲಿರುವ ಪ್ರತಿಭೆ, ಆಸಕ್ತಿ ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಸಾಗಿದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿಯ ಪದನಿಮಿತ್ತ ಕಾರ್ಯದರ್ಶಿಗಳು ಹಾಗೂ ರಾಮದುರ್ಗ ಸ್ಟೇಟ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕೆ.ಎಚ್. ಹೊಸೂರ ಹೇಳಿದರು.ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ 2023-24ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮ ಕುರಿತು ಮಾತನಾಡಿದರು. ಪರೀಕ್ಷೆಗಳು ಭಯದ ವಾತಾವತಣ ನಿರ್ಮಿಸಬಾರದು ಅದು ಒಂದು ಸಂಭ್ರಮವಾಗಲಿ. ಮಾನವೀಯ ಮೌಲ್ಯಗಳೊಂದಿಗೆ ಬೆಸೆಯಲು ಕಲಿಯಿರಿ. ಆಧುನಿಕ ಯುಗದಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಅತ್ಯಂತ ಮಹತ್ವಪೂರ್ಣವಾಗಿದ್ದು, ವಿದ್ಯಾರ್ಥಿಗಳು ಅವುಗಳನ್ನು ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳಲ್ಲಿ ಯಶಸ್ಸು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಂದಿಲ್ಲೊಂದು ವಿಶಿಷ್ಟವಾದ ಪ್ರತಿಭೆ ಇದ್ದೇ ಇರುತ್ತದೆ. ತಮ್ಮಲ್ಲಿರುವ ಶಕ್ತಿ, ಸಾಮರ್ಥ್ಯ, ಜ್ಞಾನ ಬಳಸಿಕೊಂಡು ಅಗಾಧ ಸಾಧನೆ ಮಾಡಬಹುದು. ಕಠಿಣ ಪರಿಶ್ರಮ ನಮ್ಮನ್ನು ಅತ್ಯುನ್ನತ ಸ್ಥಾನ ಅಲಂಕರಿಸುವಂತೆ ಮಾಡುತ್ತದೆ ಎಂದರು.
ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಧಿಸಿಯೇ ತಿರುತ್ತೇನೆ ಎಂಬ ಗುರಿಯಿರಬೇಕು. ಕಾರ್ಯ ಶ್ರದ್ಧೆ ನಮ್ಮನ್ನು ನಿರಂತರವಾಗಿ ಎಚ್ಚರಿಸುವಂತೆಯಿರಬೇಕು. ಮುಂದೆ ಬರುವ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಆದರ್ಶವಾಗಿರಬೇಕು. ಕಲಿತ ಕಾಲೇಜು, ಸಂಘ, ಶಿಕ್ಷಕರನ್ನು ಯಾವತ್ತು ಮರೆಯಬಾರದು. ಸಾಧನೆಗೈದು ಉತ್ತಮ ವಿದ್ಯಾರ್ಥಿಗಳಾಗಿ. ನೈತಿಕ ಗುಣಗಳನ್ನು ಇಟ್ಟುಕೊಂಡು ಪಾಲಕರನ್ನು ನೋಡಿಕೊಳ್ಳಿ ಎಂದರು.ಕಾರ್ಯಕ್ರಮದಲ್ಲಿ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎಂ. ಗಾಂವಕಾರ, ಬಸವೇಶ್ವರ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಎಚ್. ಬೇವಿನಹಳ್ಳಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಬಿ.ಎಸ್. ಲೋಕಾಪುರ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳಾದ ಡಾ.ಆರ್. ಗಿರೀಶ, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕರಾದ ಎ.ಎ. ಬಾಗಲಕೋಟ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.