ಗಣರಾಜ್ಯೋತ್ಸವಕ್ಕೆ ಮಾಣೆಕ್‌ ಶಾ ಮೈದಾನ ಸಿದ್ಧ; ನಾಳೆ ಬೆಳಗ್ಗೆ ರಾಜ್ಯಪಾಲರಿಂದ ಧ್ವಜಾರೋಹಣ

KannadaprabhaNewsNetwork | Published : Jan 25, 2024 2:03 AM

ಸಾರಾಂಶ

ಗಣರಾಜ್ಯೋತ್ಸವಕ್ಕೆ ಮಾಣೆಕ್‌ ಶಾ ಮೈದಾನ ಸಿದ್ಧ; ನಾಳೆ ಬೆಳಗ್ಗೆ ರಾಜ್ಯಪಾಲರಿಂದ ಧ್ವಜಾರೋಹಣ. 38 ತುಕಡಿಗಳಿಂದ ಕವಾಯತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ: ತುಷಾರ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ಗಣರಾಜ್ಯೋತ್ಸವ ಆಚರಣೆಗಾಗಿ ನಗರದ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜ.26ರಂದು ಬೆಳಗ್ಗೆ 9ಕ್ಕೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, 75ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲು ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜ.26ರಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಉಪಸ್ಥಿತಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಗಳು ಜರುಗಲಿವೆ. ಬೆಳಗ್ಗೆ 9ಕ್ಕೆ ಧ್ವಜಾರೋಹಣ ನೆರವೇರಲಿದ್ದು, ನಂತರ ರಾಜ್ಯಪಾಲರು ರಾಜ್ಯದ ಜನರಿಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ. ಬಳಿಕ ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಗಣರಾಜ್ಯೋತ್ಸವ ಕವಾಯತಿನಲ್ಲಿ ಕೆಎಸ್‌ಆರ್‌ಪಿ, ಸಿಐಎಆರ್‌, ಕೇರಳ ಪೊಲೀಸ್‌ ತಂಡ, ರಾಜ್ಯ ಪೊಲೀಸ್‌ ತಂಡ ಸೇರಿದಂತೆ ಒಟ್ಟು 38 ತುಕಡಿಗಳು ಪಾಲ್ಗೊಳ್ಳುತ್ತಿವೆ. ಒಟ್ಟು 1,150 ಮಂದಿ ಕವಾಯತಿನಲ್ಲಿ ಪಾಳ್ಗೊಳ್ಳುತ್ತಿದ್ದಾರೆ. ಅದಾದ ನಂತರ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಗ್ಗನಹಳ್ಳಿಯ ಕರ್ನಾಟಕ ಪಬ್ಲಿಕ್‌ ಶಾಲೆ, ಪಿಳ್ಳಣ್ಣ ಗಾರ್ಡನ್‌ನ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ ಪ್ರದರ್ಶನ ಇರಲಿದೆ. ಕಲರಿಪಯಟ್ಟು, ದ್ವಿಚಕ್ರ ವಾಹನ ಸಾಹನ ಪ್ರದರ್ಶನವಿರಲಿದೆ. ಅದರೊಂದಿಗೆ ಭಯೋತ್ಪಾದಕರನ್ನು ಸದೆಬಡಿಯುವ ಕಾರ್ಯಾಚರಣೆಯ ಪ್ರದರ್ಶನ ಮಾಡಲಾಗುತ್ತದೆ ಎಂದರು.

7 ಸಾವಿರ ಆಸನಗಳ ವ್ಯವಸ್ಥೆ:

ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಣೆಗೆ ಬರುವವರಿಗಾಗಿ 7 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಅತಿಗಣ್ಯ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‌ಎಫ್‌ ಅಧಿಕಾರಿಗಳಿಗಾಗಿ 4 ಸಾವಿರ ಹಾಗೂ ಸಾರ್ವಜನಿಕರಿಗಾಗಿ 3 ಸಾವಿರ ಆಸನ ಕಾಯ್ದಿರಿಸಲಾಗುತ್ತಿದೆ. ಅಲ್ಲದೆ, ಆಹ್ವಾನ ಪತ್ರಿಕೆ ಇರುವವರಿಗೆ ಮಾತ್ರ ಮಾಣೆಕ್‌ ಶಾ ಪರೇಡ್ ಮೈದಾನ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

ಭದ್ರತೆಗೆ 1 ಸಾವಿರಕ್ಕೂ ಹೆಚ್ಚಿನ ಪೊಲೀಸರು:

ಗಣರಾಜ್ಯೋತ್ಸವದ ಅಂಗವಾಗಿ ಮಾಣೆಕ್‌ ಶಾ ಪರೇಡ್‌ ಮೈದಾನ ಹಾಗೂ ಸುತ್ತಮುತ್ತ ಕಳೆದ 15 ದಿನಗಳಿಂದ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಗಣರಾಜ್ಯೋತ್ಸವ ದಿನದಂದು ಭದ್ರತೆಗಾಗಿ 9 ಡಿಸಿಪಿ, 16 ಎಸಿಪಿ, 46 ಇನ್‌ಸ್ಪೆಕ್ಟರ್, 109 ಪಿಎಸ್‌ಐ ಸೇರಿದಂತೆ 1 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಅದರ ಜತೆಗೆ ಪ್ರತಿಯೊಂದನ್ನೂ ಚಿತ್ರೀಕರಿಸಲು 56 ಕ್ಯಾಮೆರಾ ಸಿಬ್ಬಂದಿ ನೇಮಿಸಲಾಗುತ್ತಿದೆ. ಪರೇಡ್ ಮೈದಾನ ಹಾಗೂ ಸುತ್ತಮುತ್ತ 100 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್ ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಇದ್ದರು.

ವಾಹನ ಸಂಚಾರ ಮಾರ್ಗ ಬದಲಾಣೆ:

ಜ.26ರ ಬೆಳಗ್ಗೆ 8.30ರಿಂದ 10.30ರವರೆಗೆ ಕಬ್ಬನ್‌ ರಸ್ತೆ, ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ವಾಹನ ನಿಲುಗಡೆ ನಿಷಿದ್ಧ:

ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್‌ ನಿಲ್ದಾಣದವರೆಗೆ, ಕಬ್ಬನ್ ರಸ್ತೆ, ಸಿಟಿಒ ವೃತ್ತದಿಂದ ಕೆಆರ್ ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ, ಎಂಜಿ ರಸ್ತೆ, ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಈ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ:

ತಂಬಾಕು ಉತ್ಪನ್ನ, ಬೆಂಕಿ ಪೆಟ್ಟಿಗೆ, ಕರಪತ್ರ, ಬಣ್ಣದ ದ್ರಾವಣ, ನೀರಿನ ಬಾಟಲ್‌ಗಳು, ಹರಿತವಾದ ವಸ್ತು, ಚಾಕು, ಕಪ್ಪು ಕರವಸ್ತ್ರ, ತಿಂಡಿ-ತಿನಿಸು, ಸ್ಪೋಟಕ ವಸ್ತುಗಳು, ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದು ನಿಷಿದ್ಧ.

3 ದಿನಗಳಿಂದ ಪೂರ್ವಾಭ್ಯಾಸ:

ಗಣರಾಜ್ಯೋತ್ಸವ ದಿನದಂದು ನಡೆಯಲಿರುವ ಕಾರ್ಯಕ್ರಮಗಳ ಕುರಿತು ಕಳೆದ ಸೋಮವಾರದಿಂದ ಪೂರ್ವಾಭ್ಯಾಸ ನಡೆಸಲಾಗುತ್ತಿದೆ. ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ, ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯಾವುದೇ ಲೋಪ ಉಂಟಾಗ ಬಾರದು ಎಂಬ ಕಾರಣಕ್ಕಾಗಿ ಪೂರ್ವಾಭ್ಯಾಸ ಮಾಡಲಾಗಿದೆ.

Share this article